ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೋರಣಗಲ್ಲು | ಪ್ರಕೃತಿ ಮಡಿಲಲ್ಲಿ ಭೈರವ ತೀರ್ಥ

ನಿಸರ್ಗದತ್ತ ಬೃಹತ್ ಏಕಶಿಲಾ ಬೆಟ್ಟಗಳ ಸಾಲಿನಲ್ಲಿರುವ ವಿಶೇಷ ಧಾರ್ಮಿಕ ಸ್ಥಳ
ಎರ್ರಿಸ್ವಾಮಿ ಬಿ.
Published 10 ಡಿಸೆಂಬರ್ 2023, 5:52 IST
Last Updated 10 ಡಿಸೆಂಬರ್ 2023, 5:52 IST
ಅಕ್ಷರ ಗಾತ್ರ

ತೋರಣಗಲ್ಲು: ಕಣ್ಣು ಹಾಯಿಸಿದಷ್ಟು ದೂರ ಕಾಣುವ ಪ್ರಕೃತಿಯ ಸೊಬಗು, ಹಚ್ಚಹಸಿರಿನಿಂದ ಕಂಗೊಳಿಸುವ ವನಸಿರಿ, ಹಸಿರು ಹೊದ್ದುಕೊಂಡ ಬೆಟ್ಟ, ಗುಡ್ಡಗಳ ಸಾಲು, ಬೃಹತ್ ಏಕಶಿಲಾ ಬೆಟ್ಟಗಳ ಮಡಿಲಿನಲ್ಲಿರುವ ನಿಸರ್ಗದತ್ತ ಧಾರ್ಮಿಕ ಸ್ಥಳವೇ ಶ್ರೀ ಭೈರವ ತೀರ್ಥ ಕ್ಷೇತ್ರ.

ಸಮೀಪದ ತಾರಾನಗರ ಗ್ರಾಮದ ಹೊರವಲಯದ ಪ್ರಕೃತಿಯ ರಮಣೀಯ ತಾಣದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ, ಸಂಡೂರು ಜನರ ವಿಶೇಷ ಶಕ್ತಿಯ ಪ್ರಧಾನ ಆರಾದ್ಯ ದೈವವೇ ಕಾಲ ಭೈರವೇಶ್ವರ.
ಸಂಡೂರಿನ ದಟ್ಟ ಗಿರಿಕಾನನಗಳಲ್ಲಿ ಕಂಡುಬರುವ ಹರಿಶಂಕರ ತೀರ್ಥ, ಭೀಮ ತೀರ್ಥ, ನವಿಲು ತೀರ್ಥ, ಅಗಸ್ತ್ಯ ತೀರ್ಥ, ನಾರಾಯಣ ಚಕ್ರ ತೀರ್ಥ, ಮನ್ಮಥ ಹೊಂಡ ಹಾಗೂ ಜೋಗದ ದೇವರಕೊಳ್ಳ ಸೇರಿದಂತೆ ಇತರೆ ಒಂಬತ್ತು ತೀರ್ಥ ಕ್ಷೇತ್ರಗಳಲ್ಲಿ ಕಾಲ ಭೈರವ ತೀರ್ಥ ಕ್ಷೇತ್ರವೂ ಒಂದಾಗಿದೆ.

ನಿಸರ್ಗದತ್ತ ನೀರಿನ ಹೊಂಡ: ಬೆಟ್ಟಗಳ ತಪ್ಪಲಿನಲ್ಲಿ, ನಿಸರ್ಗಧಾಮದ ತಳಭಾಗದ ಗುಹೆಯಲ್ಲಿ ಬಿರು ಬೇಸಿಗೆಯಲ್ಲಿಯೂ ಬತ್ತದ ಪವಿತ್ರ ತೀರ್ಥ ಹೊಂಡವಿದೆ. ಈ ಹೊಂಡವು ಪುರಾತನ ಕಾಲದಿಂದಲೂ ಭೈರವ ತೀರ್ಥ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದಿದ್ದು, ಜನಾಕರ್ಷಣೆಯ ಐತಿಹಾಸಿಕ ಕೇಂದ್ರವಾಗಿದೆ. ಹೊಂಡದ ಬಳಿಯಲ್ಲಿ ಕಾಲ ಭೈರವೇಶ್ವರನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ಈ ದೈವಿ ಸ್ಥಳವು ಅಪಾರ ಸಸ್ಯ, ಜೀವ ಸಂಕುಲದಿಂದ ಕೂಡಿದ್ದು, ಎತ್ತ ನೋಡಿದರೂ ಹಸಿರಿನ ವೈಭವ ಕಣ್ಣಿಗೆ ರಾಚುತ್ತದೆ. ಮಂಜು ಮುಸುಕಿದ ಮೋಡಗಳು ಮನಸ್ಸಿಗೆ ಮುದ ನೀಡುವುದಲ್ಲದೆ, ನೀಲಾಗಸದಲ್ಲಿ ತೆಲಾಡುವ ಮಳೆಯ ಕಾರ್ಮೋಡಗಳು ಧರೆಗೆ ಇಳಿದಂತೆ ಬಾಸವಾಗುತ್ತವೆ. ರೋಮಾಂಚನ ಮೂಡಿಸುವ ನವಿಲುಗಳ ನರ್ತನ, ಕಿವಿಗೆ ಇಂಪು ನೀಡುವ ನೀರಿನ ಝರಿಗಳು, ಪಿಸುಗುಟ್ಟುವ ಪಕ್ಷಿಗಳ ಕಲರವ, ತುಂಬಿ ಹರಿಯುವ ಹಳ್ಳ ಕೊಳ್ಳಗಳು ಇವೆಲ್ಲವನ್ನೂ ಇಲ್ಲಿ ಮಳೆಗಾಲದಲ್ಲಿ ಮಾತ್ರ ಅನುಭವಿಸಬಹುದು.

ಶಿವರಾತ್ರಿ ದಿನ ವಿಶೇಷ ಪೂಜೆ: ತಾರಾನಗರ ಗ್ರಾಮದ ಜನರು, ಸುತ್ತಲಿನ ಗ್ರಾಮಗಳ ಭಕ್ತಾಧಿಗಳು ಹಾಗೂ ತೀರ್ಥ ಕ್ಷೇತ್ರದ ನಿತ್ಯಾನಂದ ಸೇವಾ ಸಮಿತಿ ವತಿಯಿಂದ ಪ್ರತಿವರ್ಷ ಮಹಾ ಶಿವರಾತ್ರಿಯ ದಿನದಂದು ಕಾಲ ಭೈರವೇಶ್ವರನಿಗೆ ವಿಶೇಷ ಪೂಜೆ, ಪ್ರಸಾದ ಸೇವೆ ಸೇರಿದಂತೆ ಇತರ ಪೂಜಾ ಕಾರ್ಯಗಳು ಭಕ್ತಿ ಪೂರ್ವಕವಾಗಿ ನಡೆಯುತ್ತವೆ.
ಹರಿಹರ, ಕುಮಾರಸ್ವಾಮಿ ದೇವರ ಪಾದುಕೆ, ಮಾರುತಿ ದೇವಸ್ಥಾನಗಳನ್ನು ಹಾಗೂ ನಿತ್ಯಾನಂದ ಸ್ವಾಮೀಜಿಯ ಆಶ್ರಮವನ್ನು ಕಾಣುತ್ತೇವೆ. ಹಲವಾರು ವರ್ಷಗಳಿಂದ ನಿತ್ಯಾನಂದ ಸೇವಾ ಸಮಿತಿಯವರು ಈ ತೀರ್ಥ ಕ್ಷೇತ್ರದಲ್ಲಿ ನಿರಂತರ ಸೇವೆಯಲ್ಲಿ ನಿರತರಾಗಿದ್ದಾರೆ.

ಪ್ರಸ್ತುತ ಈ ಪ್ರದೇಶವು ಯಾತ್ರಿಕರ, ಛಾಯಾಗ್ರಾಹಕರ ಹಾಗೂ ಚಾರಣಿಗರ ನೆಚ್ಚಿನ ತಾಣ ಎನಿಸಿಕೊಂಡಿದ್ದು, ಮೂಲಸೌಕರ್ಯಗಳೊಂದಿಗೆ ಇನ್ನಷ್ಟು ಅಭಿವೃದ್ಧಿಪಡಿಸಿದರೆ, ಉತ್ತಮ ಪ್ರವಾಸಿ ತಾಣವಾಗಿಸಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಭೈರವ ತೀರ್ಥ ಕ್ಷೇತ್ರದಲ್ಲಿ ಕಂಡುಬರುವ ನಿಸರ್ಗದತ್ತ ನೀರಿನ ಹೊಂಡ
ಭೈರವ ತೀರ್ಥ ಕ್ಷೇತ್ರದಲ್ಲಿ ಕಂಡುಬರುವ ನಿಸರ್ಗದತ್ತ ನೀರಿನ ಹೊಂಡ
ಎತ್ತರದ ಗುಹೆಯಲ್ಲಿರುವ ಕಾಲ ಭೈರವೇಶ್ವರನ ಮೂರ್ತಿ
ಎತ್ತರದ ಗುಹೆಯಲ್ಲಿರುವ ಕಾಲ ಭೈರವೇಶ್ವರನ ಮೂರ್ತಿ
ತೀರ್ಥಕ್ಷೇತ್ರವು ಐತಿಹಾಸಿಕ ಪ್ರಸಿದ್ಧಿ ಪಡೆದಿದ್ದು ಯಾತ್ರಿಕರ ಅನುಕೂಲಕ್ಕಾಗಿ ಸಿಸಿ ರಸ್ತೆ ಸೇತುವೆ ವಿಶ್ರಾಂತಿ ಧಾಮ ನೀರು ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿಪಡಿಸಬೇಕು –
ಶರಣಬಸವರಾಜ ತಾರಾನಗರ ಗ್ರಾಮದ ನಿವಾಸಿ

ಐತಿಹಾಸಿಕ ಹಿನ್ನೆಲೆ ಪ್ರಾಚೀನ ಕಾಲದ ಪುರಾಣ ದಂತಕತೆಗಳ ಪ್ರಕಾರ ರಾಕ್ಷಸ ತಾರಾಕಸುರನ ಮಗ ತಾರಕಾಕ್ಷನು ಈ ಭಾಗದಲ್ಲಿ ವಾಸ ಮಾಡುವ ಜನರಿಗೆ ವಿಪರೀತ ಉಪಟಳ ಹಿಂಸೆ ನೀಡುತ್ತಿದ್ದನು. ಈ ರಾಕ್ಷಸನಿಂದ ರೋಸಿಹೋಗಿ ಜನರು ಕೊನೆಗೆ ಶಿವನ ಮೊರೆಯಿಟ್ಟು ಪ್ರಾರ್ಥಿಸಿದಾಗ ಪರಮೇಶ್ವರನು ಕಾಲ ಭೈರವನ ರೂಪದಲ್ಲಿ ಧರೆಗೆ ಇಳಿದು ರಾಕ್ಷಸ ತಾರಕಾಕ್ಷನನ್ನು ಸಂಹಾರ ಮಾಡುತ್ತಾನೆ. ನಂತರ ಈ ಪ್ರದೇಶದಲ್ಲಿ ನೆಲೆ ನಿಂತಿದ್ದರಿಂದ ಈ ಸ್ಥಳವನ್ನು ಭೈರವ ತೀರ್ಥ ಎಂದು ಕರೆಯುವುದು ಪ್ರತೀತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT