ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಲೂ ಶುದ್ಧ ಕುಡಿವ ನೀರಿಗೆ ಬರ

ಸೂಕ್ತ ನಿರ್ವಹಣೆ ಕೊರತೆ: ಅವಳಿ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಮುಚ್ಚಿರುವ ಶುದ್ಧ ಕುಡಿವ ನೀರಿನ ಘಟಕಗಳು
Last Updated 1 ಆಗಸ್ಟ್ 2022, 7:56 IST
ಅಕ್ಷರ ಗಾತ್ರ

ಬಳ್ಳಾರಿ/ಹೊಸಪೇಟೆ (ವಿಜಯನಗರ): ಜಿಲ್ಲೆಯ ಜನತೆಗೆ ಈಗಲೂ ಶುದ್ಧ ಕುಡಿಯುವ ನೀರು ಕನಸಾಗಿಯೇ ಉಳಿದಿದೆ.

ಮೂರೂ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯ ನಮ್ಮಲ್ಲೇ ಇದ್ದರೂ ಅವಳಿ ಜಿಲ್ಲೆಗಳಾದ ಬಳ್ಳಾರಿ–ವಿಜಯನಗರದ ಜನರಿಗೆ ಶುದ್ಧ ಕುಡಿಯುವ ನೀರು ದೂರದ ಮಾತಾಗಿದೆ. 24X7 ಕುಡಿಯುವ ನೀರಿನ ಯೋಜನೆ ಯಾವಾಗ ಕೊನೆಗೊಳ್ಳುತ್ತದೆ ಎನ್ನುವುದಕ್ಕೆ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ. ಇನ್ನೊಂದೆಡೆ ಆಯಾ ಗ್ರಾಮಗಳ ಜಲ ಸಂಪನ್ಮೂಲ ಬಳಸಿಕೊಂಡು ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ನೀರು ಪೂರೈಸುವ ಯೋಜನೆ ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬಂದಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿರುವ ನೀರಿನ ಘಟಕಗಳ ಅವಸ್ಥೆ ನೋಡಿದರೆ ಜನರ ಆರೋಪ ಪುಷ್ಟೀಕರಿಸುವಂತಿದೆ. ಎರಡೂ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಸೂಕ್ತ ನಿರ್ವಹಣೆ ಇಲ್ಲದೇ ಅನೇಕ ಕಡೆಗಳಲ್ಲಿ ಬಾಗಿಲು ಮುಚ್ಚಿವೆ. ಘಟಕಗಳಲ್ಲಿ ಆಗಾಗ ಎದುರಾಗುವ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕು. ಆದರೆ, ಆ ಕೆಲಸ ಸಕಾಲಕ್ಕೆ ಆಗುತ್ತಿಲ್ಲ. ಇದರಿಂದಾಗಿ ಇಡೀ ಘಟಕವೇ ‘ಅನಾರೋಗ್ಯ’ಕ್ಕೆ ಒಳಗಾಗುತ್ತಿದೆ.

ಬಹುತೇಕ ಕಡೆಗಳಲ್ಲಿ ಜನವಸತಿ ಪ್ರದೇಶದಿಂದ ದೂರದಲ್ಲಿ ಘಟಕಗಳನ್ನು ನಿರ್ಮಿಸಲಾಗಿದೆ. ಅವುಗಳ ಸುತ್ತಲೂ ಪೊದೆ ಬೆಳೆದಿರುತ್ತದೆ. ಇನ್ನು, ಕೆಲವೆಡೆ ತಿಪ್ಪೆ ಗುಂಡಿಗಳಿಗೆ ಹೊಂದಿಕೊಂಡಂತೆ ಘಟಕಗಳಿವೆ. ಸುತ್ತಲೂ ಹೊಲಸಿರುವುದರಿಂದ ಯಾರೂ ಆ ಕಡೆ ತಲೆ ಹಾಕುವುದಿಲ್ಲ. ಕೆಲವು ಗ್ರಾಮದಿಂದ ದೂರದಲ್ಲಿರುವುದರಿಂದ ಕಳ್ಳರು ಯಂತ್ರಗಳನ್ನು ಕದ್ದೊಯ್ಯುತ್ತಿದ್ದಾರೆ. ಇಂತಹ ಘಟನೆಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಆದರೆ, ಅದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವುದು ಜನರ ಆರೋಪ.

