ಮೈತ್ರಿ ಸರ್ಕಾರ ಶೀಘ್ರ ಪತನ: ಶಾಸಕ ಜೆ.ಸಿ. ಮಾಧುಸ್ವಾಮಿ ಭವಿಷ್ಯ

ಸೋಮವಾರ, ಮೇ 27, 2019
23 °C

ಮೈತ್ರಿ ಸರ್ಕಾರ ಶೀಘ್ರ ಪತನ: ಶಾಸಕ ಜೆ.ಸಿ. ಮಾಧುಸ್ವಾಮಿ ಭವಿಷ್ಯ

Published:
Updated:
Prajavani

ವಿಜಯಪುರ: ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ತಕ್ಷಣವೇ ರಾಜ್ಯದ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ. ಮಾಧುಸ್ವಾಮಿ ಭವಿಷ್ಯ ನುಡಿದರು.

ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ 20 ಸ್ಥಾನಗಳು ಬಿಜೆಪಿಗೆ ಲಭಿಸಿದರೆ ಸಾಕಷ್ಟು ಮಂದಿ ಶಾಸಕರು ಬಿಜೆಪಿಗೆ ಬರುತ್ತಾರೆ. ಕಾಂಗ್ರೆಸ್, ಜೆಡಿಎಸ್ ಲೋಕಸಭಾ ಚುನಾವಣೆಗಾಗಿ ಮಾತ್ರವೇ ಒಂದಾಗಿವೆ. ಈ ರಾಜ್ಯದ ಜನರ ದೃಷ್ಟಿಯಿಂದ ಮೈತ್ರಿ ಆಗಿಲ್ಲ. ಅಧಿಕಾರದ ಆಸೆಯಿಂದ ಒಂದಾಗಿದ್ದಾರೆ ಎಂದು ದೂರಿದರು.

ಲೋಕಸಭಾ ಚುನಾವಣೆ ಮುಗಿದಿದೆ. ಸಿದ್ದರಾಮಯ್ಯ ಅವರೂ ಜೆಡಿಎಸ್ ನೊಂದಿಗೆ ರಾಜಿಯಾಗಲ್ಲ. ಹೈಕಮಾಂಡ್‌ನಿಂದ ಆದೇಶ ಬಂದಿರುವ ಕಾರಣ ಅವರೊಂದಿಗೆ ಕೈ ಜೋಡಿಸಿದ್ದಾರೆ ಎಂದರು.

‘ಈಗ ಅವರಿಗೆಲ್ಲ ಜೆಡಿಎಸ್‌ನವರ ನಡುವಳಿಕೆಯಿಂದ ಕಷ್ಟವಾಗಿದೆ. ಸರ್ಕಾರ ಬೀಳುತ್ತದೆ. ಹಣ್ಣು ತಾನಾಗಿಯೇ ಬಂದು ನಮ್ಮ ಅಂಗಳಕ್ಕೆ ಬೀಳುತ್ತದೆ’ ಎಂದರು.

‘ನಾವೇನು ಅದಕ್ಕೆ ಹೊಡೆದು ಗಾಯ ಮಾಡಿ ಬೀಳಿಸಿಕೊಳ್ಳಬೇಕಾಗಿಲ್ಲ. ಸಿದ್ದರಾಮಯ್ಯ ಕೂಡಾ ಈಗ ತಟಸ್ಥರಾಗಿಲ್ಲ, ಅವರು ತಟಸ್ಥರಾಗಿದ್ದಿದ್ದರೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಭಾಷಣ ಯಾಕ್ ಮಾಡ್ತಿದ್ರು. ದೇವೇಗೌಡರನ್ನು ತುಮಕೂರಿಗೆ ತಂದು ಬಿಟ್ಟಿದ್ದು ಪರಮೇಶ್ವರ ಅವರಿಗೂ ಇಷ್ಟವಿಲ್ಲ’ ಎಂದು ತಿಳಿಸಿದರು.

‘ಕುಮಾರಸ್ವಾಮಿ ಆದ ನಂತರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ ಮಠದಲ್ಲಿ ಒಪ್ಪಂದ ಆಗಿದೆ. ಅವರಲ್ಲೇ ಮೂರು ಮಂದಿ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿದ್ದಾರೆ. ಯಾರಿಗೆ ಒಲಿಯುತ್ತೆ ಕಾದು ನೋಡಿ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !