ಸೋಮವಾರ, ಡಿಸೆಂಬರ್ 5, 2022
21 °C
ಹೈಮಾಸ್ಟ್‌ ದೀಪಗಳಿಗೆ ದುಬಾರಿ ಬಿಲ್‌ ನಿಗದಿ: ಬಿಜೆಪಿ ದೂರು

ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಖರೀದಿಸಿರುವ ಹೈಮಾಸ್ಟ್‌ ದೀಪ ಅಳವಡಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಆರೋಪಿಸಿದೆ.

‘ಜೆಡಿಎಸ್‌ ಶಾಸಕ ನಿಸರ್ಗ ನಾರಾಯಣಸ್ವಾಮಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಎಲ್ಲಾ ಕಾಮಗಾರಿಗಳಲ್ಲಿಯೂ ಕಮಿಶನ್‌ ಪಡೆಯುತ್ತಿದ್ದಾರೆ. ಹೈಮಾಸ್ಟ್‌ ದೀಪದ ಮಾರುಕಟ್ಟೆ ಬೆಲೆ ₹ 1.5 ಲಕ್ಷ ಇದೆ. ಇದಕ್ಕೆ ₹ 5 ಲಕ್ಷ ಬಿಲ್‌ ಮಾಡಿಸಿ ಹಣ ಲೂಟಿ ಮಾಡಿದ್ದಾರೆ’ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್‌ ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಜನಪ್ರತಿನಿಧಿಯಾಗಿ ಕನಿಷ್ಠ ಆಡಳಿತ ಸಭೆ ನಡೆಸುವುದಿಲ್ಲ. ಕೆಡಿಪಿ ಸಭೆಗಳಿಗೆ ಗೈರಾಗಿ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ತಾ.ಪಂ. ಸಭೆ ಮಾಡದಷ್ಟು ಅಸಮರ್ಥರಾಗಿದ್ದಾರೆ ಎಂದು ಟೀಕಿಸಿದರು.

ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ‘ಯಾವ ರೀತಿಯಲ್ಲಿ ಅನುದಾನ ಬಳಕೆ ಮಾಡಿಕೊಳ್ಳಬೇಕೆಂಬ ತಿಳಿವಳಿಕೆ ಶಾಸಕರಿಗೆ ಇಲ್ಲ. ಚುನಾವಣಾ ಗಿಮಿಕ್‌ಗಾಗಿ ಅನುದಾನ ಬಿಡುಗಡೆಯಾದ ನಂತರ ಬೀದಿಗಳಿದು ರಾಗಿ ಪೈರು ನಾಟಿ ಮಾಡಿ ನನ್ನ ಕೈಯಲ್ಲಿ ಏನು ಆಗುತ್ತಿಲ್ಲ ಎಂದು ಅಸಮರ್ಥತೆ ತೋರುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಟೆಂಡರ್‌ ಪ್ರಕ್ರಿಯೆ ರಾಜಕೀಯ ಹಸ್ತಕ್ಷೇಪವಿಲ್ಲದೆ ಪಾರದರ್ಶಕತೆಯಿಂದ ನಡೆಯುತ್ತದೆ. ಅಭಿವೃದ್ಧಿಗಾಗಿ ಎಲ್ಲಾ ನಾಯಕರ ಸಹಕಾರ ಪಡೆದುಕೊಂಡು ಮುನ್ನಡೆಯಬೇಕು. ಪಕ್ಷಾತೀತವಾಗಿ ಕೆಲಸ ಮಾಡಲು ಧೈರ್ಯವಿರಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಚಂದ್ರಣ್ಣ ಮಾತನಾಡಿ, ‘ಶಾಸಕರ ಅನುದಾನದಲ್ಲಿ ತುರ್ತು ಕೆಲಸ ಮಾಡಿಸಬೇಕು. ಅದರಲ್ಲಿ ರಸ್ತೆ ದುರಸ್ತಿ ಮಾಡಿಸಬಹುದು. ನಾಲ್ವರು ಬಾಲಂಗೋಚಿಗಳನ್ನು ಹಿಂದಿಟ್ಟುಕೊಂಡು ಪ್ರತಿಭಟನೆ ಮಾಡಿದರೆ ಕ್ಷೇತ್ರ ಅಭಿವೃದ್ಧಿ ಆಗುವುದಿಲ್ಲ. 4 ವರ್ಷದಿಂದ ಅಭಿವೃದ್ಧಿ ಮರೆತವರು ಇಂದು ಬೀದಿಗಿಳಿದು ನಾನೊಬ್ಬ ಅಸಮರ್ಥ ಶಾಸಕ ಎಂದು ಕೂಗಿ ಹೇಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಬೈಯಪ್ಪ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ ಮಾತನಾಡಿ, ಶಾಸಕರಿಗೆ ರಿಯಲ್‌ ಎಸ್ಟೇಟ್‌ ವ್ಯವಹಾರದ ಮೂಲಕ ಹೊಸ ಲೇಔಟ್‌ ಮಾಡುವಲ್ಲಿ ಇರುವ ಆಸಕ್ತಿ ದೇವನಹಳ್ಳಿ ಟೌನ್‌ ಅಭಿವೃದ್ಧಿ ಮಾಡುವಲ್ಲಿಯೂ ಇರಬೇಕು. 4 ವರ್ಷದಿಂದ ವೈಯಕ್ತಿಕ ಕೆಲಸದಲ್ಲಿ ಮಗ್ನರಾಗಿ ಚುನಾವಣೆ ಹತ್ತಿರ ಬಂದಾಗ ರಸ್ತೆಯಲ್ಲಿ ಹೈಡ್ರಾಮಾ ಮಾಡಿ ದಿಕ್ಕುತಪ್ಪಿಸುವ ಕೆಲಸ ಮಾಡಬಾರದು. ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಜಿಲ್ಲಾ ಅಧ್ಯಕ್ಷ ಎವಿಎನ್ ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಸುಂದರೇಶ್, ಟೌನ್ ಉಪಾಧ್ಯಕ್ಷ ಅಂಬರೀಶ್, ಪುರಸಭೆ ಸದಸ್ಯ ಬಾಂಬೆ ನಾರಾಯಣಸ್ವಾಮಿ, ವಿಶ್ವನಾಥಪುರ ಪಂಚಾಯಿತಿ ಉಪಾಧ್ಯಕ್ಷ ವಿನಯ್ ಕುಮಾರ್, ಮುಖಂಡರಾದ ದೇಸು ನಾಗರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು