ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಪೋಷಣ್‌ ಜಾಹೀರಾತು ಸೀರೆ ತಿರಸ್ಕಾರ

2 ವರ್ಷದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮವಸ್ತ್ರ ವಿತರಣೆ ಇಲ್ಲ
Last Updated 26 ಜೂನ್ 2022, 7:30 IST
ಅಕ್ಷರ ಗಾತ್ರ

ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯುಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ವರ್ಷದ ಮಾರ್ಚ್ ತಿಂಗಳಿನಲ್ಲಿ ಸಮವಸ್ತ್ರ ನೀಡುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಿಂದಲೂ ಸಮವಸ್ತ್ರ ವಿತರಣೆ ಮಾಡಿಲ್ಲ.

ಕಾರ್ಯಕರ್ತೆಯರು ಈ ಹಿಂದೆ ನೀಡಿದ್ದ ಸಮವಸ್ತ್ರದ ಹಳೆಯ ಸೀರೆಗಳನ್ನೇ ಧರಿಸಿಕೊಂಡು ಕೆಲಸ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸೀರೆಗಳನ್ನು ಧರಿಸಿಕೊಂಡು ಬಾರದಿದ್ದರೆ ದಂಡ ವಿಧಿಸುತ್ತಾರೆ. ಇಲಾಖೆಯ ಮೇಲಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಕಾರ್ಯಕರ್ತೆಯರು ನೋವು ತೋಡಿಕೊಳ್ಳುತ್ತಾರೆ.

ಸಿಐಟಿಯು ಸಂಘಟನೆಯ ಸಂಚಾಲಕಿ ಲಕ್ಷ್ಮಿದೇವಮ್ಮ ಮಾತನಾಡಿ, ಕಾರ್ಯಕರ್ತೆಯರಿಗೆ ಮೊದಲು ಇಲಾಖೆಯಿಂದ ನೀಡುತ್ತಿದ್ದ ಸೀರೆಗಳನ್ನು ಬಿಟ್ಟು ಬೇರೆ ಸೀರೆಗಳು ಕೊಟ್ಟಿದ್ದಾರೆ. ಸಮವಸ್ತ್ರವಾಗಿ ನೀಡಿದ್ದ ಸೀರೆಯ ಅಂಚಿನ ಮೇಲೆ ಕೇಂದ್ರ ಸರ್ಕಾರದ ಪೋಷಣ್ ಅಭಿಯಾನದ ಜಾಹೀರಾತು ಮುದ್ರಿಸಿರುವುದಕ್ಕೆ ನಾವೆಲ್ಲರೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದೇವೆ ಎಂದು ಹೇಳಿದರು.

‘ಸಮವಸ್ತ್ರ ಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಸಮವಸ್ತ್ರದ ಹೆಸರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ದೇಹವನ್ನೇ ಜಾಹೀರಾತು ಫಲಕಗಳಾಗಿ ಉಪಯೋಗಿಸುವುದು ಅಮಾನವೀಯ ಮತ್ತು ಮಹಿಳೆಯರ ಹಕ್ಕು ರಕ್ಷಣೆಯ ವಿರುದ್ಧವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೊಟ್ಟಿದ್ದ ಸೀರೆಯ ಮೇಲೆ ಪೋಷಣ್ ಅಭಿಯಾನ ಬರೆಸಿ ಹಳ್ಳಿಗಳು, ವಾರ್ಡ್‌ಗಳು, ಅಂಗನವಾಡಿ ಕೇಂದ್ರದಲ್ಲಿ ಓಡಾಡಿದರೆ ಮಹಿಳೆಯರ ಗೌರವಕ್ಕೆ ಧಕ್ಕೆಯಾಗುತ್ತದೆ. ಮುಂಬರುವ ದಿನಗಳಲ್ಲಿ ಬೇರೆ ಇಲಾಖೆಯವರು ಕೂಡ ಇದೇ ರೀತಿಯಲ್ಲಿ ಅವರವರ ಇಲಾಖೆಯ ಕಾರ್ಯಕ್ರಮಗಳನ್ನು ರೂಪಿಸಿ ಪ್ರಚಾರಕ್ಕೆ ಇದೇ ಮಾದರಿ ಬಳಸಿದರೆ ಅಂಗನವಾಡಿ ಕಾರ್ಯಕರ್ತೆಯರು ಏನು ಮಾಡಬೇಕು? ನಮಗೆ ಸಂಬಳ ಕಡಿಮೆ ಇರಬಹುದು. ಆದರೆ, ಸಮಾಜದಲ್ಲಿ ಗೌರವವಿದೆ. ಆದ್ದರಿಂದ ಪೋಷಣ್ ಅಭಿಯಾನಕ್ಕೆ ಕೊಟ್ಟಿರುವ ಸಮವಸ್ತ್ರ ಪಡೆದುಕೊಂಡಿಲ್ಲ’ ಎಂದು ಕಾರ್ಯಕರ್ತೆಯರೊಬ್ಬರು
ತಿಳಿಸಿದರು.

‘2019ರಿಂದಲೂಪೋಷಣ್‌ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಇಲಾಖೆಯಿಂದ ಅಭಿಯಾನಕ್ಕೆ ಸಮವಸ್ತ್ರವಾಗಿ ಸೀರೆ ವಿತರಿಸಿದ್ದಾರೆ. ಆದರೆ, ಈ ಸೀರೆ ಬ್ಯಾನರ್‌ನಂತೆ ಇದೆ. ಸೀರೆಯ ತುಂಬೆಲ್ಲಾ ಪೋಷಣ್‌ ಅಭಿಯಾನ ಎಂದು ಮುದ್ರಿಸಿ ಅಂಗನವಾಡಿ ನೌಕರರನ್ನು ಜಾಹೀರಾತು ಗೊಂಬೆಗಳಂತೆ ಬಳಸಿಕೊಳ್ಳಲು ಮುಂದಾಗಿದ್ದಾರೆ’ ಎಂದು ಕಾರ್ಯಕರ್ತೆ ರೂಪಾ ದೂರಿದರು.

‘ಈ ಸೀರೆಗಳನ್ನು ನಾವೆಲ್ಲರೂ ವಾಪಸ್‌ ಕೊಟ್ಟಿದ್ದೇವೆ. ಪುನಃ ಇದುವರೆಗೂ ಈ ಸೀರೆಯ ಪ್ರಸ್ತಾಪವೇ ಇಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಆರೈಕೆಯ ಜೊತೆಗೆ ವಿವಿಧ ಇಲಾಖೆಗಳು ನೀಡುವ ಕೆಲಸ ಮಾಡುತ್ತೇವೆ. ನಮ್ಮ ಶ್ರಮಕ್ಕೆ ತಕ್ಕಂತೆ ವೇತನವಿಲ್ಲ’ ಎಂದು ಬೇಸರ ತೋಡಿಕೊಂಡರು.

‘ಎರಡು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮವಸ್ತ್ರ ವಿತರಿಸಿಲ್ಲ. ಇಲಾಖೆಯಿಂದ ನೀಡಿರುವ ಸಮವಸ್ತ್ರ ಬೇಡವೆಂದು ಕಾರ್ಯಕರ್ತೆಯರು ತಿರಸ್ಕರಿಸಿದ್ದಾರೆ. ಇದರಿಂದ ವಿಳಂಬವಾಗಿದೆ. ಅವರೇ ಖರೀದಿ ಮಾಡಿಕೊಳ್ಳಲಿ ಎಂದು ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವ ಬಗ್ಗೆ ಚಿಂತನೆ ನಡೆದಿದೆ’ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿನಾಗವೇಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT