ಸೋಮವಾರ, ಸೆಪ್ಟೆಂಬರ್ 23, 2019
24 °C
ವಿಜಯಪುರ ಸುತ್ತಮುತ್ತ ಕೈಸುಟ್ಟುಕೊಳ್ಳುತ್ತಿರುವ ರೈತರು

ಚೆಂಡು ಹೂವಿಗೆ ಮಳೆ ಹನಿಗಳಿಂದ ಸಂಕಷ್ಟ

Published:
Updated:
Prajavani

ವಿಜಯಪುರ: ಆಗಾಗ ಬೀಳುತ್ತಿರುವ ತುಂತುರು ಮಳೆಯಿಂದಾಗಿ ಮಾರುಕಟ್ಟೆಗೆ ಹೋಗುವ ಹಂತದಲ್ಲಿದ್ದ ಚೆಂಡು ಹೂವಿನಲ್ಲಿ ನೀರು ತುಂಬಿಕೊಂಡು ಒಳಗೆ ಕೊಳೆಯಲಾರಂಭಿಸಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತ ರಾಮಾಂಜಿನಪ್ಪ ಹೇಳಿದರು.

ಇಲ್ಲಿನ ರೈತರು ಹೇಳುವ ಪ್ರಕಾರ ‘ತುಂಬಾ ಕಷ್ಟಪಟ್ಟು ಬಂಡವಾಳ ಹೂಡಿಕೆ ಮಾಡಿ ಬೆಳೆದಿದ್ದರೂ ಹೂವಿನ ಬೆಳೆ ತುಂಬಾ ಚೆನ್ನಾಗಿ ಬಂದಿದೆ. ತುಂತುರು ಮಳೆಯಿಂದಾಗಿ ನೀರು ಹೂವಿನ ಒಳಗೆ ಶೇಖರಣೆಯಾಗುವ ಕಾರಣ, ಅರಳುತ್ತಿರುವ ಮೊಗ್ಗು ಮತ್ತು ಕೀಳುವ ಹಂತದಲ್ಲಿರುವ ಹೂವಿನ ಒಳಗೆ ಕೊಳೆಯಲಾರಂಭಿಸುವುದರಿಂದ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕಡಿಮೆ ಬೆಲೆಗೆ ಕೇಳುತ್ತಾರೆ’ ಎಂದರು.

‘ವರಮಹಾಲಕ್ಷ್ಮೀ ಹಬ್ಬದ ಸಮಯ ಹಾಗೂ ಶ್ರಾವಣ ಶನಿವಾರದ ಹಬ್ಬಗಳಲ್ಲಿ ಹೂವಿಗೆ ಹೆಚ್ಚು ಬೇಡಿಕೆಯಿರುತ್ತದೆ ಎನ್ನುವ ಉದ್ದೇಶದಿಂದ ಬೆಳೆದರೂ ಎಲ್ಲ ಹೂಗಳಿಗೂ ಉತ್ತಮ ಬೆಲೆಯಿದೆ. ಚೆಂಡು ಹೂವಿಗೆ ಮಾತ್ರ ಬೆಲೆಯಿಲ್ಲದಂತಾಗಿದ್ದು, ನಮ್ಮ ಪರಿಸ್ಥಿತಿ ಕಷ್ಟವಾಗುತ್ತಿದೆ. ತೋಟಕ್ಕೆ ಹಾಕಿರುವ ಬಂಡವಾಳವೂ ಹೊರಡದೆ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದರು.

ರೈತ ನಾರಾಯಣಸ್ವಾಮಿ ಮಾತನಾಡಿ, ‘ನಮ್ಮ ಬದುಕು ಮೂರಾಬಟ್ಟೆಯಂತಾಗಿದೆ. ಒಳ್ಳೆಯ ಬೆಲೆ ಇದ್ದಾಗ ಬೆಳೆ ಬರಲ್ಲ, ಬೆಳೆ ಬಂದಾಗ ಬೆಲೆ ಇರಲ್ಲ, ಬೆಳೆಯು ಬಂದು ಬೆಲೆಯೂ ಸಿಕ್ಕರೆ ಅಕಾಲಿಕ ಮಳೆ, ಆಲಿಕಲ್ಲು, ಹುಳುಗಳ ಬಾಧೆ’ ಇರುತ್ತದೆ.

‘ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ನಮ್ಮ ಸಂಕಷ್ಟವನ್ನು ಕೇಳುವವರು ಯಾರು, ತರಕಾರಿ ಬೆಳೆಗಳನ್ನು ಬೆಳೆಯೋಣವೆಂದರೆ ನೀರಿಲ್ಲ. ಹಿಂದೆ ಹಾಕಿದ್ದ ದ್ರಾಕ್ಷಿ ಗಿಡಗಳನ್ನು ಕಿತ್ತು ಹಾಕಿದ್ದೇವೆ’ ಎಂದರು.

‘ಹೈನುಗಾರಿಕೆ ಮಾಡೋಣವೆಂದರೆ ಮೇವು ಸಿಗುತ್ತಿಲ್ಲ. ರೇಷ್ಮೆ ಸಾಕಾಣಿಕೆ ಮಾಡಿದರೆ ಗೂಡಿಗೆ ಬೆಲೆಯಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದು ದಿಕ್ಕು ತೋಚದಂತಾಗಿದೆ. ಸರ್ಕಾರಗಳು ಇಂತಹ ಬೆಳೆಗಳಿಗೆ ಬೆಳೆ ನಷ್ಟ ಪರಿಹಾರ ಕೊಟ್ಟರೆ ಉತ್ತಮ’ ಎಂದರು.

ಹೂವಿನ ವ್ಯಾಪಾರಿಯೊಬ್ಬರು ಮಾತನಾಡಿ, ‘ರೈತರೇನೊ ಉತ್ತಮವಾಗಿ ಹೂ ಬೆಳೆದಿದ್ದಾರೆ. ಆದರೆ ಚೆಂಡು ಹೂ ನಮ್ಮಲ್ಲಿ ಹೆಚ್ಚು ದಿನಗಳ ಕಾಲ ಇಟ್ಟುಕೊಳ್ಳಲಿಕ್ಕೆ ಆಗಲ್ಲ. ಖರೀದಿಸಿದ ದಿನ ಇಲ್ಲವೇ ಮಾರನೇ ದಿನ ಮಾರಾಟ ಮಾಡಬೇಕು, ಇಲ್ಲವಾದರೆ ಹೂವಿನ ಒಳಗಿರುವ ನೀರಿನಿಂದ ಹೂ ಕೊಳೆಯುತ್ತದೆ. ಅದರ ಕಾಂತಿಯನ್ನು ಕಳೆದುಕೊಳ್ಳುವುದರಿಂದ ಗ್ರಾಹಕರು ಖರೀದಿ ಮಾಡುವುದಿಲ್ಲ. ಆದರೂ ಕೆಲ ರೈತರು ಯಾವಾಗಲೂ ನಮ್ಮ ಬಳಿಯಲ್ಲೆ ಹೂ ತಂದು ಹಾಕುವುದರಿಂದ ವಿಧಿಯಿಲ್ಲದೆ ವಿಶ್ವಾಸದ ಮೇಲೆ ಹೂ ಖರೀದಿ ಮಾಡಿಕೊಳ್ಳುತ್ತಿದ್ದೇವೆ. ಪುನಃ ನಾವು ಮಾರಾಟ ಮಾಡಲಿಕ್ಕೆ ಕಷ್ಟಪಡುವುದರ ಜೊತೆಗೆ ನಷ್ಟವನ್ನೂ ಅನುಭವಿಸಬೇಕು’ ಎಂದರು.

Post Comments (+)