ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಸಚಿವ ನಾಗೇಂದ್ರ ರಾಜೀನಾಮೆ; ನಿರೀಕ್ಷೆಗಳು ಹುಸಿ

ಜಿಲ್ಲೆಯ ಅಭಿವೃದ್ಧಿ, ಜನರ ಬೇಡಿಕೆಗಳ ಈಡೇರಿಕೆಗೆ ಅಡ್ಡಿ
Published 7 ಜೂನ್ 2024, 7:00 IST
Last Updated 7 ಜೂನ್ 2024, 7:00 IST
ಅಕ್ಷರ ಗಾತ್ರ

ಬಳ್ಳಾರಿ: ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆಗಳ ಹೊಣೆಗಾರಿಕೆಯೊಂದಿಗೆ, ಬಳ್ಳಾರಿಯ ಉಸ್ತುವಾರಿ ಸಚಿವರಾಗಿದ್ದ ಬಿ. ನಾಗೇಂದ್ರ ಅವರು ಮಂತ್ರಿ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.  

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ, ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣವು ನಾಗೇಂದ್ರ ಅವರ ಸ್ಥಾನ ಕಸಿದುಕೊಂಡಿದೆ. 

ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ, ಬಿಜೆಪಿಯ ಬಿ. ಶ್ರೀರಾಮುಲು ಅವರ ವಿರುದ್ಧ 25 ಸಾವಿರಕ್ಕೂ ಅಧಿಕ ಮತಗಳ ಜಯ ಸಾಧಿಸಿದ್ದ ನಾಗೇಂದ್ರ ಅವರು 2023ರ ಮೇ 27ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಜಿಲ್ಲೆಯ ಅಭಿವೃದ್ಧಿಗೆ ವೇಗ ಸಿಗುವ ನಿರೀಕ್ಷೆಗಳಿದ್ದವು. ಆದರೆ, ನಿರೀಕ್ಷೆ ಹುಸಿಯಾಗಿದೆ.

ಚಾಗನೂರು ವಿಮಾನ ನಿಲ್ದಾಣ, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ನವೋದಯ ಶಾಲೆ, ಮಹಿಳಾ ಕಾಲೇಜು, ₹125 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ, ಸಂಗನಕಲ್ಲು ಪ್ರಾಗೈತಿಹಾಸಿಕ ನೆಲಗಳನ್ನು ರಕ್ಷಿಸುವುದು, ವಸತಿ ಶಾಲೆಗಳು, ಥೀಮ್‌ ಪಾರ್ಕ್‌, ಜೀನ್ಸ್‌ ಪಾರ್ಕ್‌ , ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹ, ಅಂತರರಾಷ್ಟ್ರೀಯ ಮಟ್ಟದ ಜಿಮ್‌, ಬಳ್ಳಾರಿ ನಗರದಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಬೇಕು ಎಂಬ ಬೇಡಿಕೆಗಳು ಜನರಲ್ಲಿ ಇತ್ತು. ಇವುಗಳ ಬಗ್ಗೆ ಸ್ವತಃ ನಾಗೇಂದ್ರ ಅವರೂ ಹಲವು ಕಾರ್ಯಕ್ರಮಗಳಲ್ಲಿ ಮಾತನಾಡಿದ್ದರು.   ಅವರ ರಾಜೀನಾಮೆಯಿಂದಾಗಿ ಇವುಗಳ ಸಾಧ್ಯತೆಗಳ ಬಗ್ಗೆ ಪ್ರಶ್ನೆ ಎದ್ದಿದೆ.  

ಕರ್ನಾಟಕದ ಅಡವಿಗಳಲ್ಲಿ ಬದುಕುತ್ತಿರುವ ಬುಡಕಟ್ಟು ಸಮುದಾಯಗಳಿಗೆ ಆಧಾರ್‌ ಕೊಡಿಸಲು ಅವರ ಅವಧಿಯಲ್ಲಿ ಟೆಂಡರ್‌ ಆಗಿತ್ತು. ಬುಡಕಟ್ಟು ಸಮುದಾಯದ ಜನರ ಕುರಿತು ಅಧ್ಯಯನ ಕೈಗೊಳ್ಳಲು ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿನ ಬುಡಕಟ್ಟು ಸಮುದಾಯದ 100 ಸಂಶೋಧಕರಿಗೆ ‘ಪಿಡಿಎಫ್‌ (ಪೋಸ್ಟ್‌ ಡಾಕ್ಟೋರಲ್‌ ಫೆಲೋ)’ ಯೋಜನೆ ತರಲಾಗಿತ್ತು. ನೂರು ಮಂದಿ ಬುಡಕಟ್ಟು ಸಮುದಾಯ ಸಂಶೋಧಕರಿಗೆ 3 ವರ್ಷ ಪ್ರತಿ ತಿಂಗಳೂ ₹25 ಸಾವಿರ ನೆರವು ಈ ಯೋಜನೆಯಡಿ ಒದಗಿಸಲಾಗುತ್ತಿತ್ತು. 

ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವವರ ಶುಲ್ಕ ಹಿಂದಿರುಗಿಸುವ, ಸಂದರ್ಶನಕ್ಕೆ ಹಾಜರಾದರೆ ಅದರ ಖರ್ಚು ಭರಿಸುವ, ಹಾಡಿಯ ಜನರಿಗೆ ಪೋಷಕಾಂಶ ಆಹಾರ ಒದಗಿಸುವ, ಹಾಡಿಗಳ ಜನರ ಆರ್ಥಿಕ, ಸಾಮಾಜಿಕ,  ಆರೋಗ್ಯ ಸ್ಥಿತಿಗತಿಗಳ ಸರ್ವೆ ನಡೆಸುವ ವಿನೂತನ ಯೋಜನೆಗಳನ್ನು ಅವರ ಇಲಾಖೆಗಳಲ್ಲಿ ಹಾಕಿಕೊಳ್ಳಲಾಗಿತ್ತು ಎನ್ನಲಾಗಿದೆ. ಸದ್ಯ ಈ ಕಾರ್ಯಕ್ರಮಗಳಿಗೂ ಮಂಕು ಕವಿದಂತಾಗಿದೆ. 

ತನಿಖೆ ಬಳಿಕ ಮತ್ತೆ ಮಂತ್ರಿ? 

ಇನ್ನು ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳ್ಳಲಿದ್ದು, ತಾವು ಮತ್ತೆ ಮಂತ್ರಿಯಾಗುವುದಾಗಿ ಬಿ. ನಾಗೇಂದ್ರ ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಇದೇ ಷರತ್ತನ್ನೂ ಅವರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ವಿಧಿಸಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಅವರ ರಾಜೀನಾಮೆಯಿಂದ ತೆರವಾಗಿರುವ ಇಲಾಖೆಗಳು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಇರಿಸಿಕೊಳ್ಳಬೇಕು. ಬೇರೆ ಯಾರಿಗೂ ವಹಿಸಬಾರದು ಎಂದೂ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಯೂ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಬಳ್ಳಾರಿ ಉಸ್ತುವಾರಿ ಯಾರಿಗೆ?

ಬಳ್ಳಾರಿಯ ಉಸ್ತುವಾರಿಗಾಗಿ ಇಲ್ಲಿನ ರಾಜಕೀಯದ ಮೇಲಿನ ನಿಯಂತ್ರಣಕ್ಕಾಗಿ ಹಲವು ನಾಯಕರು ಪ್ರಯತ್ನಿಸುತ್ತಿರುವುದು ಸುಳ್ಳಲ್ಲ. ಹಿಂದೆ ಬಳ್ಳಾರಿಯ ಉಸ್ತುವಾರಿಗೆ ಪ್ರಯತ್ನಿಸಿದವರನ್ನು ಬದಿಗೆ ಸರಿಸಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಜವಾಬ್ದಾರಿ ವಹಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT