ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ ಕುರಿತು ಜಾಗೃತಿ ಮೂಡಲಿ: ಲಕ್ಷ್ಮೀನಾರಾಯಣ್

ದೊಡ್ಡಬಳ್ಳಾಪುರ: ಸ್ವಸ್ಥ ಬದುಕು ಕಾರ್ಯಾಗಾರ
Last Updated 22 ಜನವರಿ 2020, 16:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಹಲವಾರು ರೋಗಗಳ ಶಮನಕ್ಕೆ ಆಲೋಪತಿ ಚಿಕಿತ್ಸೆಗಿಂತ ಆಯುಷ್ ಚಿಕಿತ್ಸೆ ಶಾಶ್ವತ ಪರಿಹಾರವನ್ನು ನೀಡಬಹುದಾಗಿದೆ. ಈ ಬಗ್ಗೆ ಜನತೆ ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ಹೇಳಿದರು.

ನಗರದ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಯುಷ್ ಇಲಾಖೆ ವತಿಯಿಂದ ನಡೆದ ಜಿಲ್ಲಾಮಟ್ಟದ ಒಂದು ದಿನದ ಸ್ವಸ್ಥ ವೃತ್ತ, ಮನೆಮದ್ದು ಹಾಗೂ ಆಯುಷ್ ಕಾರ್ಯಾಗಾರ ಹಾಗೂ ಕ್ಯಾಲೆಂಡರ್ ಬಿಡುಗಡೆಯಲ್ಲಿ ಮಾತನಾಡಿದರು.

‘ಸನಾತನ ಭಾರತೀಯ ವೈದ್ಯ ಪದ್ದತಿಯಾದ ಆಯುಷ್ ಕುರಿತು ಸಾರ್ವಜನಿಕರಲ್ಲಿ ಆಸಕ್ತಿ ಹೆಚ್ಚಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಗಲ್ಲಿಗೊಂದರಂತೆ ಖಾಸಗಿ ಆಸ್ಪತ್ರೆಗಳು ಹೆಚ್ಚಾಗಲು, ಆಧುನಿಕ ಆಹಾರ ಪದ್ಧತಿ ಕಾರಣ. ತಾತ್ಕಾಲಿಕ ಹಾಗೂ ತ್ವರಿತ ಶಮನಕ್ಕೆ ಮಾರು ಹೋಗಿ ರೋಗವನ್ನು ಪೂರ್ಣ ಪ್ರಮಾಣದಲ್ಲಿ ಗುಣಪಡಿಸದ ಆಲೋಪತಿ ಚಿಕಿತ್ಸಾ ಪದ್ದತಿಯ ವ್ಯಾಮೋಹ ಬಿಟ್ಟು, ಆಯುಷ್ ಚಿಕಿತ್ಸೆ ಪಡೆದು ಉತ್ತಮ ಆರೋಗ್ಯ ಪಡೆದುಕೊಳ್ಳುವಂತಾಗಬೇಕಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್ ಮಾತನಾಡಿ, ‘ಮನೆ ಮದ್ದಾಗಿರುವ ಆಯುಷ್ ಚಿಕಿತ್ಸೆ ಕುರಿತು ನಾಗರಿಕರು ತಾತ್ಸಾರ ಮನೋಭಾವದಿಂದ ಹೊರಬರಬೇಕಿದೆ. ಮನೆಯಲ್ಲಿ ಹಿರಿಯರು ಮನೆ ಮದ್ದುಗಳನ್ನು ಸೇವಿಸಿ 100ಕ್ಕೂ ಹೆಚ್ಚು ವರ್ಷಗಳ ಕಾಲ ಉತ್ತಮ ಆರೋಗ್ಯಯುತ ಜೀವನ ನಡೆಸುತ್ತಿದ್ದರು. ಆದರೆ ಆಧುನಿಕತೆಗೆ ಮಾರುಹೋಗಿ ಕೇವಲ 40 ವರ್ಷಗಳಿಗೆ ಅನಾರೋಗ್ಯಕ್ಕೆ ಈಡಾಗಿ, ವೃದ್ದರಂತಾಗುತ್ತಿದ್ದೇವೆ. ಈ ಕುರಿತು ಅರಿವನ್ನುಂಟು ಮಾಡುವ ಕಾರ್ಯ ಹೆಚ್ಚಾಗಬೇಕಿದೆ. ಅಲ್ಲದೆ ತಾಲ್ಲೂಕಿನಲ್ಲಿ ನಕಲಿ ವೈದ್ಯರ ಪತ್ತೆ ಹಚ್ಚಲು ಆಯುಷ್ ಇಲಾಖೆಯ ಸಹಕಾರ ಹೆಚ್ಚಾಗಿದ್ದು, ಮಾರ್ಚ್‌ 31ರ ಒಳಗಾಗಿ ನಕಲಿ ವೈದ್ಯ ಮುಕ್ತ ತಾಲ್ಲೂಕನ್ನಾಗಿಸಲು ಆಯುಷ್ ಇಲಾಖೆಯ ಅಧಿಕಾರಿಗಳು ಕಾರ್ಯೋನ್ಮುಖವಾಗಬೇಕಿದೆ’ ಎಂದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ಮುಕ್ತಾಂಬಿಕಾ, ಡಾ.ಲಲಿತಾ, ಡಾ.ಹಲಿಮಾ ಯಾಸ್ಮಿನ್, ಡಾ.ಶಾಂತಲಾ, ಡಾ.ನೂರ್ ಅಫ್‍ಷಾ ಅವರು ಸ್ವಸ್ಥ ವೃತ್ತ, ಮನೆಮದ್ದು ಹಾಗೂ ಆಯುಷ್ ಚಿಕಿತ್ಸಾ ಪದ್ಧತಿಗಳ ಕುರಿತು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ, ಸದಸ್ಯರಾದ ನಾರಾಯಣಗೌಡ, ವೆಂಕಟರಮಣಪ್ಪ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮದ್ ರಫಿ ಹಕೀಂ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್, ತಾಲ್ಲೂಕು ಆಡಳಿತ ಅಧಿಕಾರಿ ಡಾ.ಎಸ್.ಎ.ಖುದ್ಸಿಯ ತಸ್‍ನೀಮ್, ವಿದ್ಯಾರ್ಥಿ ನಿಲಯದ ವಾರ್ಡನ್ ಶಿವಪ್ಪ, ತೂಬಗೆರೆ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎನ್‌.ರಂಗಪ್ಪ, ಮುಖಂಡರಾದ ಅಣ್ಣಯ್ಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT