ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ, ಎನ್‌ಆರ್‌ಸಿ ವಿರುದ್ಧ ತೀವ್ರ ಹೋರಾಟದ ಎಚ್ಚರಿಕೆ

ಸಿಪಿಐಎಂ ಕಚೇರಿಯಲ್ಲಿ ‘ಮೋದಿ-‍ಶಾ ಕಾರ್ಖಾನೆಯ ಹತ್ತು ಮಹಾ ಸುಳ್ಳುಗಳು’ ಪುಸ್ತಕ ಬಿಡುಗಡೆ
Last Updated 16 ಜನವರಿ 2020, 12:31 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:‘ಸಂಸತ್‌ನಲ್ಲಿ ಬಹುಮತ ದೊರೆತಿರುವುದನ್ನು ದುರಪಯೋಗ ಮಾಡಿಕೊಂಡು ಸಂವಿಧಾನದ ಮೂಲ ಉದ್ದೇಶವನ್ನೇ ಬುಡಮೇಲು ಮಾಡುವ ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಎನ್‌ಆರ್‌ಸಿ ಜಾರಿಗೆ ತರಲು ಬಿಜೆಪಿ ಹೊರಟಿದೆ. ಇದನ್ನು ದೇಶದದಲ್ಲಿ ಜಾರಿಯಾಗಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಕೆ.ಎನ್‌.ಉಮೇಶ್‌ ಹೇಳಿದರು.

ಗುರುವಾರ ಇಲ್ಲಿನ ಸಿಪಿಐಎಂ ಕಚೇರಿಯಲ್ಲಿ ‘ಮೋದಿ-‍ಶಾ ಕಾರ್ಖಾನೆಯ ಹತ್ತು ಮಹಾ ಸುಳ್ಳುಗಳು’ ಕಿರು ಮಾಹಿತಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಡಿಸೆಂಬರ್‌ನಲ್ಲಿ ದೆಹಲಿಯ ರಾಮಲೀಲ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಆರ್‌ಸಿ ಜಾರಿ ಇಲ್ಲ ಎಂದು ಭಾಷಣ ಮಾಡಿದ್ದಾರೆ. ಆದರೆ ಸಂಸತ್‌ನ ಒಳಗೆ ಗೃಹ ಸಚಿವ ಅಮಿತ್‌ ಶಾ ಎನ್‌ಆರ್‌ಸಿ ನಡೆಸಿಯೇ ಸಿದ್ದ ಎನ್ನುತ್ತಾರೆ. 11 ದಿನಗಳಲ್ಲಿಯೇ ಸಿಎಎ, ಎನ್‌ಆರ್‌ಸಿ ಕುರಿತಂತೆ ಹತ್ತು ಮಹಾ ಸುಳ್ಳುಗಳನ್ನು ಹೇಳಿದ್ದಾರೆ. ಅಂದರೆ ದೇಶದಲ್ಲಿ ಈ ಕಾಯಿದೆಗಳ ಕುರಿತಂತೆ ನಡೆಯುತ್ತಿರುವ ಹೋರಾಟಗಳ ತೀವ್ರತೆಗೆ ಬಿಜೆಪಿ ಮುಖಂಡರು ಹತಾಶರಾಗಿದ್ದಾರೆ’ ಎಂದರು.

‘ದೇಶದಲ್ಲಿ ಹಿಂದಿನಿಂದಲೂ ಸಂವಿಧಾನಬದ್ದವಾಗಿ ಪೌರತ್ವ ನೀಡುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಆದರೆ ಎಂದೂ ಧರ್ಮ ಆಧಾರಿತವಾಗಿ ಪೌರತ್ವ ನೀಡುವ ಪ್ರಕ್ರಿಯೆ ನಡೆದಿರಲಿಲ್ಲ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಹಿಂದೂ ರಾಷ್ಟ್ರ ಮಾಡುವ ಪ್ರಯತ್ನವನ್ನು 2003ರಿಂದಲೂ ಆರಂಭಿಸಿದ್ದು ಈಗ ತನ್ನ ಕಾರ್ಯಾಚರಣೆ ತೀವ್ರಗೊಳಿಸಿದೆ. ಪೌರತ್ವ ಕಾಯಿದೆ ಸಂವಿಧಾನಕ್ಕೆ ಮತ್ತು ಸ್ವಾಮಿವಿವೇಕಾನಂದರ ಹಿಂದುತ್ವಕ್ಕೂ ವಿರುದ್ಧವಾಗಿದೆ’ ಎಂದು ಹೇಳಿದರು.

‘ಅಸ್ಸಾಂನಲ್ಲಿ ಶೇ 3ರಷ್ಟು ಎನ್‌ಆರ್‌ಸಿ ನಡೆಸಲು ₹ 3 ಕೋಟಿ ಖರ್ಚಾಗಿದೆ. ಇಡೀ ದೇಶದಲ್ಲಿಯೇ ಎನ್‌ಆರ್‌ಸಿ ನಡೆಸಬೇಕಾದರೆ ಅದೆಷ್ಟು ಹಣ ಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ದೇಶ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಇಂತಹ ಕಾಯಿದೆಗಳನ್ನು ಜಾರಿಗೆ ತಂದು ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಇದರ ವಿರುದ್ಧ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದರು.

ಸಿಪಿಐಎಂ ಜಿಲ್ಲಾ ಮುಖಂಡ ಆರ್‌.ಚಂದ್ರತೇಜಸ್ವಿ, ತಾಲ್ಲೂಕು ಮುಖಂಡರಾದ ಪಿ.ಎ.ವೆಂಕಟೇಶ್‌, ರುದ್ರ ಆರಾದ್ಯ, ಮೋಹನ್‌ ಬಾಬು, ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT