ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಆವರಣದಲ್ಲಿ ನೀರಿಗೆ ನೂರು ಸಮಸ್ಯೆ !

ನಲ್ಲಿಯಲ್ಲಿ ವ್ಯರ್ಥವಾಗುತ್ತಿರುವ ಜೀವಜಲ, ಇದ್ದೂ ಇಲ್ಲದಂತಿರುವ ಘಟಕ, ಪರದಾಟ
Last Updated 26 ಏಪ್ರಿಲ್ 2016, 10:29 IST
ಅಕ್ಷರ ಗಾತ್ರ

ಹೊಸಪೇಟೆ: ಒಂದೆಡೆ ಹನಿ ನೀರಿಗಾಗಿ ಜನತೆ ಪರದಾಡುತ್ತಿದ್ದರೆ, ಮತ್ತೊಂದೆಡೆ ಜೀವಜಲ ವ್ಯರ್ಥವಾಗಿ ಹರಿಯುತ್ತಿದೆ. ಇದಕ್ಕೆ ನಗರದ ನೂರುಹಾಸಿಗೆ ಆಸ್ಪತ್ರೆ  ಆವರಣವೇ ಸಾಕ್ಷಿ. ಆಸ್ಪತ್ರೆ ಆವರಣದ ನಲ್ಲಿಯಿಂದ ನೀರು ಪೋಲಾಗುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಕಣ್ಣು ಮುಚ್ಚಿ ಕುಳಿತಿದ್ದಾರೆ.

ಹೀಗೆ ವ್ಯರ್ಥವಾಗಿ ಹರಿಯುವ ನೀರು ಆಸ್ಪತ್ರೆ ಆವರಣದಲ್ಲಿ ನಿಂತು ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ರೋಗದಿಂದ ಮುಕ್ತಿಯಾಗಲು ಬರುವ ರೋಗಿಗಳು ಮತ್ತೆ ರೋಗ ಹತ್ತಿಸಿಕೊಂಡು ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ರೋಗಿಗಳು, ಅವರ ಜೊತೆ ಬರುವ ಸಂಬಂಧಿಕರು ಕಲುಷಿತ ರಾಡಿ ನೀರನ್ನೇ  ತುಳಿದುಕೊಂಡು ಓಡಾಡಬೇಕಾಗಿದೆ.

ಶುದ್ಧ ನೀರಿನ ಕೊರತೆ:
ಆಸ್ಪತ್ರೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿಗೆ ಹಲವು ಸಮಸ್ಯೆ ನಿರ್ಮಾಣವಾಗಿದೆ.  ಕಲುಷಿತ ನೀರನ್ನೇ ಸೇವಿಸಿ ಹೊಸ ರೋಗಕ್ಕೆ ತುತ್ತಾಗುವ ಭೀತಿ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸುತ್ತಮುತ್ತಲಿನ ನಾಗರಿಕರನ್ನು ಆವರಿಸಿದೆ. ಇಲ್ಲಿ ಬರುವ ರೋಗಿಗಳ ಅನುಕೂಲಕ್ಕೆಂದೇ ಜೈನ್‌ ಸಮಾಜ ಕುಡಿಯುವ ನೀರಿನ ವ್ಯವಸ್ಥಿತ ಟ್ಯಾಂಕ್ ಕಟ್ಟಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ.

ಈ ಟ್ಯಾಂಕರ್ ಯಾವತ್ತೂ ಖಾಲಿಯೇ ಇದ್ದು, ಅದರ ಸುತ್ತ ನೀರು ನಿಂತು ಕ್ರೀಮಿ ಕೀಟಗಳು ಹುಟ್ಟಿಕೊಂಡಿದ್ದು  ಹೊಸ ರೋಗಳಿಗೆ ಆಹ್ವಾನ ನೀಡುತ್ತಿದೆ. ಪಕ್ಕದಲ್ಲಿಯೇ ಇರುವ ನಗರಸಭೆಯ ಕೊಳಾಯಿಯಲ್ಲಿ ನೀರು ವೃಥಾ ವ್ಯರ್ಥವಾಗಿ ಹೋಗುತ್ತಿದೆ. ರೋಗಿಗಳಿಗಾಗಿ ಆಸ್ಪತ್ರೆ ಆವರಣದಲ್ಲಿ ಮತ್ತೊಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದೆಯಾದರೂ ಅದು ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಅದರಿಂದ ಒಂದು ದಿನ ನೀರು ಬಂದರೆ ಇನ್ನು ವಾರಗಟ್ಟಲೇ ನೀರು ಬರುವುದಿಲ್ಲ.

‘ರೋಗಿಗಳಿಗೆ ಹಾಗೂ ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಶುದ್ಧ ನೀರು ಒದಗಿಸಲು ಗುಣಮಟ್ಟದ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು   ಅನುಮತಿ ಕೇಳಿದರೂ ಇಲಾಖೆ ಒಪ್ಪಿಗೆ ನೀಡದಿರುವುದು ಬೇಸರ ತಂದಿದೆ’ ಎನ್ನುತ್ತಾರೆ ಸೇವಾ ಬ್ರಿಗೇಡ್‌’ ಮುಖ್ಯಸ್ಥ ಭೂಪಾಳ ಪ್ರಹ್ಲಾದ್‌.

ಕೆಲ ಸಂಸ್ಥೆಗಳು ಶುದ್ಧ ನೀರಿನ ಘಟಕ ಸ್ಥಾಪಿಸಿ ಸಾರ್ವಜನಿಕರು ಹಾಗೂ ರೋಗಿಗಳಿಗೆ ಶುದ್ಧ ನೀರು ಕೊಡಲು ಮುಂದಾಗಿದ್ದರೂ, ಇಲಾಖೆಯ ನಿರ್ದೇಶನಕ್ಕಾಗಿ ಕಾಯಲಾಗುತ್ತಿದೆ.

‘ಒಡೆದು ಹೋಗಿರುವ ನಲ್ಲಿಯನ್ನು ಮತ್ತೆ ಮತ್ತೆ ಸರಿಪಡಿಸಿದರೂ  ಅದನ್ನು ಒಡೆಯುವ, ಪರಿಸರವನ್ನು ಹಾಳುಮಾಡುವ ಕೆಲ ಕಿಡಿಗೇಡಿಗಳಿಂದಾಗಿ ಇಂತಹ ಸಮಸ್ಯೆ ಉದ್ಭವಿಸುತ್ತವೆ. ನಲ್ಲಿಯನ್ನು ಆದಷ್ಟು ಬೇಗನೇ ಸರಿಪಡಿಸಿ, ನೀರು ಪೋಲಾಗು­ವುದುನ್ನು ತಪ್ಪಿಸಲಾಗು­ವುದು’ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್‌ ಶ್ರೀನಿವಾಸ ತಿಳಿಸಿದರು.

ಈ ಆಸ್ಪತ್ರೆ ಆವರಣಕ್ಕೆ ಚಿಕಿತ್ಸೆಗೆ ಬರಲ ಹಿಂದೆ ಮುಂದೆ ನೋಡಬೇಕು. ಅಷ್ಟೊಂದು ಕಲುಷಿತ ವಾತಾವರಣ ಆವರಣದಲ್ಲಿದೆ. ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದನ್ನು ತಪ್ಪಿಸಿ, ಶುದ್ಧ ವಾತಾವರಣ ನಿರ್ಮಾಣ ಮಾಡಿ ರೋಗಿಗಳ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT