ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಮೇಯರ್ ಚುನಾವಣೆ- ಮೂಡದ ಒಮ್ಮತ

Published 6 ಜನವರಿ 2024, 16:02 IST
Last Updated 6 ಜನವರಿ 2024, 16:02 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ ಮಹಾನಗರಪಾಲಿಕೆಯ ಮೂರು ತಿಂಗಳ ‘ಸುಲ್ತಾನ'ರ (ಮೇಯರ್) ಆಯ್ಕೆ ಕಗ್ಗಂಟಿಗೆ ಪರಿಹಾರ ಕಂಡುಹಿಡಿಯಲು ಕಾಂಗ್ರೆಸ್ ಮುಖಂಡರು ಇನ್ನು ಕಸರತ್ತು ನಡೆಸುತ್ತಿದ್ದು, ಶನಿವಾರವೂ ವ್ಯಕ್ತಿಗತ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಮುಂದುವರಿಸಿದರು.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇಲೆ ನಗರಕ್ಕೆ ಬಂದಿರುವ ವೀಕ್ಷಕರಾದ ಎಚ್.ಎಂ. ರೇವಣ್ಣ ಹಾಗೂ ಆರ್.ವಿ. ವೆಂಕಟೇಶ್ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಪಾಲಿಕೆ ಸದಸ್ಯರನ್ನು ಭೇಟಿ ಮಾಡಿದ್ದರು.

ಇದೇ 10ರಂದು ಬೆಳಿಗ್ಗೆ 11ಕ್ಕೆ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಆಯ್ಕೆ ನಡೆಯಲಿದ್ದು, ಅಷ್ಟರೊಳಗೆ ವೀಕ್ಷಕರು ಪಾಲಿಕೆ ಸದಸ್ಯರ ವ್ಯಕ್ತಿಗತ ಅಭಿಪ್ರಾಯದ ಆಧಾರದಲ್ಲಿ ವರದಿ ಸಿದ್ಧಪಡಿಸಿ ಕೆಪಿಸಿಸಿ ಅಧ್ಯಕ್ಷರಿಗೆ ಕೊಡಲಿದ್ದಾರೆ. ವರದಿ ಆಧರಿಸಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರಂಭವಾದ ಪಾಲಿಕೆ ಸದಸ್ಯರ ಸಭೆಯಲ್ಲಿ ಮಾತನಾಡಿದ ರೇವಣ್ಣ ಮತ್ತು ವೆಂಕಟೇಶ್, ‘ರಾಜಕೀಯ ಪಕ್ಷಗಳಲ್ಲಿ ವಿಭಿನ್ನ ಅಭಿಪ್ರಾಯ ಇರುವುದು ಸಹಜ. ಆದರೆ, ಅದು ಪಕ್ಷದ ಸಂಘಟನೆ, ಬೆಳವಣಿಗೆ ಮೇಲೆ ಪರಿಣಾಮ ಬೀರಬಾರದು. ಒಗ್ಗಟ್ಟನ್ನು ಕಾಯ್ದುಕೊಂಡು ಪಕ್ಷ ಬಲಪಡಿಸಬೇಕೆಂದು ಮನವಿ ಮಾಡಿದರು’ ಎಂದು ಮೂಲಗಳು ತಿಳಿಸಿವೆ.

‘ನಿಮ್ಮ ಅಭಿಪ್ರಾಯವನ್ನು ನಾವು ಹೈಕಮಾಂಡ್‍ಗೆ ತಲುಪಿಸುತ್ತೇವೆ. ಅದರ ಆಧಾರದ ಮೇಲೆ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿರಬೇಕು ಎಂದು ವೀಕ್ಷಕರು ಮನವಿ ಮಾಡಿದರು’ ಎಂದೂ ಮೂಲಗಳು ಹೇಳಿವೆ. ಸಚಿವ ನಾಗೇಂದ್ರ, ಶಾಸಕ ಭರತ್‍ರೆಡ್ಡಿ, ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಸಭೆಯಲ್ಲಿ ಭಾಗವಹಿಸಿದ್ದರು.

ಮೇಯರ್ ಚುನಾವಣೆ ಕಣದಲ್ಲಿ ಬಿ. ಶ್ವೇತಾ, ಕುಬೇರ ಹಾಗೂ ಮಿಂಚು ಶ್ರೀನಿವಾಸ್ ಅವರಿದ್ದಾರೆ. ಶ್ವೇತಾ ಅವರನ್ನು ಸಚಿವ ಬಿ. ನಾಗೇಂದ್ರ, ಮಿಂಚು ಅವರನ್ನು ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಸುತ್ತಿದ್ದಾರೆ. ಮಿಂಚು ಹಾಗೂ ಕುಬೇರ ಖಾಸಾ ಅಣ್ಣತಮ್ಮಂದಿರು. ಶ್ವೇತಾ ಮತ್ತು ಶ್ರೀನಿವಾಸ್ ಅವರ ನಡುವಿನ ತಿಕ್ಕಾಟದಲ್ಲಿ ಕುಬೇರ `ಡಾರ್ಕ್ ಹಾರ್ಸ್' ಆಗಿ ಹೊರಹೊಮ್ಮುವರೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಪಾಲಿಕೆಯ ಒಟ್ಟು ಸದಸ್ಯರ ಸಂಖ್ಯೆ 39. ಇದರಲ್ಲಿ ಕಾಂಗ್ರೆಸ್‍ನ 21 ಮತ್ತು ಬಿಜೆಪಿಯ 13 ಸದಸ್ಯರಿದ್ದಾರೆ. ಪಕ್ಷೇತರರಾಗಿ ಆಯ್ಕೆಯಾಗಿದ್ದ ಐವರು ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದಾರೆ. ಇದಲ್ಲದೆ, ವಿಧಾನಸಭೆಯ ಮೂವರು ಮತ್ತು ಸಂಸತ್ತಿನ ಇಬ್ಬರು ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ.

2023ರ ಮಾರ್ಚ್ ತಿಂಗಳಲ್ಲಿ ಮೇಯರ್ ಚುನಾವಣೆ ನಡೆದಾಗ ಡಿ.ತ್ರಿವೇಣಿ ಅವರನ್ನು ಕೇವಲ ಆರು ತಿಂಗಳ ಅವಧಿಗೆ ಆಯ್ಕೆ ಮಾಡಲಾಗಿತ್ತು. ಇದಕ್ಕೂ ಮೊದಲು ಒಂದು ವರ್ಷ ರಾಜೇಶ್ವರಿ ಸುಬ್ಬರಾಯಿಡು ಮೇಯರ್ ಆಗಿದ್ದರು. ಪೂರ್ವ ಷರತ್ತಿನಂತೆ ನವೆಂಬರ್ 4ರಂದು ಮೇಯರ್ ಹುದ್ದೆಗೆ ತ್ರಿವೇಣಿ ರಾಜೀನಾಮೆ ನೀಡಿದರು.

ರಾಜೀನಾಮೆಯಿಂದ ಖಾಲಿಯಾದ ಸ್ಥಾನಕ್ಕೆ ನವೆಂಬರ್ 19ಕ್ಕೆ ಚುನಾವಣೆ ನಿಗದಿಪಡಿಸಲಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ಸಾಧ್ಯವಿಲ್ಲ ಎನ್ನುವ ವಾತಾವರಣ ಸೃಷ್ಟಿಯಾಯಿತು. ಕಾಂಗ್ರೆಸ್ ಒಡಕಿನ ಲಾಭ ಪಡೆಯಲು ಯತ್ನಿಸುತ್ತಿದ್ದ ಬಿಜೆಪಿ ಮಿಂಚು ಶ್ರೀನಿವಾಸ್ ಅವರನ್ನು ಬೆಂಬಲಿಸಲು ಒಳಗೊಳಗೆ ತಂತ್ರ ರೂಪಿಸಿತು. ಈ ಬಗ್ಗೆ ಸುಳಿವು ಸಿಕ್ಕ ತಕ್ಷಣ ಮೇಯರ್ ಚುನಾವಣೆ ಮುಂದೂಡಿಸಲಾಯಿತು.

ಮುಂದೂಡಿದ ಚುನಾವಣೆಯನ್ನು ನವೆಂಬರ್ 28ಕ್ಕೆ ನಿಗದಿಪಡಿಸಲಾಯಿತು. ಆದರೂ ಕಾಂಗ್ರೆಸ್ ಸದಸ್ಯರಲ್ಲಿ ಒಮ್ಮತ ಮೂಡಲಿಲ್ಲ. ಆ ಸಮಯದಲ್ಲಿ ಬಳ್ಳಾರಿಯ ಕೆಲ ಸ್ಥಳಗಳಲ್ಲಿ ಎನ್‍ಐಎ ನಡೆಸಿದ ದಾಳಿಯನ್ನು ನೆಪವಾಗಿಟ್ಟುಕೊಂಡು ಚುನಾವಣೆ ರದ್ದುಪಡಿಸಲಾಯಿತು. ಇದರಿಂದ ಜಿಲ್ಲಾಡಳಿತ ಒಂದು ರೀತಿ ಮುಜುಗರ ಅನುಭವಿಸಿತು. ದೇಶದ ಎಲ್ಲೂ ಎನ್‍ಐಎ ದಾಳಿ ಕಾರಣ ನೀಡಿ ಚುನಾವಣೆ ಮುಂದೂಡಿದ ಉದಾಹರಣೆ ಇಲ್ಲ. ಆದರೆ, ಬಳ್ಳಾರಿ ಇಂಥದೊಂದು ಸಂಪ್ರದಾಯ ಹುಟ್ಟುಹಾಕಿತು ಎಂಬ ಟೀಕೆಗಳು ಎಲ್ಲೆಡೆ ವ್ಯಕ್ತವಾಯಿತು.

ಅಂತಿಮವಾಗಿ ಮೇಯರ್ ಚುನಾವಣೆ ಈ ತಿಂಗಳ 10ರಂದು ನಡೆಯುವ ಸಾಧ್ಯತೆಯಿದೆ. ಮೂರು ತಿಂಗಳ ಸುಲ್ತಾನ(ಳ) ಯೋಗ ಯಾರಿಗೆ ಒಲಿಯುವುದೋ? ಕಾಂಗ್ರೆಸ್ ಹೈಕಮಾಂಡ್ ಕಳಿಸುವ ಕವರ್‍ನಲ್ಲಿ ಯಾರ ಹೆಸರಿರುವುದೋ? ಕಾದು ನೋಡಬೇಕು.

ಕಾಂಗ್ರೆಸ್ ವೀಕ್ಷಕರು ಮೇಯರ್ ಚುನಾವಣೆ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ಬಂದಿರುವ ಹೊಟೇಲ್‍ನಲ್ಲಿ ತಮ್ಮ ಅಭಿಪ್ರಾಯ ಹೇಳಲು ಹೊರಗೆ ಕಾದು ನಿಂತಿರುವ ಪಾಲಿಕೆ ಸದಸ್ಯರು
ಕಾಂಗ್ರೆಸ್ ವೀಕ್ಷಕರು ಮೇಯರ್ ಚುನಾವಣೆ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ಬಂದಿರುವ ಹೊಟೇಲ್‍ನಲ್ಲಿ ತಮ್ಮ ಅಭಿಪ್ರಾಯ ಹೇಳಲು ಹೊರಗೆ ಕಾದು ನಿಂತಿರುವ ಪಾಲಿಕೆ ಸದಸ್ಯರು

ಮಿಂಚು ಹೆಸರು ಮುನ್ನಲೆಗೆ?

ಕಾಂಗ್ರೆಸ್ ವೀಕ್ಷಕರಾದ ರೇವಣ್ಣ ವೆಂಕಟೇಶ್ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಲು ಎರಡನೇ ಸಲ ನಗರಕ್ಕೆ ಬಂದಿದ್ದು ಶ್ವೇತಾ ಅವರನ್ನು ವಿರೋಧಿಸುತ್ತಿರುವ ಕಾಂಗ್ರೆಸ್‍ನ ಎಂಟು ಸದಸ್ಯರು ಹಾಗೂ ಮೂವರು ಪಕ್ಷೇತರ ಸದಸ್ಯರು ಮಿಂಚು ಶ್ರೀನಿವಾಸ್ ಅವರ ಹೆಸರನ್ನೇ ಹೇಳಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಅನೇಕರು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧವಿರುವುದಾಗಿ ಹೇಳಿದ್ದಾರೆ. ಮೂರ್ನಾಲ್ಕು ಸದಸ್ಯರು ಕುಬೇರ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ಹೇಳಿವೆ. ‘ನಮ್ಮ ಜತೆ ಇನ್ನೂ ನಾಲ್ವರು ಸದಸ್ಯರಿದ್ದಾರೆ. ಭಯದಿಂದ ಅವರು ಬಹಿರಂಗವಾಗಿ ಹೊರಗೆ ಬರುತ್ತಿಲ್ಲ. ಪಾಲಿಕೆ ಮೇಯರ್ ಆಯ್ಕೆಯನ್ನು ಪ್ರಜಾಸತ್ತಾತ್ಮಕ ವಿಧಾನದಲ್ಲಿ ಮಾಡಬೇಕು ಎಂಬ ಅಭಿಪ್ರಾಯ ಮಂಡಿಸಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT