ಗುರುವಾರ , ನವೆಂಬರ್ 21, 2019
23 °C
ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ

259 ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕೊರತೆ: ಡಿಡಿಪಿಐ

Published:
Updated:
Prajavani

ದೇವನಹಳ್ಳಿ: ಪ್ರಸ್ತುತ 2019–20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ 259 ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕೊರತೆ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ (ಡಿಡಿಪಿಐ) ಕೃಷ್ಣಮೂರ್ತಿ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದರು.

5 ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳ ಸಂಖ್ಯೆ 59 ಇದೆ, 10 ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳ ಸಂಖ್ಯೆ 200 ಇದೆ, ಅಂತಹ ಶಾಲೆಗಳಲ್ಲಿನ ಮಕ್ಕಳಿಗೆ ಹತ್ತಿರವಿರುವ ಶಾಲೆಗಳಿಗೆ ವ್ಯಾಸಂಗಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ 23 ವಲಸಿಗರ ಕುಟುಂಬದ ಮಕ್ಕಳು ಇದ್ದಾರೆ ಎಂದು ಪತ್ತೆ ಹಚ್ಚಿಸಲಾಗಿದ್ದರು ಈಚೆಗೆ  ಅವರೆಲ್ಲಿದ್ದಾರೆ ಎಂಬುದುರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.

ನಾಲ್ಕು ತಾಲ್ಲೂಕಿನಲ್ಲಿ ನಾಲ್ಕು ಕರ್ನಾಟಕ ಪಬ್ಲಿಕ್ ಶಾಲೆ ಆರಂಭವಾಗಿ ಕಾರ್ಯನಿರ್ವಹಿಸುತ್ತಿದ್ದು, ಪೂರ್ವ ಪ್ರಾಥಮಿಕ ಮತ್ತು ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತಿದೆ. ತರಗತಿಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿದ್ದು ಹೆಚ್ಚುವರಿ ವಿಭಾಗ ಆರಂಭಿಸಬೇಕು, ಕೊಠಡಿ ಸಮಸ್ಯೆ ಮತ್ತು ಶಿಕ್ಷಕರ ಕೊರತೆ ಇದೆ. ಕೆಲವೊಂದು ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿ ತಾತ್ಕಾಲಿಕವಾಗಿ ಶಿಕ್ಷಕರನ್ನು ಬೋಧನೆಗೆ ನಿಯೋಜಿಸಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಮಾತನಾಡಿ, ಕಡಿಮೆ ಹಾಜರಾತಿ ಇದ್ದರೂ ಮಕ್ಕಳ ಶಿಕ್ಷಣಕ್ಕೆ ಧಕ್ಕೆಯಾಗಬಾರದು ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು, ನೂತನವಾಗಿ ಆಂಗ್ಲ ಶಾಲೆಯನ್ನು ಆರಂಭಿಸುವಾಗ ಕುಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲಿ ಬಸ್ ಸೌಲಭ್ಯವಿದೆ ರಸ್ತೆ ಪಕ್ಕದಲ್ಲಿ ಶಾಲೆ ಇದೆ ಅಲ್ಲಿ ಆಯ್ಕೆ ಬೇಡ, ಮುಂದಿನ ಶೈಕ್ಷಣಿಕ ಸಾಲಿನಿಂದ ಕನಿಷ್ಠ ಹೋಬಳಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ ಆರಂಭಕ್ಕೆ ಸೂಕ್ತ ಶಾಲೆಗಳನ್ನು ಆಯ್ಕೆ ಮಾಡಿ ಶಿಕ್ಷಣ ಆಯುಕ್ತರಿಗೆ ಕಡತಕಳುಹಿಸಿ ಎಂದು ಹೇಳಿದರು.

‘ಸರ್ಕಾರಿ ಇಲಾಖೆಗಳ ವಿವಿಧ ಕಟ್ಟಡದ ಕಾಮಗಾರಿ ಕಳಪೆ ಗುಣಮಟ್ಟ ಎಂಬ ದೂರುಗಳು ಬರುತ್ತಿವೆ. ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಉತ್ತರಿಸಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಪ್ರಸ್ಥಾಪಿಸಿದರು, ಅಧಿಕಾರಿ ಗೈರು ಎಂದು ಅರಿತ ಅವರು ಈವರೆಗೆ ಒಂದು ಸಭೆಯಲ್ಲಿ ಹಾಜರಾಗಿಲ್ಲ, ಕಾರಣ ಗೊತ್ತಿಲ್ಲ ಅವರಿಗೊಂದು ನೊಟೀಸ್ ನೀಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಸುಲೋಚನಾ ಮಾಹಿತಿ ನೀಡಿ, ಜಿಲ್ಲೆಯಲ್ಲಿ 16 ಕಡೆ ಕೃಷಿ ಯಾಂತ್ರಿಕರಣ ಯೋಜನೆಯಡಿಯಲ್ಲಿ ರೈತರಿಗೆ ರಿಯಾತಿ ದರದಲ್ಲಿ ಬೆಳೆ ಕಟಾವು ಯಂತ್ರದ ವ್ಯವಸ್ಥೆ ಇದೆ ಎಂದರು.  ಈಗಾಗಲೇ ಮುಂಗಾರು ಕೃಷಿ ಬಿತ್ತನೆಯಾಗಿದೆ, ಪೋಷಕ ಗೊಬ್ಬರಗಳು ರೈತ ಸಂಪರ್ಕದಲ್ಲಿವೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಪ್ಪಣ ಮಾತನಾಡಿ, ಕಟಾವು ಯಂತ್ರ ತಂದು ಇಟ್ಟರೆ ಅವುಗಳನ್ನು ಕಾರ್ಯನಿರ್ವಹಣೆ ಮಾಡುವವರು ಯಾರು, ಜೋಳದ ಕಡ್ಡಿ ಒಂದೆರಡು ಇಂಚು ಕತ್ತರಿಸುವ ಯಂತ್ರವನ್ನಾದರೂ ನೀಡಿದರೆ ಪಶು ಪಾಲಕರಿಗೆ ಅನುಕೂಲವಾಗಲಿದೆ ಎಂದರು.

ಅದಕ್ಕೆ ಉತ್ತರಿಸಿದ ಸುಲೋಚನಾ, ಜೋಳದ ಕಡ್ಡಿ ಕಟಾವು ಯಂತ್ರ ಪಶು ಇಲಾಖೆಯಿಂದ ಮತ್ತು ಹಾಲು ಒಕ್ಕೂಟ ಶಿಬಿರದ ವತಿಯಿಂದ ರಿಯಾಯಿತಿ ದರದಲ್ಲಿ ಸಿಗಲಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಗೌಡ ಮಾತನಾಡಿ, ಈ ಹಿಂದೆ ಸಭೆಯಲ್ಲಿ ಪ್ರಸ್ತಾಪವಾದಂತೆ ರಾತ್ರಿ ಪಾಳಿಯಲ್ಲಿ ಹೆರಿಗೆ ವೈದ್ಯರನ್ನು ನಿಯೋಜನೆ ಮಾಡಲಾಗಿದೆ, ದೊಡ್ಡಬಳ್ಳಾಪುರ ಆಸ್ಪತ್ರೆ ಸುಧಾರಣೆಯಾಗಿದೆ, ದೇವನಹಳ್ಳಿ ಆರೋಗ್ಯ ಆಸ್ಪತ್ರೆಯಲ್ಲಿನ ಕಟ್ಟಡದಿಂದ ಮಳೆ ನೀರು ಸೋರಿಕೆ ನಿಂತಿದೆ, ಹೊಸಕೋಟೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ ಮುನಿರಾಜು ಮಾತನಾಡಿ, ಕೊಯಿರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪದೇ ಪದೇ ವೈದ್ಯರ ಕೊರತೆ ಇದೆ, ಸ್ಥಳೀಯರು ಆಸ್ಪತ್ರೆಗೆ ಹೋದರೆ ಒಂದೊಂದು ಬಾರಿ ಬೀಗ ಹಾಕಿರುತ್ತಾರೆ ಮೊದಲು ಇದರ ಬಗ್ಗೆ ಸೂಕ್ತ ಗಮನ ಹರಿಸಿ ಎಂದು ಹೇಳಿದರು.

ಡಾ.ರಾಜೇಶ್ ಗೌಡ ಮಾತನಾಡಿ, ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 86 ವಾರ್ಷಿಕ ಕಾರ್ಯಗಳನ್ನು ಮಾಡಬೇಕು, ಒಂದೊಂದು ಬಾರಿ ವೈದ್ಯರ ಸಭೆ ಕರೆದಾಗ ಗೈರು ಅನಿವಾರ್ಯವಾದರೂ ಹಿರಿಯ ಆರೋಗ್ಯ ಸಹಾಯಕಿಯರು ಇರುತ್ತಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ. ನಾಗರಾಜ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಶೋಭಾ, ನಿರ್ದೇಶಕ ಶಿವರುದ್ರಪ್ಪ ಇದ್ದರು.

ಪ್ರತಿಕ್ರಿಯಿಸಿ (+)