ಬಳ್ಳಾರಿ ನಗರದಲ್ಲಿ ಸುಮಾರು 35 ಶುದ್ಧ ನೀರಿನ ಘಟಕಗಳಿವೆ. ಇದರಲ್ಲಿ ಶೇ 75ರಷ್ಟು ಘಟಕಗಳು ಆರು ತಿಂಗಳು ವರ್ಷದಿಂದ ಕೆಲಸ ಮಾಡುತ್ತಿಲ್ಲ. ಕೆಟ್ಟು ಹೋಗಿರುವ ಘಟಕಗಳ ರಿಪೇರಿ ಹಾಗೂ ನಿರ್ವಹಣೆಗೆ ಮೂರು ಸಲ ಟೆಂಡರ್‌ ಕರೆದರೂ ಯಾರೂ ಅರ್ಜಿ ಹಾಕಿಲ್ಲ ಎಂದು ಮಹಾನಗರಪಾಲಿಕೆ ಮೂಲಗಳು ತಿಳಿಸಿವೆ.

ಮಹಾನಗರಪಾಲಿಕೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ನಡುವಿನ ಸಮನ್ವಯತೆ ಕೊರತೆ ಪರಿಣಾಮವಾಗಿ ನೀರಿನ ಘಟಕಗಳು ಈ ಸ್ಥಿತಿಗೆ ತಲುಪಿವೆ. ಕೆಲವೆಡೆ ಆರ್‌.ಒ ಘಟಕಗಳಿಗೆ ನೀರು ಪೂರೈಸುವ ಕೊಳವೆ ಬಾವಿಗಳು ಕೈಕೊಟ್ಟಿವೆ. ಕೆಲವೆಡೆ ಯಂತ್ರೋಪಕರಣಗಳು ಕೆಟ್ಟಿವೆ. ಕಾಯಿನ್‌ ಬಾಕ್ಸ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಖಾಸಗಿಯವರು ನಿರ್ವಹಣೆ ಮಾಡುತ್ತಿರುವ ಆದಾಯ ಬರುವ ನೀರಿನ ಘಟಕಗಳು ಸುಸ್ಥಿಯಲ್ಲಿವೆ ಎಂದೂ ಮೂಲಗಳು ಹೇಳಿವೆ.

ಸರ್ಕಾರದಿಂದ ನೀರಿನ ಘಟಕಗಳನ್ನು ಸಮರ್ಪಕವಾಗಿ ನಡೆಸದ ಕಾರಣ ಜನ ಸಹಜವಾಗಿಯೇ ಖಾಸಗಿಗಳತ್ತ ಮುಖ ಮಾಡುತ್ತಿದ್ದಾರೆ. ಹೆಚ್ಚಿಗೆ ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಅದರಲ್ಲೂ ನಗರ ಪ್ರದೇಶದಲ್ಲಿ ಈ ಪ್ರಮಾಣ ಹೆಚ್ಚಿದೆ.

‘ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಘಟಕಗಳನ್ನು ಮಾಡಿದೆ. ಆದರೆ, ಅವುಗಳು ಊರ ಹೊರಗೆ ಮಾಡುತ್ತಾರೆ. ಸೂಕ್ತ ನಿರ್ವಹಣೆ ಮಾಡುವುದಿಲ್ಲ. ನಿರ್ವಹಣೆ ಇರದಿದ್ದರೆ ಶುದ್ಧ ನೀರು ಸಿಗುವುದಿಲ್ಲ. ಹೀಗಾಗಿಯೇ ಜನ ಅವುಗಳತ್ತ ಮುಖವೇ ಮಾಡುತ್ತಿಲ್ಲ’ ಎನ್ನುತ್ತಾರೆ ಹೊಸಪೇಟೆಯ ರಮೇಶ.

ವಿಜಯನಗರ ಜಿಲ್ಲೆಯ ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿ

ತಾಲ್ಲೂಕು; ಒಟ್ಟು; ಸುಸ್ಥಿತಿ; ಸ್ಥಗಿತ

ಹೊಸಪೇಟೆ; 71; 64; 08

ಹರಪನಹಳ್ಳಿ; 173; 168; 05

ಹಗರಿಬೊಮ್ಮನಹಳ್ಳಿ; 156; 142; 24

ಹೂವಿನಹಡಗಲಿ; 112; 100; 12

ಕೂಡ್ಲಿಗಿ/ಕೊಟ್ಟೂರು; 196; 147; 49

ಆಧಾರ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ವಿಜಯನಗರ ಜಿಲ್ಲೆ

ದುರ್ನಾತದ ನಡುವೆ ಘಟಕ:

ಹರಪನಹಳ್ಳಿ: ತಾಲ್ಲೂಕಿನ ಅರಸಿಕೇರಿ ಸಂತೆ ಮೈದಾನದ ಬಳಿ ಶುದ್ದ ಕುಡಿಯುವ ನೀರಿನ ಘಟಕದ ಸುತ್ತಲೂ ತಿಪ್ಪೆ ಇದೆ. ದುರ್ನಾತದ ನಡುವೆ ಇರುವುದರಿಂದ ಯಾರೂ ಹೋಗುವುದಿಲ್ಲ. ಇದರಿಂದಾಗಿ ಅದನ್ನು ಮುಚ್ಚಲಾಗಿದೆ.

ಉಚ್ಚಂಗಿದುರ್ಗ ಊರಾಚೆ ಇರುವ ಘಟಕ, ಕಡತಿ, ರಾಮನಗರದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಶೀಘ್ರ ಆರಂಭಿಸಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎ.ಇ.ಇ ಸಿದ್ದರಾಜು ತಿಳಿಸಿದರು.

ಸ್ಥಾಪಿಸಿದ ವೇಗದಲ್ಲಿಯೇ ಸ್ಥಗಿತ:

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಂತೆ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ವೇಗದಲ್ಲಿಯೇ ಬಂದ್‌ ಆಗಿದೆ.

ಕಿಡಿಗೇಡಿಗಳು ಘಟಕದ ಬೀಗ ಮುರಿದು ಲಕ್ಷಾಂತರ ರೂಪಾಯಿ ಬೆಲೆಬಾಳುವ ಯಂತ್ರಗಳನ್ನೆಲ್ಲಾ ದೋಚಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿರುವ ನೂರಾರು ಕುಟುಂಬಗಳು ಮತ್ತು ಶಾಲೆಯ ವಿದ್ಯಾರ್ಥಿಗಳು ಶುದ್ಧ ನೀರಿಗಾಗಿ ಬೇರೆ ಕಡೆಗಳಿಗೆ ಅಲೆಯಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ಪಟ್ಟಣದ ತರಕಾರಿ ಮಾರುಕಟ್ಟೆ ಹಾಗೂ ತಾಲ್ಲೂಕಿನ ಹಂಪಾಪಟ್ಟಣ ಮತ್ತು ವರದಾಪುರ ಗ್ರಾಮಗಳಲ್ಲಿ ಇರುವ ಘಟಕಗಳು ಸ್ಥಗಿತಗೊಂಡು ಹಲವು ತಿಂಗಳಾಗಿದ್ದರೂ ದುರಸ್ತಿಗೊಳಿಸಿಲ್ಲ.

ಶುದ್ಧ ನೀರಿನಿಂದ ವಂಚಿತ:

ಕೂಡ್ಲಿಗಿ: ತಾಲ್ಲೂಕಿನಲ್ಲಿ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಮುಚ್ಚಿರುವುದರಿಂದ ಜನ ನೀರಿನಿಂದ ವಂಚಿತರಾಗುತ್ತಿದ್ದಾರೆ.

ಈ ಹಿಂದೆ ವಿವಿಧ ಯೋಜನೆಗಳಲ್ಲಿ ಅನೇಕ ಕಡೆ ಘಟಕಗಳನ್ನು ನಿರ್ಮಿಸಲಾಗಿತ್ತು. ನಿರ್ವಹಣೆ, ಹಸ್ತಾಂತರದ ಜವಾಬ್ದಾರಿ ಖಾಸಗಿ ಏಜೆನ್ಸಿಯವರಿಗೆ ವಹಿಸಲಾಗಿತ್ತು. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯಿಂದ ಮೇಲುಸ್ತುವಾರಿ ನಡೆಸಲಾಗುತ್ತಿತ್ತು. ಕೆಲವು ಏಜೆನ್ಸಿಯವರು ನಿರ್ವಹಣೆ ಮಾಡುತ್ತಿಲ್ಲ. ಇಲಾಖೆಗೂ ಹಸ್ತಾಂತರ ಮಾಡಿಲ್ಲ. ಇದರಿಂದ ಜನರಿಗೆ ಶುದ್ಧ ನೀರು ಸಿಗದಂತಾಗಿದೆ.

ನೀರಿಗೆ ಬೇರೆಡೆ ಅಲೆಯಬೇಕು:

ಹೂವಿನಹಡಗಲಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಪುರಸಭೆಯವರು ತೆರೆದಿರುವ ನೀರಿನ ಘಟಕ ಮೂರ್ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದೆ. ವಿಜಯನಗರ ಬಡಾವಣೆ, ನಜೀರ್ ನಗರ, ಕೈಗಾರಿಕಾ ಪ್ರದೇಶದ ಜನರು ಶುದ್ಧ ನೀರಿಗಾಗಿ ಬೇರೆಡೆ ಅಲೆಯುವಂತಾಗಿದೆ.

‘ಮೆಮರಿನ್ ಹಾಳಾಗಿ ಕೆಲ ಘಟಕಗಳು ದುರಸ್ತಿಯಲ್ಲಿವೆ. ಸ್ಥಗಿತಗೊಂಡ ಘಟಕಗಳನ್ನು ಒಂದೆರಡು ದಿನಗಳಲ್ಲೇ ದುರಸ್ತಿಗೊಳಿಸಿ ಜನರಿಗೆ ಶುದ್ಧ ನೀರು ಪೂರೈಕೆ ಮಾಡುತ್ತೇವೆ’ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎ.ಇ.ಇ ನಾಗಪ್ಪ ತಿಳಿಸಿದರು.

ಖಾಸಗಿ ಘಟಕಗಳದ್ದೇ ಕಾರುಬಾರು:

ಕೊಟ್ಟೂರು: ತಾಲ್ಲೂಕಿನಾದ್ಯಂತ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ನಿರುಪಯುಕ್ತವಾಗಿವೆ. ಇದರಿಂದ ಜನತೆ ಶುದ್ಧ ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಪಟ್ಟಣದಲ್ಲಿ 20 ಘಟಕಗಳು ಇದ್ದು ಇವುಗಳಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ಒಂದು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಉಳಿದ 19 ಘಟಕಗಳಲ್ಲಿ ಬಹುತೇಕ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ.

ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲೂ ಸಹ 63 ಘಟಕಗಳು ಇದ್ದು ಇವುಗಳ ನಿರ್ವಹಣೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಮಾಡುತ್ತಿದೆ. ಇವುಗಳಲ್ಲಿ 17 ಕ್ಕೂ ಹೆಚ್ಚು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಮಸ್ಥರು ಇಂದಿಗೂ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಇವುಗಳ ಲಾಭವನ್ನು ಖಾಸಗಿ ಘಟಕಗಳು ಪಡೆಯುತ್ತಿದ್ದಾರೆ.

ಪ್ರಜಾವಾಣಿ ತಂಡ: ಶಶಿಕಾಂತ ಎಸ್‌. ಶೆಂಬೆಳ್ಳಿ, ವಿಶ್ವನಾಥ ಡಿ., ಸಿ. ಶಿವಾನಂದ, ಎ.ಎಂ. ಸೋಮಶೇಖರಯ್ಯ, ಕೆ. ಸೋಮಶೇಖರ್‌, ಎಸ್‌.ಎಂ. ಗುರುಪ್ರಸಾದ್‌, ವಾಗೀಶ್‌ ಎ. ಕುರುಗೋಡು, ಪಂಡಿತಾರಾಧ್ಯ ಎಚ್‌.ಎಂ. ಮೆಟ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT