ಬುಧವಾರ, ಜುಲೈ 6, 2022
21 °C
ಇಂದು ಧ್ವಜಾರೋಹಣದೊಂದಿಗೆ ಧಾರ್ಮಿಕ ಕಾರ್ಯಕ್ರಮ ಮುಕ್ತಾಯ

ಆನೇಕಲ್‌: ಒಣ ಕರಗ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಪಟ್ಟಣದ ಧರ್ಮರಾಯಸ್ವಾಮಿ ದ್ರೌಪದಿ ದೇವಿ ಒಣ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ತಾಲ್ಲೂಕಿನ ಸಹಸ್ರಾರು ಭಕ್ತರು ಈ ವೈಭವದ ಉತ್ಸವಕ್ಕೆ ಸಾಕ್ಷಿಯಾದರು. ಕರಗದ ನೃತ್ಯಕ್ಕೆ ನೆರೆದಿದ್ದ ಜನರು ಮಂತ್ರಮುಗ್ಧರಾದರು.

ಮಂಗಳವಾರ ಬೆಳಗಿನ ಜಾವ 2.10ರ ವೇಳೆಗೆ ಕರಗ ಹೊತ್ತ ಚಂದ್ರಪ್ಪ ದೇವಾಲಯದಿಂದ ಹೊರಬಂದರು. ಗರ್ಭಗುಡಿಯಿಂದ ಮಂಡಿಯೂರಿ ಹೊರಬಂದು ದೇವಾಲಯದ ಮುಂಭಾಗಕ್ಕೆ ಬರುತ್ತಿದ್ದಂತೆ ಢಿಕ್ ಡೀ, ಗೋವಿಂದ ಗೋವಿಂದ ಎಂಬ ಉದ್ಘೋಷದಿಂದ ವೀರಗಾರರು ಅದನ್ನು ಬರಮಾಡಿಕೊಂಡರು.

ದೇವಾಲಯದ ಪ್ರಾಂಗಣವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿದ ನಂತರ ಕರಗವು ದೇವಾಲಯದಿಂದ ಹೊರಬಂದಿತು. ಬಳಿಕ ವೀರವಸಂತರಾಯನ ಸ್ಥಾಪನೆ ಮಾಡಿದ್ದ ಸ್ಥಳಕ್ಕೆ ಆಗಮಿಸಿ ಅಲ್ಲಿ ವೀರ ವಸಂತರಾಯನ ಶಿರಚ್ಛೇದನ ಮಾಡಲಾಯಿತು. ಅಲ್ಲಿಂದ ಸಂತೆ ಮಾಳದಲ್ಲಿ ಹಾಕಲಾಗಿದ್ದ ಅಗ್ನಿಕುಂಡದ ಬಳಿ ಸಾಗಿತು. ಬೆಂಕಿ ಕೆಂಡವನ್ನು ಮಡಿಲು ತುಂಬಿಸಿಕೊಂಡು ಅಗ್ನಿಕೊಂಡವನ್ನು ಪ್ರವೇಶಿಸಿತು. ಕೊಂಡದ ಸುತ್ತಲೂ ಕರಗವು ವಾದ್ಯಗಾರರ ತಾಳಕ್ಕೆ ತಕ್ಕಂತೆ ಕುಣಿಯಿತು. ಅಗ್ನಿಕೊಂಡ ಪ್ರವೇಶ ಮಾಡಿದ ದೃಶ್ಯ ರೋಮಾಂಚನಕಾರಿಯಾಗಿತ್ತು.

ಅಗ್ನಿಕೊಂಡ ಪ್ರವೇಶದ ನಂತರ ಕರಗವು ತಿಲಕ್ ವೃತ್ತಕ್ಕೆ ತೆರಳಿತು. ವೃತ್ತದಲ್ಲಿ ಪಲ್ಲಕ್ಕಿಗಳ ಮುಂದೆ ಹೆಜ್ಜೆ ಹಾಕಿತು. ತಿಲಕ್ ವೃತ್ತದಿಂದ ತಿಗಳರ ಪೇಟೆಯತ್ತ ಸಾಗಿದ ಅದನ್ನು ವಹ್ನಿಕುಲ ಸಮಾಜದವರು ಮನೆ ಮನೆಗಳ ಬಳಿ ರಂಗೋಲಿ ಹಾಕಿ ಅಲಂಕರಿಸಿ ಬರಮಾಡಿಕೊಂಡರು. ಹೂವುಗಳಿಂದ ರಸ್ತೆಯನ್ನು ಅಲಂಕರಿಸಲಾಗಿತ್ತು. ರಂಗೋಲಿ ಮಧ್ಯದಲ್ಲಿ, ದೀಪಾರತಿಗಳ ನಡುವೆ ಕರಗ ಹೊತ್ತ ಚಂದ್ರಪ್ಪ ವಾದ್ಯಗಳ ತಾಳಕ್ಕೆ ಹೆಜ್ಜೆ ಹಾಕುತ್ತಾ ಸಾಗಿದರು. ಈ ದೃಶ್ಯ ನೋಡುವುದೇ ಒಂದು ಆನಂದವಾಗಿತ್ತು. ವಹ್ನಿಕುಲಸ್ಥರು ಮಡಿಲಕ್ಕಿ ತುಂಬಿ ಬೀಳ್ಕೊಟ್ಟರು.

ಮನೆಗಳ ಮುಂದೆ ಸಾಗುತ್ತಿದ್ದಂತೆ ಮಲ್ಲಿಗೆ ಹೂವುಗಳನ್ನು ಕರಗದೆಡೆಗೆ ಅರ್ಪಿಸಿ ಭಕ್ತಿ ಸಮರ್ಪಿಸುತ್ತಿದ್ದರು. ಪಾರ್ಥಸಾರಥಿ ಭಜನೆ ಮಂದಿರದ ಬಳಿ ಕೆಲಕಾಲ ನರ್ತಿಸಿ ಮಡಿಲಕ್ಕಿ ಸ್ವೀಕರಿಸಿ ತೆರಳಿತು. ಚರ್ಚ್ ರಸ್ತೆ, ದೇವರಕೊಂಡಪ್ಪ ವೃತ್ತ, ಬೆಸ್ಕಾಂ ಕಚೇರಿ, ಗಾಂಧಿ ವೃತ್ತಗಳಲ್ಲಿ ನೆರೆದಿದ್ದ ಸಹಸ್ರಾರು ಭಕ್ತರ ಕಣ್ಮನ ತಣಿಯುವಂತೆ ನೃತ್ಯ ಮಾಡಿತು.

ಪಟ್ಟಣದ ಪ್ರಮುಖ ವೃತ್ತಗಳಿಗೆ ಬರುತ್ತಿದ್ದಂತೆ ಜನರು ಸಾಗರೋಪಾದಿಯಲ್ಲಿ ಅದನ್ನು ಹಿಂಬಾಲಿಸಿ ಬರುತ್ತಿದ್ದರು. ಒಣ ಕರಗ ವೈಭವದ ನೃತ್ಯ ಭಕ್ತರಲ್ಲಿ ಸಂತಸ ತಂದಿತು. ನಾಲ್ಕು ತಾಸಿಗೂ ಹೆಚ್ಚು ಕಾಲ ಪಟ್ಟಣದ ವಿವಿಧೆಡೆ ಕುಣಿದ ಕರಗವು ಬೆಳಿಗ್ಗೆ 6.30ರ ವೇಳೆಗೆ ದೇವಾಲಯಕ್ಕೆ ಹಿಂತಿರುಗಿತು.

ದೇವಾಲಯದ ಬಳಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಒಳಹೋಗಲು ತೆರಳಿತು. ಆದರೆ, ವಾದ್ಯದ ನಾದಕ್ಕೆ ಆಕರ್ಷಿತವಾದ ಕರಗ ಪುನಃ ಹಿಂತಿರುಗಿ ಬಂದು ಕುಣಿಯಲು ಪ್ರಾರಂಭಿಸಿತು. ಈ ದೃಶ್ಯವನ್ನು ಕಂಡು ನೆರೆದಿದ್ದ ಭಕ್ತರು ಜಯಘೋಷ ಮಾಡಿದರು. ವೀರಕುಮಾರರು ಕತ್ತಿಗಳನ್ನು ಮೇಲೆತ್ತಿ ಸಂತೋಷ ವ್ಯಕ್ತಪಡಿಸಿದರು.

ಏ. 6ರಂದು ಕುಡಿ ಕಟ್ಟುವುದರೊಂದಿಗೆ (ಧ್ವಜಾರೋಹಣ) ಆರಂಭವಾದ ಕರಗ ಮಹೋತ್ಸವದ ಧಾರ್ಮಿಕ ಆಚರಣೆಗಳು ಒಣ ಕರಗ ಉತ್ಸವದೊಂದಿಗೆ ಅಂತಿಮ ಘಟ್ಟ ತಲುಪಿದವು. ಬುಧವಾರ ವಸಂತೋತ್ಸವ ನಡೆಯಿತು. ಗುರುವಾರ ಧ್ವಜಾರೋಹಣದೊಂದಿಗೆ ಧಾರ್ಮಿಕ ಆಚರಣೆಗಳು ಮುಕ್ತಾಯಗೊಳ್ಳಲಿವೆ.

ತಾಲ್ಲೂಕಿನ ಎಲ್ಲಾ ಜನಾಂಗದವರು ಒಗ್ಗೂಡಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಕರಗವು ದೇವಾಲಯಕ್ಕೆ ತೆರಳಿದರೂ ವೃತ್ತಗಳಲ್ಲಿ ಜನರು ಕರಗಿರಲಿಲ್ಲ. ಈ ವೈಭವವನ್ನು ಮೆಲುಕು ಹಾಕುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು