ಸೋಮವಾರ, ಜನವರಿ 20, 2020
20 °C
ನಿಲ್ಲದ ಕಾರ್ಮಿಕರ ಶೋಷಣೆ: ಆಕ್ರೋಶ

ವಿಜಯಪುರದಲ್ಲಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ, ಎಂದಿನಂತೆ ಕಾರ್ಯನಿರ್ವಹಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬುಧವಾರ ಮುಷ್ಕರಕ್ಕೆ ಇಲ್ಲಿನ ಕಾರ್ಮಿಕ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಆಟೊ ಚಾಲಕರು, ಖಾಸಗಿ ಬಸ್ ಮಾಲೀಕರ ಸಂಘ ಸೇರಿದಂತೆ ಯಾವುದೇ ಸಂಘಟನೆಗಳು ಬೆಂಬಲ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಜನಜೀವನ ನಗರದಲ್ಲಿ ಎಂದಿನಂತೆ ಇತ್ತು.

ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಲಾಯಿತು. ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಇರಲಿಲ್ಲ. ಸಿನಿಮಾ ಮಂದಿರ, ರೇಷ್ಮೆಗೂಡಿನ ಮಾರುಕಟ್ಟೆ ಎಂದಿನಂತೆ ಕಾರ್ಯ ನಿರ್ವಹಿಸಿದವು. ಶಾಲಾ ಕಾಲೇಜು, ಬ್ಯಾಂಕ್‌, ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ರಜೆ ಇರಲಿಲ್ಲ.

ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಅಂಬರೀಶ್ ಮಾತನಾಡಿ, ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಟ್ಟು ರಾಷ್ಟ್ರೀಯ ಉತ್ಪನ್ನ ಶೇ 9.4ರಿಂದ ಶೇ 4.5ಕ್ಕೆ ಕುಸಿತವಾಗಿದೆ. ಆರ್ಥಿಕ ಬಿಕ್ಕಟಿನಿಂದ 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ನಿರುದ್ಯೋಗ ಪ್ರಮಾಣ ಶೇ 9.5 ಇದೆ. ಎಂಜಿನಿಯರಿಂಗ್ ಮುಗಿಸಿದ 100 ಜನರಲ್ಲಿ 12 ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಾಲೀಕರ ಲಾಭದ ಪಾಲು ₹ 100ರಲ್ಲಿ ₹ 45. ಕಾರ್ಮಿಕರ ವೇತನದ ಪಾಲು ₹ 100ರಲ್ಲಿ ₹ 15 ಮಾತ್ರ. ಕಾರ್ಮಿಕರ ಕೆಲಸದ ಅವಧಿ 8 ಗಂಟೆಯಿಂದ 9 ಗಂಟೆಗೆ ಏರಿಕೆಯಾಗಿದೆ. ಕಾರ್ಖಾನೆ ಮುಚ್ಚಲು ಅನುಮತಿ ಬೇಕಿಲ್ಲ. ಇದರಿಂದ ಶೇ 95ರಷ್ಟು ಕಾರ್ಖಾನೆಗಳು ಕಾರಣವಿಲ್ಲದೇ ಮುಚ್ಚಬಹುದು’ ಎಂದರು. 

‘ಕಾರ್ಮಿಕರ 44 ಕಾನೂನುಗಳನ್ನು ರದ್ದು ಮಾಡಲಾಗಿದೆ. ಇದರಿಂದ ಕಾರ್ಮಿಕರು ಮಾಲೀಕರ ಗುಲಾಮರಾಗಬೇಕಾಗಿದೆ. ಜಿಎಸ್‌ಟಿಯಿಂದಾಗಿ ಎಲ್ಲ ಬೆಲೆಗಳು ಶೇ 20ರಷ್ಟು ಏರಿಕೆಯಾಗಿದೆ. ಸಣ್ಣ ವ್ಯಾಪಾರಸ್ಥರಿಗೆ ವ್ಯಾಪಾರ ಕುಸಿತವಾಗಿದೆ. ಶ್ರೀಮಂತ ಉದ್ಧಿಮೆದಾರರಿಗೆ ₹ 1.4 ಲಕ್ಷ ಕೋಟಿ ರಿಯಾಯಿತಿ ನೀಡಲಾಗಿದೆ. ಕಾರ್ಮಿಕರು ಮಾಲೀಕರಿಂದ ಅನ್ಯಾಯಕ್ಕೊಳಗಾದರೂ ಪ್ರತಿಭಟನೆ ಮಾಡುವಂತಿಲ್ಲ. ಮಾಡಿದರೆ 6 ತಿಂಗಳು ಜೈಲು ಶಿಕ್ಷೆ. ಒಂದು ಕುಟುಂಬ ಕೇವಲ ₹ 176ರಲ್ಲಿ ದಿನದ ಜೀವನ ನಿರ್ವಹಣೆ ಮಾಡಬೇಕು ಎಂಬ ನಿಯಮ ಹೇರಿದ್ದಾರೆ’ ಎಂದು ದೂರಿದರು.

ಸರ್ಕಾರಿ ಸಂಸ್ಥೆಗಳಾದ ಎಚ್‌.ಎ.ಎಲ್, ಬಿ.ಎಚ್‌.ಇ.ಎಲ್, ಬಿ.ಇ.ಎಲ್, ಎ.ಐ.ಆರ್, ಎಚ್.ಪಿ, ಎಲ್.ಐ.ಸಿ. ಷೇರುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಶ್ರೀಮಂತರಿಗೆ ಮಾರಾಟ ಮಾಡಲಾಗುತ್ತಿದೆ. ಇಂತಹ ಧೋರಣೆಗಳು ಬದಲಾಗಬೇಕು’ ಎಂದು ಒತ್ತಾಯಿಸಿದರು.

ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾ ಸಂಚಾಲಕಿ ಲಕ್ಷ್ಮೀದೇವಮ್ಮ ಮಾತನಾಡಿ, ‘ಕಾರ್ಮಿಕರಿಗೆ ಕನಿಷ್ಠ ವೇತನ ₹ 21 ಸಾವಿರ ನಿಗದಿಯಾಗಬೇಕು. ಎಲ್ಲ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪನೆಯಾಗಬೇಕು. ಕಟ್ಟಡ ಕಾರ್ಮಿಕರು, ಆಟೊ ಚಾಲಕರು, ಬೀದಿಬದಿ ವ್ಯಾಪಾರಿಗಳು, ಮನೆ ಕೆಲಸಗಾರರು, ಹಮಾಲಿ ಕಾರ್ಮಿಕರು ಹಾಗೂ ಇತರೆ ಅಸಂಘಟಿತ ಕಾರ್ಮಿಕರಿಗೆ ಶಾಸನಬದ್ಧ ಭವಿಷ್ಯನಿಧಿ ಮತ್ತು ಪಿಂಚಣಿಗಾಗಿ ಸಾಮಾಜಿಕ ಭದ್ರತಾ ಮಂಡಳಿಗಳಿಗೆ ನಿಧಿ ನೀಡಬೇಕು. ಮಹಿಳೆಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚನೆಗೆ ಮಹಿಳಾ ಕಾರ್ಮಿಕರ ರಾತ್ರಿ ಪಾಳಿ ರದ್ಧತಿ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು