ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಕಾಸ್ತ್ರಗಳಿಂದ ಬೆದರಿಕೆ ಹಾಕಿ ದರೋಡೆ

Last Updated 19 ಸೆಪ್ಟೆಂಬರ್ 2020, 2:21 IST
ಅಕ್ಷರ ಗಾತ್ರ

ಕನಕಪುರ: ರಾತ್ರಿ ಸಮಯ ರಸ್ತೆಯಲ್ಲಿ ಒಂಟಿಯಾಗಿ ಹೋಗುವ ವಾಹನಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಕೆ ಹಾಕಿ ಚಿನ್ನಾಭರಣ, ನಗದು ದರೋಡೆ ಮಾಡುತ್ತಿದ್ದ ದರೋಡೆಕೋರರನ್ನು ಪೊಲೀಸರು ಬಂಧಿಸಿರುವುದು ಇಲ್ಲಿನ ಮಹರಾಜರ ಕಟ್ಟೆ ಹೆದ್ದಾರಿ ರಸ್ತೆಯಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ಕನಕಪುರ ಕುವೆಂಪುನಗರದ ರಾಹುಲ್‌ನಾಯ್ಕ್‌ (22), ಭುವನೇಶ್ವರಿನಗರದ ಸುಹಾಸ್‌ (20), ಅಪ್ರೋಜ್‌, ನಿರ್ವಾಣೇಶ್ವರ ನಗರದ ದುರ್ಗಚಂದ್ರ (21), ಹೆಂಚಿನ ಫ್ಯಾಕ್ಟರಿ ಹಿಂಭಾಗದ ದಿಲೀಪ್‌ (18), ಬೆಂಗಳೂರು ಚಿಕ್ಕಬಿದಿರುಕಲ್ಲು ರಾಕೇಶ್‌ (22), ಹಲಗೂರು ಹೋಬಳಿ ಹೊಸಪುರ ಗ್ರಾಮದ ದರ್ಶನ್‌ (20) ಬಂಧಿತರು.

8 ಮಂದಿ ತಂಡ ಕಟ್ಟಿಕೊಂಡು ಲಾಂಗು, ಮಚ್ಚು, ದೊಣ್ಣೆ, ಡ್ರ‍್ಯಾಗನ್‌ ಹಿಡಿದುಹೆದ್ದಾರಿ ರಸ್ತೆಗಳಲ್ಲಿ ಒಂಟಿಯಾಗಿ ಬರುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುವುದನ್ನೇ ಇವರು ದಂದೆಯನ್ನಾಗಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸೆಪ್ಟಂಬರ್‌ 17ರ ರಾತ್ರಿ ಮಹರಾಜರ ಕಟ್ಟೆ ರಸ್ತೆ ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209 ರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದಾಗ ಕನಕಪುರ ಸರ್ಕಲ್‌ ಇನ್‌ಸ್ಪೆಕ್ಟರ್‌ ಪ್ರಕಾಶ್‌.ಆರ್‌ ನೇತೃತ್ವದಲ್ಲಿ ಟೌನ್‌ ಸಬ್‌ ಇನ್‌ಸ್ಪೆಕ್ಟರ್‌ ಲಕ್ಷ್ಮಣ್‌ಗೌಡ ಮತ್ತು ಗ್ರಾಮಾಂತರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಅನಂತರಾಮ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಒಬ್ಬ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ದರೋಡೆಗೆ ಬಳಸಿದ್ದ ಮೂರು ಬೈಕ್‌, ಒಂದು ಡಿಯೋ ಸ್ಕೂಟರ್‌, ₹4950 ನಗದು, ಲಾಂಗು, ಕತ್ತಿ, ಡ್ರ‍್ಯಾಗನ್‌, ಚಾಕು, ದೊಣ್ಣೆಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ 15 ದಿನಗಳ ಹಿಂದೆ ಕನಕಪುರ ಮೆಳೆಕೋಟೆಯಲ್ಲಿ ಫೈನಾನ್ಸ್‌ ಕಲೆಕ್ಷನ್‌ ಮಾಡಿಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಕಟ್ಟಿ ಚಾಕು ತೋರಿಸಿ ಅವರಿಂದ ₹37000 ದರೋಡೆ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಈಗಾಗಲೇ ಕೆಲವೊಂದು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT