ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿಗೆ ಮೂರು ಕೇಂದ್ರಗಳಲ್ಲಿ ಮಾತ್ರ ಅವಕಾಶ; ಇನ್ನೂ ತಪ್ಪಿಲ್ಲ ಆಧಾರ್ ಸಮಸ್ಯೆ

Last Updated 13 ಅಕ್ಟೋಬರ್ 2018, 13:01 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದಲ್ಲಿ ಆಧಾರ್ ನೋಂದಣಿಗಾಗಿ ಕಾರ್ಯನಿರ್ವಹಿಸುತ್ತಿರುವುದು ಮೂರು ಕೇಂದ್ರಗಳು ಮಾತ್ರ ಉಳಿದಂತೆ ಇಡೀ ತಾಲ್ಲೂಕಿನಲ್ಲಿ ಎಲ್ಲೂ ಸಹ ಆಧಾರ್ ನೋದಣಿ ನಡೆಯುತ್ತಿಲ್ಲ.ಇದರಿಂದಾಗಿ ನಗರದ ಚಿಕ್ಕಪೇಟೆಯಲ್ಲಿನ ಖಾಸಗಿ ಆಧಾರ್ ನೋಂದಣಿ ಕೇಂದ್ರ ಹಾಗೂ ಎಸ್ ಬಿಐ, ಕಲ್ಪತರು ಗ್ರಾಮೀಣ ಬ್ಯಾಂಕಿನಲ್ಲಿನ ಆಧಾರ್ ನೋಂದಣಿಗಾಗಿ ಜನರು ಬೆಳಗಿನಿಂದಲೇ ಸಾಲುಗಟ್ಟಿ ನಿಲ್ಲುವಂತಾಗಿದೆ.

ಗ್ರಾಮ ಪಂಚಾಯಿತಿಗಳಲ್ಲಿ ಪ್ರಾರಂಭಿಸಲಾದ ನಾಗರಿಕ ಗುರುತಿನ ಚೀಟಿಯಾದ ಆಧಾರ್ ಕಾರ್ಡ್‍ನ ತಿದ್ದುಪಡಿ ಕೇಂದ್ರಗಳು ಸರ್ವರ್ ಸಮಸ್ಯೆ, ತಂತ್ರಾಂಶದ ಉನ್ನತೀಕರಣ ಇಲ್ಲದ ಕಂಪ್ಯೂಟರ್‍ಗಳು, ಸೂಕ್ತ ತರಬೇತಿ, ಇಂಟರ್ ನೆಟ್ ಸೌಲಭ್ಯ ಇಲ್ಲದ ಸಿಬ್ಬಂದಿಗಳಿಂದಾಗಿ ಯೋಜನೆ ಬಹುತೇಕ ಪಂಚಾಯಿತಿಗಳಲ್ಲಿ ಇನ್ನೂ ಪ್ರಾರಂಭವಾಗಿಲ್ಲ.

ಆಧಾರ್ ಕಾರ್ಡ್‌ಗಳಲ್ಲಿನ ಕೆಲ ಬದಲಾವಣೆ ಹಾಗೂ ತಿದ್ದುಪಡಿಗಳಿಗೆಂದು ಗ್ರಾಮೀಣ ಪ್ರದೇಶದ ಜನತೆ ತಾಲ್ಲೂಕು ಕೇಂದ್ರಕ್ಕೆ ಬರುವಂತಾಗಿದೆ. ವಿದ್ಯುತ್ ಸಮಸ್ಯೆ ಹಾಗೂ ಇಂಟರ್ ನೆಟ್ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ತಪ್ಪಿಸಲು ರಾಜ್ಯ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಇ-ಆಡಳಿತ ಕೇಂದ್ರದ ಸಹಕಾರದೊಂದಿಗೆ ಎಲ್ಲ ಗ್ರಾಮ ಪಂಚಾಯಿತಿಗಳಲಿ ಆಧಾರ್ ತಿದ್ದುಪಡಿ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೀಡಲಾಗುತ್ತಿರುವ ಜಾತಿ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿಗಳನ್ನು ನೀಡುವಂತೆಯೇ ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೆಂದ್ರಗಳಲ್ಲಿ ಆಧಾರ್ ತಿದ್ದುಪಡಿಮಾಡಿಸಲು ಸೆ.5ರಂದು ತಾಲ್ಲೂಕಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾಂಕೇತಿಕವಾಗಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದ್ದರು.

ತಾಲ್ಲೂಕು ಕಚೇರಿಯಲ್ಲಿನ ಪಡಸಾಲೆಯಲ್ಲಿನ ಆಧಾರ್ ನೋಂದಣಿ ಕೇಂದ್ರವು ಉಪಕರಣಗಳ ದುರಸ್ತಿಯಿಂದಾಗಿ ಕಾರ್ಯನಿರ್ವಹಸುತ್ತಿಲ್ಲ. ಜಾತಿ, ಆದಾಯ ಪ್ರಮಾಣ ಪತ್ರ ಒತ್ತಡ ಹಿನ್ನಲೆ ಆಧಾರ್ ನೋಂದಣಿ ಸಿಬ್ಬಂದಿಯನ್ನು ಜಾತಿ,ಆದಾಯ ನೋಂದಣಿಗೆ ವರ್ಗಾಯಿಸಿರುವುದು, ಖಾಸಗಿ ಆಧಾರ್ ಸೆಂಟರ್‍ಗಳಲ್ಲಿ ದಿನಕ್ಕೆ ಮುವತ್ತು ಆಧಾರ್ ನೋಂದಣಿ ಮಾತ್ರ ಎಂಬ ನಿಯಮದಿಂದಾಗಿ ಜನತೆ ಬೆಳಿಗ್ಗೆ 5ಕ್ಕೆ ಖಾಸಗಿ ಆಧಾರ್ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT