ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಮಾತು ತಪ್ಪಿದ ಆನಂದ್‌: ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ‘ನಂಬಿಸಿ ದ್ರೋಹ ಮಾಡುವ ಮೂಲಕ ಬಿ.ಸಿ.ಆನಂದ್‌ ‘ಬಮೂಲ್‌’ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅಭ್ಯರ್ಥಿಯಾಗುವುದೇ ಇಲ್ಲ ಎಂದು ಕೊನೆಗಳಿಗೆಯವರೆಗೂ ಹೇಳುತ್ತಲೇ ಪ್ರಮಾಣ ಮಾಡಿ ಮಾತು ತಪ್ಪಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಅಪ್ಪಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚೆಗಷ್ಟೇ ಬಮೂಲ್‌ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡ ನಂತರ ಬುಧವಾರ ನಗರದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಹಾಕದೇ ಸರ್ಕಾರದ ನಾಮನಿರ್ದೇಶಿತ ನಿರ್ದೇಶಕರಾಗಿ ಬಿ.ಸಿ.ಆನಂದ್‌ ನೇಮಕವಾಗಿದ್ದಾರೆ. ರಾಜ್ಯ ಸರ್ಕಾರ ಪತನವಾಗುತ್ತಲೇ ಅವರ ನಿರ್ದೇಶಕ ಸ್ಥಾನವೂ ಹೋಗಲಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಣದಾಸೆಗೆ ಬಲಿಯಾಗಿ ಬಿ.ಸಿ.ಆನಂದ್‌ ಪರವಾಗಿ ಮತ ಚಲಾಯಿಸಿದ್ದಾರೆ’ ಎಂದು ಟೀಕಿಸಿದರು.

‘ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಹೈಕಮಾಂಡ್‌ ನನಗೆ ಸೂಚಿಸಿತ್ತು. ಆದರೆ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಸೇರಿದಂತೆ ಎಲ್ಲರೂ ಸಹ ಮೈತ್ರಿ ಧರ್ಮ ಮರೆತು ನಡೆದುಕೊಂಡಿದ್ದಾರೆ. ಇದರ ಪ್ರತಿಫಲವನ್ನು ಮುಂದಿನ ದಿನಗಳಲ್ಲಿ ಅನುಭವಿಸಲಿದ್ದಾರೆ’ ಎಂದರು.

‘ಜೆಡಿಎಸ್‌ ಮುಖಂಡರೂ ನನಗೆ ಮೋಸ ಮಾಡಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಹೈಕಮಾಂಡ್‌ಗೆ ದೂರು ನೀಡುವುದಿಲ್ಲ. ಆದರೆ ಇದರ ಪರಿಣಾಮವನ್ನು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಅವರು ಎದುರಿಸುವ ಕಾಲ ಬರಲಿದೆ’ ಎಂದರು.

ಕೆಲಸ ಮಾಡಿರುವ ತೃಪ್ತಿ ಇದೆ: ‘ಹಾಲು ಶೀತಲೀಕರಣ ಕೇಂದ್ರಕ್ಕೆ ಬಂದರೆ ರೈತರು ಕುಳಿತುಕೊಳ್ಳಲು ಸ್ಥಳ ಇರಲಿಲ್ಲ. ಆದರೆ ಐದು ವರ್ಷಗಳಲ್ಲಿ ಇಡೀ ಜಿಲ್ಲೆಗೆ ಉತ್ತಮವಾದ ಕಾರ್ಯಾಲಯ, 2 ಲಕ್ಷ ಲೀಟರ್‌ ಹಾಲು ಸಂಗ್ರಹ ಸಾಮರ್ಥ್ಯದ ಕೇಂದ್ರವನ್ನು ನಿರ್ಮಿಸಲಾಗಿದೆ. ರಾಸುಗಳಿಗೆ ವಿಮೆ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳಿಗೂ ನಿವೃತ್ತರಾದಾಗ ನಿವೃತ್ತಿ ಹಣ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ’ ಎಂದು ವಿವರಿಸಿದರು.

‘ಸ್ವಯಂ ಶಕ್ತಿಯಿಂದ ಬೆಳೆದು ಬಂದು ಇಡೀ ತಾಲ್ಲೂಕಿನ ರೈತರು ನೋಡುವಂತೆ ಕೆಲಸ ಮಾಡಿರುವ ತೃಪ್ತಿಯಿದೆ. 40 ಜನ ನನಗೂ ಮತ ನೀಡಿದ್ದಾರೆ. ಇವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಐದು ವರ್ಷಗಳ ಆಡಳಿತದಲ್ಲಿ 250 ಜನರಿಗೆ ಉದ್ಯೋಗ, ಬಡ್ತಿಗಳನ್ನು ನೀಡಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.