ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಲಿ ವಾದ ಸರಣಿ | ಮೂರು ಹಂತ ಏಕೆ ಬೇಕು? ಎರಡು ಹಂತ ಸಾಕು..

ಆನಂದ ಮಲ್ಲಿಗವಾಡ
Published 6 ನವೆಂಬರ್ 2023, 3:22 IST
Last Updated 6 ನವೆಂಬರ್ 2023, 3:22 IST
ಅಕ್ಷರ ಗಾತ್ರ

ಕೆರೆಗಳಿಗೆ ನೀರು ತುಂಬಿಸುವ ಅವಳಿ ವ್ಯಾಲಿ ಯೋಜನೆಯ ಪರಿಕಲ್ಪನೆ ಚೆನ್ನಾಗಿದೆ. ಹೂಳು ತುಂಬಿರುವ ಕೆರೆಗಳಿಗೆ ಶುದ್ಧೀಕರಿಸಿದ ನೀರು ಹರಿಸಿದರೆ ಏನು ಪ್ರಯೋಜನ?

ಕೆರೆಯಲ್ಲಿರುವ ಕೊಳಕು, ಹೂಳು ತೆಗೆಯದೆ ಎರಡು ಮತ್ತು ಮೂರನೇ ಹಂತದ ಶುದ್ಧೀಕರಣ ಅನಗತ್ಯ. ಮೊದಲು ಕೆರೆ ಹೂಳು ತೆಗೆಸಿ  ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಬೇಕು. ನಂತರ ರಾಷ್ಟ್ರೀಯ ಹಸಿರು ನ್ಯಾಯಪೀಠದ (ಎನ್‌ಜಿಟಿ) ಮಾರ್ಗಸೂಚಿಯಂತೆ ಮಲೀನ ನೀರನ್ನು ಶುದ್ಧೀಕರಣ ಮಾಡಬೇಕು.

ಮೊದಲ ಹಂತದಲ್ಲಿಯೇ ಪರಿಪೂರ್ಣವಾಗಿ ಶುದ್ಧೀಕರಿಸಿದ ನೀರನ್ನು ನಾಲೆಗೆ ಹರಿಸಿದರೆ ಸಾಕು. ನಾಲೆಯಲ್ಲಿ ಹರಿಯುವ ಈ ನೀರಿಗೆ ಕೈಗಾರಿಕಾ ತ್ಯಾಜ್ಯ, ಕೊಳಚೆ ನೀರು ಸೇರುವುದರಿಂದ ಕೆರೆ ಸೇರುವ ಮೊದಲು ಎರಡನೇ ಹಂತದ ಶುದ್ಧೀಕರಣ ಕಡ್ಡಾಯ. ನಂತರ ಕೆರೆಗಳಿಗೆ ನೀರು ಹರಿಸಿದರೆ ಕೆರೆ ಪರಿಸರ, ಆರೋಗ್ಯ ಉತ್ತಮವಾಗಿರುತ್ತದೆ. ಈ ಯೋಜನೆಯೂ ಫಲಕಾರಿಯಾಗುತ್ತದೆ.

ಕೊಳಚೆ ನೀರು ತುಂಬಾಅಪಾಯಕಾರಿ. ಅಂಥ ನೀರನ್ನು ದೊಡ್ಡ ಮಟ್ಟದಲ್ಲಿ ಶುದ್ಧೀಕರಣ ಮಾಡುತ್ತಾರೆ ಎಂದರೆ ಅದು ಎಷ್ಟು  ಪರಿಣಾಮಕಾರಿಯಾಗಿರುತ್ತದೆ ಎಂಬುವುದೇ ಈಗ ಎಲ್ಲರ ಮುಂದಿರುವ ಪ್ರಶ್ನೆ ಮತ್ತು ಸಂಶಯ!

ಅನೇಕ ಕಂಪನಿಗಳು, ವಿಲ್ಲಾ, ಅಪಾರ್ಟ್‌ಮೆಂಟ್‌ಗಳು ಕೇವಲ ತೋರ್ಪಡಿಕೆಗೆ ಮಾತ್ರ ಎಸ್‌ಟಿಪಿ ಪ್ಲಾಂಟ್‌ ಹಾಕಿರುತ್ತಾರೆ. ಗುಣಮಟ್ಟ ಇರುವುದಿಲ್ಲ. ಹಾಗಾಗಿ ಈ ರೀತಿ ಹರಿಯುವ ನೀರನ್ನು ಶುದ್ಧೀಕರಿಸಿ ಬಳಸುವುದು ಅಪಾಯಕಾರಿ.

