ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟಕ್ಕಿಲ್ಲ ನಿಯಂತ್ರಣ

ಅಕ್ರಮ ಪಡಿತರ ಅಕ್ಕಿ ಮಾರಾಟದಿಂದ ಪ್ರತಿದಿನ ₹2 ಲಕ್ಷಕ್ಕೂ ಹೆಚ್ಚು ಆದಾಯ ಗಳಿಕೆ
Last Updated 4 ಅಕ್ಟೋಬರ್ 2022, 6:14 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕಾಳಸಂತೆಯಲ್ಲಿ ಪಡಿತರ ಅಕ್ಕಿ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದರೂ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಆಹಾರ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಪಡಿತರ ಅಕ್ಕಿ ಸಾಗಾಟದ ವಾಹನಗಳನ್ನು ಆಗಾಗ ವಶಪಡಿಸಿಕೊಳ್ಳುತ್ತಾರೆ. ಅಕ್ರಮ ದಾಸ್ತಾನು ಪತ್ತೆ ಹಚ್ಚಿ ಪ್ರಕರಣ ದಾಖಲಿಸುತ್ತಾರೆ. ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ಒಂದೆರಡು ಇಂಥಹ ಘಟನೆಗಳು ನಡೆಯುತ್ತಿರುತ್ತವೆ. ಆದರೆ, ಸಂಪೂರ್ಣವಾಗಿ ‘ಬ್ಲ್ಯಾಕ್‌ ಮಾರ್ಕೆಟ್‌’ ವ್ಯವಹಾರ ತಡೆಯಲು ಸಾಧ್ಯವಾಗಿಲ್ಲ.

ಖಚಿತ ಮೂಲಗಳ ಪ್ರಕಾರ, ಹೊಸಪೇಟೆ ನಗರವೊಂದರಲ್ಲೇ ದಿನನಿತ್ಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಿ ₹2 ಲಕ್ಷಕ್ಕೂ ಅಧಿಕ ಆದಾಯ ಗಳಿಸಲಾಗುತ್ತಿದೆ. ನಿತ್ಯ ಕನಿಷ್ಠ 125 ರಿಂದ 150 ಕ್ವಿಂಟಾಲ್‌ ಪಡಿತರ ಅಕ್ಕಿಯನ್ನು ಬೇರೆ ಬೇರೆ ರೀತಿಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.

ಪಡಿತರ ಚೀಟಿದಾರರಿಂದ ಪ್ರತಿ ಕೆ.ಜಿ ಪಡಿತರ ಅಕ್ಕಿಯನ್ನು ₹8ರಿಂದ ₹10ಕ್ಕೆ ಖರೀದಿಸಲಾಗುತ್ತದೆ. ಅದಕ್ಕೆ ಪಾಲಿಶ್‌ ಮಾಡಿ ಪ್ರತಿ ಕೆ.ಜಿ. ಅಕ್ಕಿಯನ್ನು ₹40ರಿಂದ ₹50ಕ್ಕೆ ಮಾರಾಟ ಮಾಡಲಾಗುತ್ತಿದೆ. ಇಷ್ಟೇ ಅಲ್ಲ, ಸೋನಾ ಮಸೂರಿ ಸೇರಿದಂತೆ ಇತರೆ ಅಕ್ಕಿಯಲ್ಲಿ ಮಿಶ್ರಣ ಮಾಡಿಯೂ ಮಾರಾಟ ಮಾಡಲಾಗುತ್ತಿದೆ. ಈ ಕೆಲಸಕ್ಕಾಗಿ ಧಾರ್ಮಿಕ ಕೇಂದ್ರಗಳನ್ನು ಬಳಸಲಾಗುತ್ತಿದೆ ಎಂಬ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದಿವೆ. ಇಷ್ಟೇ ಅಲ್ಲ, ಇದರಲ್ಲಿ ಆಹಾರ ಇಲಾಖೆ, ಪೊಲೀಸ್‌ ಇಲಾಖೆಯ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದೂ ಗೊತ್ತಾಗಿದೆ. ಈ ವಿಷಯವನ್ನು ಪೊಲೀಸ್ ಇಲಾಖೆಯ ಖಚಿತ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

‘ಜಿಲ್ಲೆಯ ಯಾವುದೇ ಭಾಗದಲ್ಲಿ ಯಾವುದೇ ಸ್ವರೂಪದ ಅಕ್ರಮ, ಕಾನೂನುಬಾಹಿರ ಚಟುವಟಿಕೆಗಳು ನಡೆದರೆ ಅದು ಪೊಲೀಸರಿಗೆ ಒಂದಲ್ಲ ಒಂದು ಬಗೆಯಲ್ಲಿ ಗೊತ್ತಾಗುತ್ತದೆ. ಪಡಿತರ ಅಕ್ಕಿ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ದೊಡ್ಡ ಜಾಲವೇ ಸಕ್ರಿಯವಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ಹಣದ ವಹಿವಾಟು ನಡೆಯುತ್ತಿದೆ. ಆಹಾರ ಇಲಾಖೆ ಹಾಗೂ ಕೆಲ ಪೊಲೀಸರು ಶಾಮಿಲಾಗಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್‌ ಇಲಾಖೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿಯಲ್ಲೂ ಅಕ್ಕಿ ‘ಮಾಫಿಯಾ’!

ಬಳ್ಳಾರಿ: ಇಲ್ಲಿನ ಕೌಲ್‌ಬಜಾರ್‌ ಪ್ರದೇಶದ ರೇಡಿಯೊ ಪಾರ್ಕ್‌ ಬಳಿ ಬುಧವಾರ ಮಂಜುನಾಥ ಎಂಬಾತನ ಕೊಲೆ ನಡೆಯಿತು. ಬಳ್ಳಾರಿಯಲ್ಲಿ ಮಂಜುನಾಥ ಬಹುತೇಕರಿಗೆ ಪರಿಚಯವಿದ್ದ ಯುವಕ. ಈತ ಅಕ್ಕಿ ಅಕ್ರಮ ದಂಧೆ, ರಿಯಲ್‌ ಎಸ್ಟೇಟ್ ವ್ಯವಹಾರದಲ್ಲಿದ್ದರಂತೆ!

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಅವರೇ ಸ್ವತಃ ಮಾಧ್ಯಮಗಳ ಮುಂದೆ ಕೊಲೆಯಾದ ವ್ಯಕ್ತಿಯ ಹಿನ್ನೆಲೆ ವಿವರಿಸಿದ್ದಾರೆ. ಮಂಜುನಾಥ ಈಚೆಗೆ ಮಟ್ಕಾ ದಂಧೆಗೂ ಕೈಹಾಕಿದ್ದನಂತೆ. ’ಆ ಬಗ್ಗೆ ಮಾಹಿತಿ ಇಲ್ಲ. ಆದರೆ, ಎಲ್ಲ ಕೋನಗಳಿಂದಲೂ ತನಿಖೆ ನಡೆಯುತ್ತಿದೆ‘ ಎಂದು ಎಸ್‌ಪಿ ಹೇಳಿದ್ದಾರೆ.

’ಮಂಜುನಾಥನನ್ನು ಹತ್ಯೆ ಮಾಡಿದ್ದು ಯಾರು?‘ ಎಂಬುದು ಯಕ್ಷ ಪ್ರಶ್ನೆ. ನಗರದಲ್ಲಿ ಇದು ಚರ್ಚೆಯ ವಿಷಯ. ’ಅಕ್ರಮ ಅಕ್ಕಿ ದಂಧೆಯಲ್ಲಿ ತೊಡಗಿದ್ದ ಇನ್ನೊಂದು ಗುಂಪು ಹತ್ಯೆ ಮಾಡಿದೆ‘ ಎಂದು ಹೇಳಲಾಗುತ್ತಿದೆ. ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಿದೆ.

ಅಕ್ಕಿ ಅಕ್ರಮ ದಂಧೆ ಎಂದರೇನು? ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಸಹಜವಾಗಿ ಮೂಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ... ಪಡಿತರ ಪದ್ಧತಿಯಲ್ಲಿ ಹಂಚಲು ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು ಅಕ್ಕಿ ವಿತರಿಸಲಾಗುತ್ತದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡುವ ಫಲಾನುಭವಿಗಳು ಕಡಿಮೆ. ಬಹುತೇಕರು ಮಾರಿಬಿಡುತ್ತಾರೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಖರೀದಿಸಿದ ಅಕ್ಕಿಯನ್ನು ಪ್ರತಿ ಕೆ.ಜಿಗೆ ₹ 10ಕ್ಕೆ ಮಾರುತ್ತಾರೆ. ಕಾರ್ಡುದಾರರಿಂದ ಅಕ್ಕಿ ಖರೀದಿಸುವ ದೊಡ್ಡ ಜಾಲ ಇಲ್ಲಿ ಸಕ್ರಿಯವಾಗಿದೆ. ಖರೀದಿಸಿದ ಅಕ್ಕಿಯನ್ನು ₹ 2 ಅಥವಾ 3, ಕೆಲವೊಮ್ಮೆ ₹ 5 ಲಾಭಕ್ಕೆ ’ಮಾಫಿಯಾ‘ಗಳಿಗೆ ಕೊಡುತ್ತಾರೆ. ಮಾಫಿಯಾಗಳು ಒಂದೆಡೆ ಸಂಗ್ರಹಿಸಿ, ಪಾಲಿಷ್‌ ಮಾಡಿಸಿ ₹ 25 ₹ 30ಕ್ಕೆ ಬೇರೆ ಬೇರೆ ಕಡೆಗಳಿಗೆ ಕಳುಹಿಸುತ್ತಾರೆ.

ಕೆಲವು ಕಾರ್ಡುದಾರರು ನ್ಯಾಯಬೆಲೆ ಅಂಗಡಿ ಬಳಿಯೇ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಾರೆ. ಕಾಳಸಂತೆಕೋರರು ಅನೇಕ ಸಲ ಸರಕು ಸಾಗಿಸುವ ವಾಹನ ತೆಗೆದುಕೊಂಡು ಫಲಾನುಭವಿಗಳ ಮನೆ ಮುಂದಕ್ಕೇ ಹೋಗುತ್ತಾರೆ. ಹತ್ತಾರು ಚೀಲ ಸಂಗ್ರಹಿಸುತ್ತಾರೆ.

ಅಕ್ಕಿ ಅಕ್ರಮ ದಂಧೆ ಮತ್ತೊಂದು ರೀತಿಯಲ್ಲೂ ನಡೆಯುತ್ತಿದೆ. ಆಹಾರ ನಿಗಮ, ಉಗ್ರಾಣ ನಿಗಮದ ಗೋದಾಮುಗಳಿಂದಲೇ ಸಾಗಿಸಲಾಗುತ್ತದೆ. ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ಕ್ವಿಂಟಲ್‌ಗೆ ಚೀಲದ ತೂಕ ಸೇರಿಸಿ 101ಕೆ.ಜಿ 300 ಗ್ರಾಂ ಕೊಡಬೇಕು. ಚೀಲದಲ್ಲಿರುವ ಅಕ್ಕಿಯಲ್ಲೇ ಒಂದೆರಡು ಕೆ.ಜಿಯಷ್ಟು ತೆಗೆಯುತ್ತಾರೆ. 99ಕೆ.ಜಿ, 98 ಕೆ.ಜಿ ಕೊಡುತ್ತಾರೆ. ಹೀಗೆ ತೆಗೆದ ಅಕ್ಕಿಯನ್ನು ಅಧಿಕಾರಿಗಳೇ ಮಾರುತ್ತಾರೆ.

ಪಡಿತರ ಅಕ್ಕಿಯನ್ನು ಸೋನಾ ಮಸೂರಿಗೆ ಬೆರೆಸುವ ಕೆಲಸವೂ ನಡೆಯುತ್ತಿದೆ. ಪಿಡಿಎಸ್‌ ಅಕ್ಕಿಗೆ ಡಬಲ್‌ ಪಾಲಿಷ್‌ ಮಾಡಿಸಿ 70ಕೆ.ಜಿ ಸೋನಾ ಮಸೂರಿಗೆ 30ಕೆ.ಜಿ ಮಿಶ್ರಣ ಮಾಡಲಾಗುತ್ತದೆ. ಇದೂ ಒಂದು ರೀತಿ ಕಣ್ಣಿಗೆ ಮಣ್ಣೆರಚುವ ಕೆಲಸ ಎಂಬುದು ಹಲವರ ಆರೋಪ.

ಬಳ್ಳಾರಿಗೆ ಪಡಿತರ ಪದ್ಧತಿಯಲ್ಲಿ ಹಂಚಿಕೆ ಮಾಡಲು ಪ್ರತಿ ತಿಂಗಳು ಸುಮಾರು 62 ಸಾವಿರ ಕ್ವಿಂಟಲ್‌ ಅಕ್ಕಿ ಬರುತ್ತಿದೆ. ಇದು ತಿಂಗಳಿಂದ ತಿಂಗಳಿಗೆ ಕಾರ್ಡುಗಳ ಆಧಾರದಲ್ಲಿ ಏರುಪೇರಾಗುತ್ತದೆ. ವಿಜಯನಗರ ಜಿಲ್ಲೆಗೆ 41 ಸಾವಿರ ಕ್ವಿಂಟಲ್‌ ಹಂಚಿಕೆ ಮಾಡಲಾಗುತ್ತಿದೆ. ಶೇ 30ರಷ್ಟು ಅಂದರೆ ಸುಮಾರು 30 ಸಾವಿರ ಕ್ವಿಂಟಲ್‌ ಕಾಳಸಂತೆ ಪಾಲಾಗುತ್ತಿದೆ ಎಂದರೆ ಅಕ್ರಮ ದಂಧೆಯ ಹಿಂದಿನ ರಹಸ್ಯ ಯಾರಿಗಾದರೂ ಅರಿವಾಗುತ್ತದೆ.

ಜಿಲ್ಲೆಯಲ್ಲಿ ಅಕ್ಕಿ ದಂಧೆಯನ್ನು ನಿಯಂತ್ರಿಸುವ ಎರಡು ಡಜನ್‌ಗೂ ಹೆಚ್ಚು ಜನರಿದ್ದಾರೆ. ಇವರು ತುಮಕೂರು, ಚಳ್ಳಕೆರೆ, ಗಂಗಾವತಿ, ಕೇರಳ ಮತ್ತಿತರ ಕಡೆಗಳಿಗೆ ಕಳುಹಿಸುತ್ತಾರೆ. ಆಂಧ್ರದಿಂದಲೂ ಕಾಳಸಂತೆಯಲ್ಲಿ ಅಕ್ಕಿ ರಾಜ್ಯಕ್ಕೆ ಬರುತ್ತಿದೆ. ಅದನ್ನೂ ಬೇರೆಡೆ ಕಳುಹಿಸಲಾಗುತ್ತಿದೆ ಎಂಬುದು ಆಹಾರ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಮೂಲಗಳ ವಿವರಣೆ.

ಅಕ್ಕಿ ಅಕ್ರಮ ದಂಧೆ ರಾಜಾರೋಷವಾಗಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಕಣ್ಣೆದುರೇ ನಡೆಯುತ್ತಿದೆ. ಇದಕ್ಕೆ ಏಕೆ ಯಾರೂ ಕಡಿವಾಣ ಹಾಕುತ್ತಿಲ್ಲ ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT