ಭಾನುವಾರ, ಏಪ್ರಿಲ್ 11, 2021
32 °C
ವಿದ್ಯಾರ್ಥಿಗಳಿಂದ ಗುಲಾಬಿ ಆಂದೋಲನ

ತಂಬಾಕು ವಿರುದ್ಧ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ಕುರಿತು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜನಜಾಗೃತಿ ಮೂಡಿಸುವ ಸಲುವಾಗಿ ನಗರದ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢಶಾಲೆ ಬಳಿಯಿಂದ ಗುಲಾಬಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತಂತೆ ಭಿತ್ತಿಪತ್ರಗಳ ಪ್ರದರ್ಶನವಿತ್ತು. ತಂಬಾಕು ಮಾರಾಟ ಮಾಡದಂತೆ ಅಂಗಡಿಯವರಿಗೆ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಲಾಯಿತು.

ಆಂದೋಲನಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಮಾತನಾಡಿ, ತಂಬಾಕು ಸೇವನೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಹಾಗೂ ಮಾರಾಟ ಮಾಡುವುದಕ್ಕೆ ನಿರ್ಬಂಧವಿದೆ, ಕೋಟ್ಪಾ ಕಾಯ್ದೆ-2003 ಕುರಿತ ಅರಿವಿರಬೇಕು ಎಂದರು.

ಅಪ್ರಾಪ್ತ ವಯಸ್ಕರಿಗೆ ಮತ್ತು ಅವರಿಂದ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದೆ. ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಅಡಿ ಅಂತರದ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳಲ್ಲಿ ಚಿತ್ರಸಹಿತ ಆರೋಗ್ಯ ಎಚ್ಚರಿಕೆ ಹಾಗೂ ಎಚ್ಚರಿಕೆ ಪ್ರಕಟಣೆಯು ಸ್ಫುಟವಾಗಿ, ಪ್ರಮುಖವಾಗಿ ಮತ್ತು ಕಾಣುವಂತೆ ಸ್ಪಷ್ಟವಾದ ಗಾತ್ರ, ಬಣ್ಣ ಮತ್ತು ಶೈಲಿಯಲ್ಲಿಬೇಕು. ಇದನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಬಹುದಾಗಿದೆ. ಈ ಕುರಿತು ಜಾಗೃತಿ ಮೂಡಿಸಲು ಗುಲಾಬಿ ಆಂದೋಲನ ಅಂಗವಾಗಿ ಜಾಥಾ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ನಗರ ಸರ್ಕಾರಿ ಆಸ್ಪತ್ರೆಯ ಡಾ.ವಸುಧಾ, ಮುಖ್ಯಶಿಕ್ಷಕಿ ತಿಪ್ಪಮ್ಮ, ಆಪ್ತ ಸಮಾಲೋಚಕಿ ಪದ್ಮಾ, ಹಿರಿಯ ಆರೋಗ್ಯ ಸಹಾಯಕ ಟಿ.ಕೆ. ಕರಿಯಪ್ಪ, ಹಿರಿಯ ಮಹಿಳಾ ಆಪ್ತ ಸಹಾಯಕಿಯರಾದ ಕೆ.ಎನ್. ವೀಣಾ, ಮಂಜುಳಾ, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.