ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಸೇವೆ ಪಡೆಯಲು ಜನರ ಪರದಾಟ

ಕುಡತಿನಿ ಪಟ್ಟಣ ಪಂಚಾಯಿತಿಯಲ್ಲಿ ಸಿಬ್ಬಂದಿಗಳ ಕೊರತೆ
Published 2 ಸೆಪ್ಟೆಂಬರ್ 2024, 15:59 IST
Last Updated 2 ಸೆಪ್ಟೆಂಬರ್ 2024, 15:59 IST
ಅಕ್ಷರ ಗಾತ್ರ

ಕುಡತಿನಿ (ತೋರಣಗಲ್ಲು): ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಹಲವಾರು ವರ್ಷಗಳಿಂದ ಅಧಿಕಾರಿ, ಸಿಬ್ಬಂದಿ ಕೊರತೆಯಿಂದ ಪಟ್ಟಣದಲ್ಲಿನ ಅನೇಕ ಸಮಸ್ಯೆಗಳು ಶಾಶ್ವತವಾಗಿ ಉಳಿದುಕೊಂಡಿವೆ. ಈ ಬಗ್ಗೆ ಸಾರ್ವಜನಿಕರು ನಗರಾಭಿವೃದ್ದಿ ಇಲಾಖೆಯ ಅಧಿಕಾರಿಗಳ, ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಪಂಚಾಯಿತಿಯಲ್ಲಿ ಮುಖ್ಯಾಧಿಕಾರಿ, ಸಮುದಾಯ ಸಂಘಟನಾ ಅಧಿಕಾರಿ, ಕಂದಾಯ ನಿರೀಕ್ಷಕ, ಆರೋಗ್ಯ ನಿರೀಕ್ಷಕ, ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರು, ನೀರಗಂಟಿ ಹಾಗೂ ಜವಾನ ಹುದ್ದೆ ಸೇರಿದಂತೆ ಒಟ್ಟು 12 ಹುದ್ದೆಗಳು ಖಾಲಿಯಿದ್ದು, ಜನರು ನಿತ್ಯ ವಿವಿಧ ಸರ್ಕಾರಿ ಕೆಲಸಗಳಿಗಾಗಿ ಪರದಾಡುವಂತಾಗಿದೆ.

ಖಾಲಿ ಹುದ್ದೆಗಳ ಸಮಸ್ಯೆಯಿಂದ ಪಟ್ಟಣದಲ್ಲಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಯ ನಿರ್ಲಕ್ಷ್ಯ, ಚರಂಡಿಗಳ ಸ್ವಚ್ಚತೆ, ವಸತಿ, ಕುಡಿಯುವ ನೀರು, ಶೌಚಾಲಯಗಳ ನಿರ್ವಹಣೆ, ತೆರಿಗೆ ವಸೂಲಿ, ಆರೋಗ್ಯ ಮತ್ತು ನೈರ್ಮಲ್ಯಕರಣ ಸೇರಿದಂತೆ ಇತರೆ ಸಾರ್ವಜನಿಕ ಸೇವೆಗಳಿಗೆ ಬಹಳ ತೊಂದರೆಯಾಗಿದೆ. ಜಿಲ್ಲಾಧಿಕಾರಿ, ಪ್ರತಿನಿಧಿಗಳ ವಿರುದ್ಧ ಜನರು ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.

2022ನೇ ಸಾಲಿನಲ್ಲಿ ಪಟ್ಟಣದಲ್ಲಿನ ಬಡ ಜನರ ವಸತಿ ಸೌಲಭ್ಯಕ್ಕಾಗಿ ಸುಮಾರು ಒಂದು ಸಾವಿರ ಅರ್ಜಿಗಳನ್ನು ಪಡೆದಿದ್ದು, ಪಂಚಾಯಿತಿಗೆ ಸಂಬಂಧಪಟ್ಟ 12 ಎಕರೆಯ ಜಮೀನಿದೆ. ಸುಮಾರು 700 ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಸೂಕ್ತ ಅನುದಾನವಿದ್ದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಬಡ ಜನರು ವಸತಿ ಸೌಲಭ್ಯದಿಂದ ವಂಚಿತರಾಗಿರುವುದು ಶೋಚನೀಯ.

ಪಟ್ಟಣದ 19 ವಾರ್ಡ್‍ಗಳಲ್ಲಿ ಸುಮಾರು 12ಕ್ಕೂ ಹೆಚ್ಚು ಸಾಮಾಹಿಕ ಮಹಿಳಾ ಶೌಚಾಲಯಗಳಿದ್ದು ಅವುಗಳ ನಿರ್ವಹಣೆಗಾಗಿ ಅಗತ್ಯ ಸ್ವಚ್ಚತಾ ಸಿಬ್ಬಂದಿಗಳ ನೇಮಕಾತಿಗಾಗಿ 16 ತಿಂಗಳಿಂದ ಟೆಂಡರ್ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರಿಂದ ಎಲ್ಲ ಶೌಚಾಲಯಗಳು ಪಾಳು ಬಿದ್ದು ಗಬ್ಬುನಾರುತ್ತಿವೆ. ಮಹಿಳೆಯರು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿಬೇಕಾದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಜನರ ಕುಡಿಯುವ ನೀರಿಗಾಗಿ ಪಟ್ಟಣದ 19ನೇ ವಾರ್ಡ್‍ನಲ್ಲಿ ಜಿಲ್ಲಾ ಖನಿಜ ನಿಧಿ ಅನುದಾನದಲ್ಲಿ ₹3ಕೋಟಿ ವೆಚ್ಚದಲ್ಲಿ ₹5ಲಕ್ಷ ಲೀಟರ್ರ್ ಸಾಮರ್ಥ್ಯದ ಮೇಲ್ಮಟ್ಟದ ಟ್ಯಾಂಕ್ ನಿರ್ಮಿಸಲು 2022ರಲ್ಲಿ ಭೂಮಿ ಪೂಜೆ ನೆರವೇರಿದ್ದು, ಕಳೆದ ಎರಡು ವರ್ಷಗಳಿಂದ ಕಾಮಗಾರಿ ಅರಂಭವಾಗದಿರುವುದರಿಂದ ಜನರು ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ.

ಯುವಕರ ಸಬಲೀಕರಣಕ್ಕಾಗಿ ಜಿಲ್ಲಾ ಖನಿಜ ನಿಧಿಯ ಅನುದಾನದಲ್ಲಿ ₹3ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಜಿಲ್ಲಾಡಳಿತ ಯೋಜಿಸಿದೆ. ಮೂರು ವರ್ಷಗಳಿಂದ ಕಾಮಗಾರಿಯು ಸಕಾಲಕ್ಕೆ ಆರಂಭವಾಗದೇ ವಿಳಂಬಗೊಂಡಿದ್ದರಿಂದ ಪಟ್ಟಣದಲ್ಲಿನ ಯುವಕರ, ಕ್ರೀಡಾಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರೆತೆಯಿಂದ ಆಡಳಿತ ನಡೆಸಲು ಬಹಳ ತೊಂದರೆಯಾಗುತ್ತಿದೆ. ಅಧಿಕಾರಿ ಸಿಬ್ಬಂದಿ ಭರ್ತಿಗಾಗಿ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ.
–ಶಿವಲಿಂಗಪ್ಪ, ಕುಡತಿನಿ ಪ.ಪಂ ಪ್ರಭಾರ ಮುಖ್ಯಾಧಿಕಾರಿ
ಪಟ್ಟಣದಲ್ಲಿ ಕುಡಿಯುವ ನೀರು ವಸತಿ ಚರಂಡಿ ಶೌಚಾಲಯಗಳ ನಿರ್ವಹಣೆ ಸೇರಿದಂತೆ ಇತರೆ ಸಮಸ್ಯೆಗಳು ಹಲವಾರು ವರ್ಷಗಳಿಂದ ಬಹಳ ಗಂಭೀರವಾಗಿವೆ. ಇದಕ್ಕೆ ಸಿಬ್ಬಂದಿ ಕೊರತೆಯೆ ಮುಖ್ಯ ಕಾರಣ.
–ಕಮ್ಮ ರಮೇಶ್ ಗ್ರೀನ್ ಫೌಂಡೇಷನ್ ಅಧ್ಯಕ್ಷ ಕುಡತಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT