ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಬನ್ನೇರುಘಟದ ಉದ್ಯಾನದಲ್ಲಿ ಬುಡಕಟ್ಟು ಉತ್ಸವ

ವಿಧಾನಪರಿಷತ್ ಸದಸ್ಯ ಶಾಂತರಾಮಸಿದ್ದಿ ನೇತೃತ್ವದಲ್ಲಿ ಕಾರ್ಯಕ್ರಮ
Last Updated 1 ಫೆಬ್ರುವರಿ 2023, 5:23 IST
ಅಕ್ಷರ ಗಾತ್ರ

ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಸ್ಥಳಾಂತರಗೊಂಡ ಅರಣ್ಯದಲ್ಲಿನ ದೇವರು, ಕೃಷಿ ಭೂಮಿ, ಕಲ್ಯಾಣಿ ಸೇರಿದಂತೆ ಭಾವನಾತ್ಮಕ ಸಂಬಂಧ ಹೊಂದಿದ್ದ ಪರಿಸರದಿಂದ ದೂರ ಉಳಿದಿದ್ದ ಹಕ್ಕಿಪಿಕ್ಕಿ ಕಾಲೊನಿಯ ಬುಡಕಟ್ಟು ಜನರಿಗೆ ಅರಣ್ಯದಲ್ಲಿನ ಅವರ ದೇವರ ಉತ್ಸವ ಮಾಡಿಸುವ ಮೂಲಕ ವಿಧಾನ ಪರಿಷತ್‌ ಸದಸ್ಯ ಶಾಂತರಾಮಸಿದ್ದಿ ಭಾವನಾತ್ಮಕ ಸಂಬಂಧಗಳಿಗೆ ಸಾಕ್ಷಿಯಾದರು.

ಮೂರು ಶತಮಾನಗಳಿಗೂ ಹೆಚ್ಚು ಕಾಲದಿಂದ ಅರಣ್ಯದಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಸಮಾಜದ ಇರುಳಿಗರು, ಹಕ್ಕಿಪಿಕ್ಕಿ ಜನಾಂಗವನ್ನು 1974ರಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಘೋಷಣೆಯಾದ ನಂತರ ಒಕ್ಕಲೆಬ್ಬಿಸಲಾಯಿತು. ಅವರನ್ನು ಅರಣ್ಯ ವ್ಯಾಪ್ತಿಯ ಹೊರಗೆ ಹಕ್ಕಿಪಿಕ್ಕಿ ಕಾಲೊನಿ ಸ್ಥಾಪಿಸಿ ಪುನರ್ವಸತಿ ಕಲ್ಪಿಸಲಾಯಿತು. ಅಂದಿನಿಂದ ತಮ್ಮ ಆಚರಣೆಗಳಿಂದ ದೂರ ಉಳಿದಿದ್ದರು. ಅರಣ್ಯ ಒಳ ಭಾಗದಲ್ಲಿದ್ದ ಮೂಗಮಾರಮ್ಮ ದೇವಿ, ಬಸವೇಶ್ವರ ಸ್ವಾಮಿ ದೇವರ ಸ್ವಾಮಿಯ ಪೂಜಾ ಸ್ಥಳಕ್ಕೆ ಅರಣ್ಯ ಇಲಾಖೆ ಅನುಮತಿಯೊಂದಿಗೆ ನೂರಾರು ಮಂದಿ ಬುಡಕಟ್ಟು ಜನರು ತೆರಳಿ ಪೂಜೆ ಸಲ್ಲಿಸುವ ಮೂಲಕ ಪುರಾತನ ಪರಂಪರೆಯನ್ನು ಸ್ಮರಿಸಿಕೊಂಡರು.

ವಿಧಾನ ಪರಿಷತ್‌ ಸದಸ್ಯ ಶಾಂತರಾಮಸಿದ್ದಿ ಮಾತನಾಡಿ, ಬುಡಕಟ್ಟು ಸಮುದಾಯದ ಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯದಲ್ಲಿನ ಧಾರ್ಮಿಕ ಸ್ಥಳಗಳು, ಸ್ಮಶಾನ, ಕಲ್ಯಾಣ ಮತ್ತು ಅರಣ್ಯ ಕಿರು ಉತ್ಪನ್ನ ಬಳಸಿಕೊಳ್ಳಲು ಅನುಮತಿ ದೊರೆಕಬೇಕು ಎಂಬ ಉದ್ದೇಶದಿಂದ ಅಖಿಲ ಭಾರತ ವನವಾಸಿ ಕಲ್ಯಾಣಾಶ್ರಮ ಸಮಿತಿ ನೇತೃತ್ವದಲ್ಲಿ ದೇಶದಲ್ಲಿರುವ 12 ಕೋಟಿ ಬುಡಕಟ್ಟು ಜನಾಂಗಗಳಿಗೆ ಅರಣ್ಯ ಹಕ್ಕು ಕಲ್ಪಿಸಿಕೊಡಲು ವಿವಿಧ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು.

ದೇಶದಲ್ಲಿ ಸುಮಾರು 400 ಬುಡಕಟ್ಟು ಸಮಾಜಗಳಿವೆ. ರಾಜ್ಯದಲ್ಲಿ 53 ಬುಡಕಟ್ಟುಗಳಿವೆ. ರಾಮನಗರ, ಮೈಸೂರು, ಚಾಮರಾಜನಗರ, ಮಡಿಕೇರಿ, ಚಿಕ್ಕಮಗಳೂರು, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬುಡಕಟ್ಟು ಜನಾಂಗಗಳನ್ನು ಗುರುತಿಸಿ ಅವರ ಧಾರ್ಮಿಕ ಸ್ಥಳಗಳು, ಸ್ಮಶಾನ, ಕೃಷಿ ಭೂಮಿ ಸೇರಿದಂತೆ ಸಾಧ್ಯವಿರುವ ಅವಕಾಶಗಳನ್ನು ಕಲ್ಪಿಸಿಕೊಡಲು ಮತ್ತು ಶಿಕ್ಷಣ ದೊರೆಯುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಹಕ್ಕಿಪಿಕ್ಕಿ ಕಾಲೊನಿಯ ಭಾಗದಲ್ಲಿನ ದೇವಾಲಯ, ಶಿಲಾಶಾಸನಗಳು, ವೀರಗಲ್ಲುಗಳು, ಕೆರೆ, ಸ್ಮಶಾನ ಈ ಭಾಗದ ಇತಿಹಾಸದ ಕುರುಹುಗಳಾಗಿವೆ. ಬುಡಕಟ್ಟು ಸಮುದಾಯವು ವಿವಿಧ ಧಾರ್ಮಿಕ ಆಚರಣೆ ಮಾಡುತ್ತಾರೆ. ಅರಣ್ಯದಲ್ಲಿ ಬದುಕು ಕಟ್ಟಿಕೊಂಡಿರುವವರಿಗೆ ನಾಗರಿಕ ಹಕ್ಕು ಮತ್ತು ಸಾಮಾಜಿಕ ಭದ್ರತೆ ನೀಡಬೇಕಿರುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ಬುಡಕಟ್ಟು ಸಮುದಾಯಗಳು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.

ಎಸ್‌.ಸಿ, ಎಸ್‌.ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕಿರಣ್‌ ಕುಮಾರ್‌ ಕೊತ್ತಗೆರೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಇದ್ದರು.

ಬುಡಕಟ್ಟು ಸಮಾಜ ಕಾಡಿನ ಹಿತರಕ್ಷಕ

ದಕ್ಷಿಣ ಭಾರತ ವಲಯ ರಾಷ್ಟ್ರೀಯ ವನವಾಸಿ ಕಲ್ಯಾಣ ಸಂಘಟನೆಯ ಕಾರ್ಯದರ್ಶಿ ಶ್ರೀಪಾದ್‌ ಮಾತನಾಡಿ, ಅರಣ್ಯದ ಅಂಚಿನಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳ ರಕ್ಷಣೆ ನಮ್ಮ ಬದ್ಧತೆಯಾಗಿದೆ ಎಂದರು.

ಬುಡಕಟ್ಟು ಸಮಾಜ ಕಾಡಿನ ಹಿತರಕ್ಷಕರಾಗಿದ್ದಾರೆ. ಇವರು ಈ ಪ್ರದೇಶದ ಪ್ರಾಣಿಗಳು ಮತ್ತು ಖನಿಜಗಳ ರಕ್ಷಣೆ ಮತ್ತು ಫಸಲಿನ ಮೇಲೆ ಸಂಪೂರ್ಣ ಹಕ್ಕು ಹೊಂದಿರುತ್ತಾರೆ. ಕಾಡು ಪ್ರಾಣಿಗಳೊಂದಿಗೆ ಸಹಬಾಳ್ವೆ ನಡೆಸುವ ಇವರಿಗೆ ಹಕ್ಕುಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಕಂದಾಯ, ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಇವರಿಗೆ ದೊರೆಯಬೇಕಾದ ಸೌಲಭ್ಯ ಕಲ್ಪಿಸಬೇಕು ಎಂದರು.

ಬುಡಕಟ್ಟು ಆಚರಣೆಗೆ ಒತ್ತು

ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಎಚ್‌.ಆರ್‌.ಜಿ. ರವೀಶ್‌ ಗೌಡ ಮಾತನಾಡಿ, ‘ಸುಮಾರು ಮೂರು ಶತಕಗಳ ಹಿಂದೆ ವರದಹಳ್ಳಿಕಟ್ಟೆ ಎಂಬ ಪ್ರದೇಶವಿದ್ದು, ಇಲ್ಲಿ ಹಲವಾರು ಬುಡಕಟ್ಟು ಆಚರಣೆಗಳು ನಡೆಯುತ್ತಿದ್ದವು. ಆದರೆ ಈ ಭಾಗದ ಜನತೆಯನ್ನು ಒಕ್ಕಲೆಬ್ಬಿಸಿದ ನಂತರ ಈ ಆಚರಣೆಗಳು ನಿಂತವು’ ಎಂದರು.

ಈ ವರ್ಷದಿಂದ ಮೂಗಮಾರಮ್ಮ ದೇವಿಯ ಜಾತ್ರೆ ಆಚರಿಸಲಾಗುತ್ತಿದೆ. ಧಾರ್ಮಿಕ ಆಚರಣೆಗಳು ಬುಡಕಟ್ಟು ಸಮುದಾಯ ಧಾರ್ಮಿಕ ಭಾವನೆಯಾಗಿದೆ. ಗ್ರಾಮದಲ್ಲಿ ಅರಣ್ಯ ಹಕ್ಕು ಸಮಿತಿ ರಚನೆಯು ಅರಣ್ಯ ಸಂರಕ್ಷಣೆ ಮತ್ತು ಬುಡಕಟ್ಟು ಸಮುದಾಯ ಹಕ್ಕುಗಳ ಜಾರಿಗೆ ಪೂರಕವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT