ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ವಾಣಿಜ್ಯ ಕಟ್ಟಡಗಳಿಂದ ₹17.56 ಕೋಟಿ ತೆರಿಗೆ ಬಾಕಿ

ಜಪ್ತಿ ಕಾರ್ಯಾಚರಣೆಗೆ ಮುಂದಾದ ಬಳ್ಳಾರಿ ಪಾಲಿಕೆ
Published 27 ಫೆಬ್ರುವರಿ 2024, 7:30 IST
Last Updated 27 ಫೆಬ್ರುವರಿ 2024, 7:30 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ನಗರ ವ್ಯಾಪ್ತಿಯಲ್ಲಿ 55 ವಾಣಿಜ್ಯ ಕಟ್ಟಡಗಳ ಮಾಲೀಕರು ಸುಮಾರು ₹17.56 ಕೋಟಿಗೂ ಮಿಗಿಲಾದ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಪಾಲಿಕೆ ಕ್ರಮಕ್ಕೆ ಮುಂದಾಗಿದೆ. 

ಬಳ್ಳಾರಿ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು ಮೂರು ವಲಯಗಳಿವೆ. ಇವುಗಳ ವ್ಯಾಪ್ತಿಯಲ್ಲಿ ಒಟ್ಟಾರೆ 1,25,795 ಆಸ್ತಿಗಳಿವೆ. ಇದರಲ್ಲಿ 15,679 ವಾಣಿಜ್ಯ ಉದ್ದೇಶದ ಕಟ್ಟಡಗಳು. ವಲಯ–1ರಲ್ಲಿ 33 ವಾಣಿಜ್ಯ ಕಟ್ಟಗಳು ತೆರಿಗೆ ಬಾಕಿ ಉಳಿಸಿಕೊಂಡಿದ್ದು, ₹15.75 ಕೋಟಿ ಹಣ ಪಾಲಿಕೆಗೆ ಬರಬೇಕಾಗಿದೆ. ವಲಯ–2ರಲ್ಲಿ ಒಟ್ಟು 9 ವಾಣಿಜ್ಯ ಕಟ್ಟಡಗಳು ₹1.47 ಕೋಟಿಗೂ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿವೆ. ವಲಯ–3ರಲ್ಲಿ 5 ಆಸ್ತಿಗಳಿಂದ ₹32.91 ಲಕ್ಷ ಪಾವತಿಯಾಗಬೇಕಾಗಿದೆ. ಇದೆಲ್ಲದರ ಒಟ್ಟಾರೆ ಮೊತ್ತ ₹17.56 ಕೋಟಿ.  

ಪಾಲಿಕೆಯು ತೆರಿಗೆ ರೂಪದಲ್ಲಿ ವಾರ್ಷಿಕ ₹45 ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಿದ್ದು, ಇದರಲ್ಲಿ ಸದ್ಯ ಬಾಕಿ ಉಳಿದಿರುವ ಮೊತ್ತವೇ ಹೆಚ್ಚು ಕಡಿಮೆ ಅರ್ಧದಷ್ಟಾಗಿದೆ.  ಖಾಸಗಿ ಶಾಲೆ ಮತ್ತು ಕಾಲೇಜುಗಳೂ ತೆರಿಗೆ ಬಾಕಿ ಉಳಿಸಿಕೊಂಡಿವೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತೆರಿಗೆ ಬಾಕಿ ಉಳಿಸಿಕೊಂಡಿರುವ ಸಂಬಂಧಿಸಿದ ಕಟ್ಟಡ ಮಾಲೀಕರಿಗೆ ಪಾಲಿಕೆ ಅಧಿಕಾರಿಗಳು ಈಗಾಗಲೇ ತಗಾದೆ ನೋಟಿಸ್‌ ಜಾರಿ ಮಾಡಿದ್ದಾರೆ. ಇದಕ್ಕೆ ಮಾಲೀಕರು ಪ್ರತಿಕ್ರಿಯೆ ನೀಡಬೇಕು, ಇಲ್ಲವೇ ಆಕ್ಷೇಪಣೆ ಸಲ್ಲಿಸಬೇಕು ಅಥವಾ ತೆರಿಗೆ ಪಾವತಿಸಬೇಕು. ಆದರೆ, 55 ಕಟ್ಟಡಗಳ ಮಾಲೀಕರು ಈವರೆಗೆ ನೋಟಿಸ್‌ಗೆ ಸ್ಪಂದಿಸಿಲ್ಲ ಎನ್ನಲಾಗಿದ್ದು, ಪಾಲಿಕೆಯು ಜಪ್ತಿ ಕಾರ್ಯಾಚರಣೆ ಆರಂಭಿಸಿದೆ.

ಸಾಮಾನ್ಯವಾಗಿ ಏಪ್ರಿಲ್‌ನಿಂದ ಪಾಲಿಕೆಯು ರಿಯಾಯಿತಿ ದರದಲ್ಲಿ ತೆರಿಗೆ ಸಂಗ್ರಹ ಆರಂಭಿಸುತ್ತದೆ. ಮೇ ತಿಂಗಳಿಂದ ಜೂನ್‌ ವರೆಗೆ ರಿಯಾಯಿತಿ ಇಲ್ಲದೇ ತೆರಿಗೆ ಪಾವತಿಗೆ ಅವಕಾಶ ನೀಡಲಾಗುತ್ತದೆ. ಜುಲೈ ನಂತರ ದಂಡ ಸಹಿತ ತೆರಿಗೆ ಪಾವತಿಸಬೇಕಾಗುತ್ತದೆ. ತೆರಿಗೆದಾರರಿಗೆ ಅನುಕೂಲವಾಗಲೆಂದು ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನೂ ಜಾರಿಗೆ ತರಲಾಗಿದ್ದು, ಆನ್‌ಲೈನ್‌ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ತೆರಿಗೆ ಪಾವತಿಗೆ ಅನುಕೂಲವಾಗಲೆಂದೇ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧಧತಿ ಆನ್‌ಲೈನ್‌ ಪಾವತಿ ವ್ಯವಸ್ಥೆ ಆರಂಭಿಸಿದ್ದೇವೆ. ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕ್ರಮ ಮುಂದುವರಿಯಲಿದೆ
ಬಿ.ಅಬ್ದುಲ್‌ ರೆಹಮಾನ್‌ ಉಪ ಕಂದಾಯ ಆಯುಕ್ತ ಬಳ್ಳಾರಿ ಪಾಲಿಕೆ
ಪಾಲಿಕೆ ಆದಾಯ ಮೂಲಕ್ಕೆ ಪೆಟ್ಟು
ತೆರಿಗೆ ಹೆಚ್ಚಿಸಲು ಪಾಲಿಕೆಯು ಹಲವು ಜಾಗೃತಿ ಕಾರ್ಯಕ್ರಮಗಳ ಮೂಲಕ ಪ್ರಚಾರ ನಡೆಸಿದೆ. ಲೆಕ್ಕ ಪರಿಶೋಧಕರಿಗೂ ತರಬೇತಿ ನೀಡಿದೆ. ಆದರೆ ವಾಣಿಜ್ಯ ಕಟ್ಟಡಗಳ ಹಲವು ಮಾಲೀಕರು ಭಾರಿ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಪಾಲಿಕೆಯ ಆದಾಯ ಮೂಲಕ ಪೆಟ್ಟು ನೀಡಿದೆ. ಹೀಗಾಗಿ ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ವಿರುದ್ಧ ಕ್ರಮ ಅನಿವಾರ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT