ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸೇನಪ್ಪ ಕೊಲೆಗೆ ಸುಪಾರಿ?

ಎಲ್ಲ ಆಯಾಮಗಳಿಂದಲೂ ತನಿಖೆ: ರಂಜಿತ್‌ ಕುಮಾರ್‌
Published 7 ಆಗಸ್ಟ್ 2023, 16:01 IST
Last Updated 7 ಆಗಸ್ಟ್ 2023, 16:01 IST
ಅಕ್ಷರ ಗಾತ್ರ

ಬಳ್ಳಾರಿ: ‘ಭಾನುವಾರ ರಾತ್ರಿ ನಡೆದ ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗದ ಸೆಕ್ಯುರಿಟಿ ಇನ್‌ಸ್ಪೆಕ್ಟರ್‌ ಹುಸೇನಪ್ಪ ಅವರ ಹತ್ಯೆಗೆ ಸುಪಾರಿ ಕೊಡಲಾಗಿತ್ತೇ’ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ‍ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್ ಬಂಡಾರು ಹೇಳಿದರು.

‘ರಾತ್ರಿ 8.30ರ ಸುಮಾರಿಗೆ ಹುಸೇನಪ್ಪ ಅವರನ್ನು ಕೊಲೆ ಮಾಡಲಾಗಿದ್ದು, ಆರೋಪಿಗಳ ಸುಳಿವು ಸಿಕ್ಕಿದೆ. ಹರಿತವಾದ ಆಯುಧದಿಂದ ಹೊಡೆಯಲಾಗಿದೆ. ಈ ದೃಶ್ಯಾವಳಿ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ’ ಎಂದು ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಹುಸೇನಪ್ಪ ಅವರಿಗೆ ಇಬ್ಬರು ಪತ್ನಿಯರು ಎಂದು ತಿಳಿದುಬಂದಿದೆ. ಆಸ್ತಿ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ಇದೆ. ಒಂದು ಕುಟುಂಬ ಬಳ್ಳಾರಿಯಲ್ಲಿದೆ. ಮತ್ತೊಂದು ಕುಟುಂಬ ಸಿಂಧನೂರಿನಲ್ಲಿದೆ ಎಂದು ಗೊತ್ತಾಗಿದೆ. ಕೊಲೆಗೆ ಕುಟುಂಬ ಸದಸ್ಯರೇ ಸುಪಾರಿ ಕೊಟ್ಟಿರಬಹುದು ಎಂಬ ಅನುಮಾನವಿದೆ. ಎಲ್ಲ ಕೋನಗಳಿಂದ ತನಿಖೆ ನಡೆಯುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಕುಟುಂಬದ ಸದಸ್ಯರು ಮತ್ತು ಕಚೇರಿ ಸಿಬ್ಬಂದಿಯ ವಿಚಾರಣೆ ನಡೆಯುತ್ತಿದೆ. ಮೃತರ ಪುತ್ರ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಬಳ್ಳಾರಿಯಲ್ಲಿ ಎರಡು, ಮೂರು ವರ್ಷಗಳಿಂದ ಸುಪಾರಿ ಕೊಲೆಗಳು ನಡೆದಿಲ್ಲ. ಇದು ಸುಪಾರಿ ಕೊಲೆ ಇದ್ದಿರಬಹುದು’ ಎಂಬ ಅನುಮಾನವಿದೆ ಎಂದು ಬಂಡಾರು ವಿವರಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎ. ನಟರಾಜ್‌, ಡಿವೈಎಸ್‌ಪಿಗಳಾದ ಶೇಖರಪ್ಪ, ಉಮಾರಾಣಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರಕ್ಕೆ ಸಿಂಧನೂರಿಗೆ ಒಯ್ಯಲಾಯಿತು. ಗಾಂಧಿನಗರ ‍ಇನ್‌ಸ್ಪೆಕ್ಟರ್‌ ಸಿದ್ದರಾಮೇಶ್ವರ ಗಡೇದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Cut-off box - ವೇಶ್ಯವಾಟಿಕೆ‌ 7 ಮಹಿಳೆಯರ ರಕ್ಷಣೆ ಡಿವೈಎಸ್ಪಿ ಉಮಾರಾಣಿ ತಂಡದಿಂದ ದಾಳಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಗರದ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಸ್ಪಾವೊಂದರ ಮೇಲೆ  ಪೊಲೀಸರು ಭಾನುವಾರ ಸಂಜೆ ದಾಳಿ ಮಾಡಿ ಏಳು ಮಹಿಳೆಯರನ್ನು ರಕ್ಷಿಸಿದ್ದಾರೆ. ಪ್ರೊಬೇಷನರಿ ಡಿವೈಎಸ್ಪಿ ಉಮಾರಾಣಿ ನೇತೃತ್ವದ ಪೊಲೀಸರ ತಂಡ ಭಾನುವಾರ ಸಂಜೆ ದಾಳಿ ಮಾಡಿ ಸ್ಪಾ ಮ್ಯಾನೇಜರ್‌ ಪ್ರಭುಗೌಡ ಸೇರಿ 8 ಜನರನ್ನು ಬಂಧಿಸಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ತಿಳಿಸಿದರು. ರಕ್ಷಣೆ ಮಾಡಿದ ಯುವತಿಯರು ಈಶಾನ್ಯ ರಾಜ್ಯಗಳು ಮತ್ತು ಪಶ್ವಿಮ ಬಂಗಾಳಕ್ಕೆ ಸೇರಿದವರು. ‘ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಕೇಂದ್ರಗಳ ಮೇಲೆ ಸತತ ದಾಳಿ ನಡೆಯುತ್ತಿದೆ. ಈ ಸಲ ಉಮಾರಾಣಿ ಅವರಿಗೆ ಮಾಹಿತಿ ಸಿಕ್ಕಿದ್ದು ದಾಳಿ ಮಾಡಿದ್ದಾರೆ. ಇದರರ್ಥ ಬೇರೆ ಅಧಿಕಾರಿಗಳು ಅದಕ್ಷರು ಎಂದೇನಲ್ಲ’ ಎಂದು ಬಂಡಾರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT