ಹಗರಿಬೊಮ್ಮನಹಳ್ಳಿ: ‘ಹಿರಿಯರ ತ್ಯಾಗ ಮತ್ತು ಬಲಿದಾನದಿಂದ ಸ್ವಾತಂತ್ರ್ಯ ದೊರಕಿದೆ, ನಾವು ಅವರಿಗೆ ಸದಾ ಋಣಿಯಾಗಿರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಹೇಳಿದರು.
ಪಟ್ಟಣದಲ್ಲಿ ಶಿಕ್ಷಣ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ರಾಷ್ಟ್ರಧ್ವಜದೊಂದಿಗೆ ಮ್ಯಾರಾಥಾನ್ ನಡಿಗೆ’ಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರರನ್ನು ಸದಾ ಸ್ಮರಿಸಬೇಕು, ಅವರು ತಮ್ಮ ಬದುಕನ್ನು ಅರ್ಪಿಸಿ ಪರಕೀಯರ ದಾಸ್ಯದಿಂದ ಮುಕ್ತಿಗೊಳಿಸಿದ್ದಾರೆ. ಈಗ ಎಲ್ಲರೂ ಕ್ಷೇಮದಿಂದ ಸ್ವತಂತ್ರ ಭಾರತದಲ್ಲಿರುವುದಕ್ಕೆ ಅವರ ಕೆಚ್ಚೆದೆಯ ಹೋರಾಟ ಕಾರಣ ಎಂದರು.
ನಿವೃತ್ತ ಸೈನಿಕ ಎನ್.ಗುರುಬಸವರಾಜ ಮಾತನಾಡಿ, ರಾಷ್ಟ್ರಭಕ್ತಿ ಎನ್ನುವುದು ಎಲ್ಲರ ಮನಸ್ಸಿನಲ್ಲಿ ಮೇಳೈಸಬೇಕು, ಕೇವಲ ಮಾತನಾಡಿದರೆ ಸಾಲದು, ಅದರಂತೆ ನಡೆದುಕೊಳ್ಳಬೇಕು ಎಂದರು.
ಬಿಇಒ ಕಚೇರಿಯಿಂದ ಆರಂಭಗೊಂಡ ಮ್ಯಾರಾಥಾನ್ ನಡಿಗೆ ಬಸವೇಶ್ವರ ಬಜಾರ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕೂಡ್ಲಿಗಿ ರಸ್ತೆ, ಎಂ.ವೈ.ಘೋರ್ಪಡೆ ಶಾಲೆ ರಸ್ತೆ, ಸೋನಿಯಾಗಾಂಧಿನಗರ, ಶಿಕ್ಷಕರ ಕಾಲೊನಿ, ನೇತಾಜಿ ರಸ್ತೆ, ಕೊಟ್ಟೂರು ವೃತ್ತದ ಮೂಲಕ ಮರಳಿ ಬಿಇಒ ಕಚೇರಿಗೆ ತೆರಳಿತು.
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷ ಎಚ್.ಸೋಮಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕ ಕೃಷ್ಣನಾಯ್ಕ, ಶಿಕ್ಷಣ ಸಂಯೋಜಕರಾದ ಗುರುಬಸವರಾಜ, ಶಿವಲಿಂಗಸ್ವಾಮಿ, ಶಿಕ್ಷಕರಾದ ರವಿಚಂದ್ರ ನಾಯ್ಕ, ಮುಸ್ತಾಕ್ ಅಹ್ಮದ್, ಸಿದ್ದಲಿಂಗಸ್ವಾಮಿ, ಟಿ.ಸೋಮಶೇಖರ್, ಹುಸೇನ್ ಸಾಹೇಬ್, ಎಚ್.ಕೊಟ್ರಪ್ಪ, ಸೋಮನಗೌಡ ಇದ್ದರು.