ಒಮ್ಮೆ ಪರಿಣಾಮಕಾರಿಯಾಗಿ ನೀರು ಶುದ್ಧೀಕರಣ ಮಾಡದೆ ಬಿಟ್ಟರೆ ಅದು ಎಲ್ಲರ ಮೇಲೂ ತುಂಬಾ ಪರಿಣಾಮ ಬೀರುತ್ತದೆ. ಶುದ್ಧೀಕರಿಸಿದ ನೀರು ನಾಲೆಗಳಲ್ಲಿ ಹರಿಯುವಾಗ ಮೋರಿ ನೀರು, ಕೈಗಾರಿಕಾ ತ್ಯಾಜ್ಯ, ಪ್ಲಾಸ್ಟಿಕ್‌, ಕೊಳಕು ಸೇರಿ ಕೊನೆಗೆ ಮಲೀನ ನೀರು ಕೆರೆ ಒಡಲು ಸೇರುತ್ತದೆ. ಇದರಿಂದ ಕೆರೆಗಳ ಪರಿಸರ ಮತ್ತು ಆರೋಗ್ಯ ನಾಶವಾಗುತ್ತದೆ.

ಒಂದು ಕೆರೆಗೆ ನೀರು ಹರಿಸಿದರೆ ಅದು ತುಂಬಿದ ನಂತರ ಮತ್ತೊಂದು ಕೆರೆಯನ್ನು ಸೇರುತ್ತದೆ. ತ್ಯಾಜ್ಯ, ಪ್ಲಾಸ್ಟಿಕ್‌ ತುಂಬಿದ ನೀರನ್ನು ಹೂಳು ತುಂಬಿರುವ ಕೆರೆಗೆ ಹರಿಸಿದರೆ ಏನು ಲಾಭ? ಎಷ್ಟು ಬಾರಿ ನೀರು ಶುದ್ಧೀಕರಿಸಿದರೆ ಏನು ಪ್ರಯೋಜನ?

ಕೆರೆಯಲ್ಲಿ ನೀರು ನಿಲ್ಲಲು, ಗಾಳಿಯಾಡಲು ಅವಕಾಶ ಮಾಡದೆ ಕೆರೆಗೆ ನೀರು ತುಂಬಿಸಿದರೆ ವ್ಯರ್ಥ. ಹೂಳು ತೆಗೆಯದೆ, ಕೆರೆ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಳ ಮಾಡದೆ ನೀರು ಹರಿಸಿದರೆ ಏನು ಪ್ರಯೋಜನವಾಗುತ್ತೆ? ಕೇವಲ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೀರು ಹರಿಯುತ್ತದೆ ಅಷ್ಟೇ. ಜತೆಗೆ ಕೆರೆ ನೀರಿಗೆ ಕೈಗಾರಿಕಾ ತ್ಯಾಜ್ಯ, ಪ್ಲಾಸ್ಟಿಕ್‌, ಅಪಾಯಕಾರಿ ರಾಸಾಯನಿಕ ಧಾತುಗಳು ಸೇರಿ ಕೆರೆ ಪರಿಸರ ನಾಶವಾಗುತ್ತದೆಯೋ ಹೊರತು ಏನು ಪ್ರಯೋಜನವಿಲ್ಲ.

ಏಕೆಂದರೆಮಳೆ ನೀರು ಬೇರೆ, ಶುದ್ಧೀಕರಿಸಿದ ಕೊಳಚೆ ನೀರು ಬೇರೆ. ಮಳೆ ನೀರು ಶುದ್ಧವಾದ ನೀರು. ಅದರಲ್ಲಿ ಯಾವುದೇ ಅಪಾಯಕಾರಿ ರಾಸಾಯನಿಕ ಅಂಶಗಳು ಇರುವುದಿಲ್ಲ. ಎರಡು ತಿಂಗಳು ಬಿಸಿಲು ಕಾದು ಮಣ್ಣು ಕೆಳಗಡೆ ಕೂತು,ನೀರು ತಿಳಿಯಾಗಿ ಉತ್ತಮ ಪರಿಸರ ನಿರ್ಮಾಣವಾಗುತ್ತದೆ. ನೀರಿನಲ್ಲಿದ್ದ ಹುಳು, ಹುಪ್ಪಟೆಗಳನ್ನು ಮೀನು, ಪಕ್ಷಿಗಳು ತಿಂದು ನೈಸರ್ಗಿಕವಾಗಿ ಸ್ವಚ್ಛ ಮಾಡುತ್ತವೆ.

ಆದರೆ, ಕೊಳಚೆ ನೀರು ಹಾಗಲ್ಲ. ಶುದ್ಧೀಕರಣಕ್ಕೆ ಫ್ಲೋರಿನ್‌, ಕ್ಲೋರಿನ್‌ ಮುಂತಾದ ರಾಸಾಯನಿಕ ಬಳಸುತ್ತಾರೆ. ಕ್ಲೋರಿನ್‌  ವಿಷಕ್ಕೆ ಸಮ. ಇದು ಕೇವಲ ನೀರಿನಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾ, ವೈರಾಣುಗಳನ್ನು ಮಾತ್ರವಲ್ಲ, ಒಳ್ಳೆಯ ಬ್ಯಾಕ್ಟೀರಿಯಾಗಳನ್ನೂ ಕೊಲ್ಲುತ್ತದೆ. 

ಮಣ್ಣಿನ ಒಂದು ಚದರ ಇಂಚಿನಲ್ಲಿ 3.60 ಲಕ್ಷ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ಕೊಳಚೆ ನೀರು ಹರಿಯುವ ಕಡೆ ಮಣ್ಣಿನಲ್ಲಿರುವ ಈ ಸೂಕ್ಷ್ಮಾಣು ಜೀವಿಗಳು ಸಾವನ್ನಪ್ಪುತ್ತವೆ. ಇದರಿಂದ ಅಂತರ್ಜಲವೂ ಕುಸಿಯುತ್ತದೆ ಹಾಗೂ ಬೆಳೆಯೂ ನಾಶವಾಗುತ್ತದೆ.

ಮಲೀನವಾದ ನೀರನ್ನು ಶುದ್ಧೀಕರಿಸಿದ ನಂತರವೂ ಆ ನೀರಿನಲ್ಲಿ ನೈಟ್ರೊ ಆಕ್ಸೈಡ್‌ ಅಂಶ ಇದ್ದೇ ಇರುತ್ತದೆ. ಮಣ್ಣಿನಲ್ಲಿ ಎಷ್ಟು ಪ್ರಮಾಣದಲ್ಲಿ ಆಕ್ಸೈಡ್‌ಗಳು ಇರಬೇಕೋ ಅಷ್ಟು ಪ್ರಮಾಣದಲ್ಲಿದ್ದರೆ ಉತ್ತಮ. ನೀರಿನಲ್ಲಿ ನೈಟ್ರೋಜನ್, ಪೊಟ್ಯಾಷಿಯಂ, ಫಾಸ್ಪರಸ್‌, ಸಲ್ಫರ್‌ನಂತಹ ರಾಸಾಯನಿಕ, ಭಾರಲೋಹದ ಅಂಶಗಳು ಹೆಚ್ಚಾಗಿರುತ್ತವೆ. ಇವು ಮಣ್ಣಿನ ಫಲವತ್ತತೆ ನಾಶ ಮಾಡುತ್ತವೆ. ಅಲ್ಲದೆ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ. ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗುತ್ತದೆ. ಈ ನೀರು ಬಳಸಿ ಬೆಳೆಯುವ ಬೆಳೆ, ತರಕಾರಿ, ಸೊಪ್ಪು, ಹಣ್ಣುಗಳ ಗುಣಮಟ್ಟದ ಮೇಲೆ ದುಷ್ಪರಿಣಾಮವಾಗುತ್ತದೆ. 

ಈ ಹಿಂದೆ ಮಳೆ ನೀರಿನಿಂದ ಕೆರೆಗಳು ತುಂಬಿ ಪ್ರಾಣಿ, ಪಕ್ಷಿ, ಮೀನುಗಳಿಗೆ ಶುದ್ಧ ನೀರು ಸಿಗುತ್ತಿದ್ದರಿಂದ ಪರಿಸರ ಉತ್ತಮವಾಗಿತ್ತು. ಆದರೆ ಆ ಕೆರೆಗೆ ಅಶುದ್ಧ ನೀರು ಹರಿಸಿದರೆ ಕೆರೆಯ ಪರಿಸರ, ಆರೋಗ್ಯವೂ ನಾಶವಾಗುತ್ತದೆ. ಜತೆಗೆ ಕೃಷಿ, ಪಶು, ಪಕ್ಷಿಗಳಿಗೂ ತೊಂದರೆಯಾಗುತ್ತದೆ. 

ಆಹಾರ ಕೃಷಿಗೆ ನೀರು ಬೇಡವೇ ಬೇಡ

ಶುದ್ಧೀಕರಿಸಿದ ನೀರಿನಲ್ಲಿ ನೈಟ್ರೊ ಆಕ್ಸೈಡ್‌ ಹೆಚ್ಚಿರುತ್ತವೆ. ಹಾಗಾಗಿ ಈ ನೀರನ್ನು ಬೆಳೆಗಳಿಗೆ ಹಾಯಿಸಿ, ಅಂಥ ಸೊಪ್ಪು, ತರಕಾರಿ, ಹಣ್ಣು ಸೇವಿಸಿದರೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. 

ಉದಾಹರಣೆಗೆ ಟೊಮೊಟೊ ಬೆಳೆಗೆ ನೀರು ಹಾಯಿಸಿದರೆ, ಮೊದಲು ಎರಡು, ಮೂರು ಬೆಳೆ ಫಸಲು ಚೆನ್ನಾಗಿ ಬರುತ್ತದೆ. ನಂತರ ಭೂಮಿಯ ಫಲವತ್ತತೆ ನಾಶವಾಗಿ ಬೆಳೆಯೂ ನಾಶವಾಗುತ್ತದೆ. ಇದನ್ನು ಸೇವಿಸುವ ಜನರ ಆರೋಗ್ಯದ ಮೇಲೂ ದುಷ್ಪರಿಣಾಮವಾಗುತ್ತದೆ. ಹಾಗಾಗಿ ಶುದ್ಧೀಕರಿಸಿದ ನೀರನ್ನು ಆಹಾರ ಉತ್ಪನ್ನ ಹೊರತುಪಡಿಸಿ ಪುಷ್ಪೋದ್ಯಮ, ರೇಷ್ಮೆ ಮುಂತಾದ ಕೃಷಿಗೆ ಬಳಸುವುದು ಉತ್ತಮ. ಜಾನುವಾರು ಸೇವಿಸುವ ಹುಲ್ಲು, ಮೇವಿಗೂ ಬಳಸಬಾರದು. ಹಸು, ಎಮ್ಮೆ ಇಂಥ ಹುಲ್ಲು, ಮೇವು ತಿಂದರೆ ಅವುಗಳ ಹಾಲು ಸೇವಿಸುವ ಜನರ ದೇಹಕ್ಕೂ ರಾಸಾಯನಿಕ ಅಂಶ ಸೇರುತ್ತದೆ. ದೀರ್ಘಕಾಲದಲ್ಲಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.  ಹಾಗಾಗಿ ಆಹಾರ ಉತ್ಪನ್ನಗಳ ಕೃಷಿಗೆ ಈ ನೀರಿನ ಬಳಕೆ ಬೇಡ. 

ಹಸಿರು ಬಣ್ಣಕ್ಕೆ ತಿರುಗಿದ ನೀರು

ನೀರಿನಲ್ಲಿ ಸಾರಜನಕ, ಪೊಟ್ಯಾಷಿಯಂ, ರಂಜಕ, ಗಂಧಕದಂತಹ ನೈಟ್ರೊ ಆಕ್ಸೈಡ್‌ಗಳು ಹೆಚ್ಚಾಗಿದ್ದಾಗ ಮಾತ್ರ ಅಲ್ಗಲ್ ಬ್ಲೂಮ್ಸ್ (ಹಸಿರು ಬಣ್ಣದ ನೀರು), ಅಜೋಲಾ (ಹಸಿರು ಬಣ್ಣದ ಪದರು), ವಾಟರ್ ಲೆಟಿವ್ಸ್ (ನೀರಿನಲ್ಲಿ ಬೆಳೆಯುವ ಸೊಪ್ಪು) ಬೆಳೆಯುತ್ತವೆ. 

ಎಣ್ಣೆ, ಕೊಳತೆ ಪದಾರ್ಥ, ಗ್ರೀಸ್, ಲೋಹ, ರಾಸಾಯನಿಕಗಳು ಇದ್ದಾಗ ನೀರಿನಲ್ಲಿ ಸಹಜವಾಗಿ ನೈಟ್ರೊ ಆಕ್ಸೈಡ್‌ಗಳು ಹೆಚ್ಚಾಗುತ್ತವೆ. ಇದರಿಂದ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ನೀರು ಶುದ್ಧೀಕರಿಸುವ ಘಟಕದಲ್ಲಿ (ಎಸ್‌ಟಿಪಿ) ನೀರನ್ನು ಯಾವ ಗುಣಮಟ್ಟದಲ್ಲಿ ಶುದ್ದೀಕರಣ ಮಾಡುತ್ತಾರೆ ಎಂಬುದು ಗೊತ್ತಾಗುತ್ತದೆ.

ಲೇಖಕರು: ಕೆರೆ ತಜ್ಞ, ಕೆರೆಗಳಿಗೆ ಮರುಜೀವ ನೀಡುವ ಕೆಲಸದಲ್ಲಿ ತೊಡಗಿರುವ ಟೆಕಿ

ನಿರೂಪಣೆ: ಚೈತ್ರ ಎಚ್‌.ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT