ಸಿರುಗುಪ್ಪ/ತೆಕ್ಕಲಕೋಟೆ: ‘ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದರ ಮೂಲಕ ನವಭಾರತ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಮನವಿ ಮಾಡಿದರು.
ಸಿರುಗುಪ್ಪದ ನಿಟ್ಟೂರು ನರಸಿಂಹಮೂರ್ತಿ ಬಯಲು ವೇದಿಕೆಯಲ್ಲಿ ಸೋಮವಾರ ರಾತ್ರಿ ಏರ್ಪಡಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಭವಿಷ್ಯ ಮುಗಿದಿದೆ. ಗುಜರಾತ್, ಉತ್ತರ ಪ್ರದೇಶದಲ್ಲಿ ಸರ್ವನಾಶವಾಗಿದೆ. ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದೆ. ಆ ಪಕ್ಷವನ್ನು ಸಮುದ್ರಕ್ಕೆ ಎಸೆಯುವ ಕಾಲ ಬಂದಿದೆ ಎಂದು ಟೀಕಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆ ಸೆಮಿಫೈನಲ್. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ದೇಶದ ಹಾದಿಯನ್ನು ಬಿಜೆಪಿಗೆ ತೆರೆಯಬೇಕು. ನರೇಂದ್ರ ಮೋದಿ ನೇತೃತ್ವದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ಕರ್ನಾಟಕ ವಿಕಾಸದ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದೆ ಎಂದರು.
ರಾಜ್ಯ ಬಿಜೆಪಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಬಡ್ಡಿ ರಹಿತ ಐದು ಲಕ್ಷದವರೆಗಿನ ಕೃಷಿ ಸಾಲ ಕೊಡುತ್ತಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಸರ್ಕಾರದಿಂದ ₹10 ಸಾವಿರದವರೆಗೆ ಹೆಚ್ಚುವರಿ ಅನುದಾನ ಲಭಿಸಲಿದೆ. 53 ಲಕ್ಷ ಕರ್ನಾಟಕದ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ ಹಣ ವರ್ಗಾವಣೆ ಆಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ 12ನೇ ಶತಮಾನದಲ್ಲಿ ಭಗವಾನ್ ಬಸವೇಶ್ವರರಿಗೆ ಜನ್ಮ ನೀಡಿತು. ಬಸವನ ಸಂದೇಶ ಬರೀ ಕರ್ನಾಟಕಕ್ಕೆ ಸೀಮಿತವಲ್ಲ, ಇಡೀ ವಿಶ್ವಕ್ಕೆ ಸಂಬಂಧಿಸಿದ್ದು. ಪ್ರಧಾನಿ ಲಂಡನ್‌ಗೆ ಹೋದರೆ ಬಸವೇಶ್ವರರ ಬಗ್ಗೆ ಮಾತನಾಡುತ್ತಾರೆ. ರಾಹುಲ್ ಬಾಬಾ ಲಂಡನ್‌ನಲ್ಲಿ ಚೀನಾ ಬಗ್ಗೆ ಪ್ರಸ್ತಾಪಿಸುತ್ತಾರೆ. ಇದು ಮೋದಿ ಮತ್ತು ರಾಹುಲ್ ನಡುವೆ ಇರುವ ವ್ಯತ್ಯಾಸ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.