ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇಂದ್ರದ ನೀತಿ ದಲಿತರಿಗೆ ಮರಣ ಶಾಸನ’

ದೇವನಹಳ್ಳಿಯಲ್ಲಿ ಬಿಎಸ್‌ಪಿ ವತಿಯಿಂದ ಮಾಯಾವತಿ ಅವರ ಜನ್ಮದಿನ ಆಚರಣೆ
Last Updated 16 ಜನವರಿ 2019, 12:55 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಸಂವಿಧಾನ ವಿರೋಧ ನೀತಿ ದಲಿತರಿಗೆ ಮರಣ ಶಾಸನವಾಗುತ್ತಿದೆ’ ಎಂದು ಬಿಎಸ್‌ಪಿ ರಾಜ್ಯ ಘಟಕ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಪಕ್ಷದ ನಾಯಕಿ ಮಾಯಾವತಿ ಅವರ 63ನೇ ಜನ್ಮದಿನದ ಅಂಗವಾಗಿ ನಡೆದ ಜನಕಲ್ಯಾಣ ಜಾಗೃತಿ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷಗಳು ಉರುಳಿವೆ. ಆದರೆ ಗುಡಿಸಲು ಮುಕ್ತ, ಹಸಿವು ಮುಕ್ತ ಆಗಲೇ ಇಲ್ಲ. ದುಡಿಯುವ ರೈತರ ಕೈಗೆ ಜಮೀನು ಇಲ್ಲ, ನಿರುದ್ಯೋಗಿಗಳಿಗೆ ಉದ್ಯೋಗವಿಲ್ಲ ಎಂದು ಟೀಕಿಸಿದರು.

‘ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಭಿನ್ನವಾದರೂ ದಲಿತರ ಮತ ಬಳಸಿಕೊಂಡು ಅವರನ್ನು ಪರೋಕ್ಷವಾಗಿ ಹಣಿಯಲು ಮುಂದಾಗಿವೆ. ಬಿಜೆಪಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ಸಂವಿಧಾನವನ್ನು ಬದಲಾಯಿಸಲು ಬಂದಿದ್ದೇವೆ ಎಂದು ಬೊಬ್ಬೆ ಹಾಕುತ್ತಿದೆ’ ಎಂದು ದೂರಿದರು.

ರಾಜ್ಯ ಘಟಕ ಅಧ್ಯಕ್ಷ ಪ್ರೊ.ಹರಿರಾಮ್ ಮಾತನಾಡಿ, ‘ಪ್ರಧಾನಿ ಅವರು ಅಂಗೈಯಲ್ಲಿ ಆಕಾಶ ತೋರಿಸುವ ವ್ಯಕ್ತಿ. ಅನೇಕ ವರ್ಷಗಳ ಕಾಲ ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ದಲಿತರ ಪ್ರಗತಿದಾಯಕ ಯೋಜನೆಗಳನ್ನು ಜಾರಿಗೊಳಿಸಲು ವಿಫಲವಾಗಿದೆ’ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಿಎಸ್‌ಪಿ ತಾಕತ್ತೇನು ಎಂಬುದನ್ನು ತೋರಿಸಬೇಕಾಗಿದೆ. ಇದಕ್ಕಾಗಿ ಕಾರ್ಯಕರ್ತರು ಸಂಘಟಿತರಾಗಬೇಕು ಎಂದು ಹೇಳಿದರು.

ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಸರ್ಕಾರದ ಆಡಳಿತದಲ್ಲಿ ಜಾರಿಗೆ ತಂದ ಯೋಜನೆಗಳನ್ನೇ ಈಗ ಕಲ್ಯಾಣ ಯೋಜನೆಯಡಿ ಜಾರಿಗೊಳಿಸಲಾಗುತ್ತಿದೆ ಎಂದರು.

ರಾಜ್ಯ ಘಟಕ ಕಾರ್ಯದರ್ಶಿ ಈರಣ್ಣ ಮೌರ್ಯ, ಜಿಲ್ಲಾ ಸಂಯೋಜಕ ಮತ್ತು ಜಿಲ್ಲಾ ಉಸ್ತುವಾರಿ ನಂದಗುಂದ ವೆಂಕಟೇಶ್, ಜಿಲ್ಲಾ ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ದಾಸ್, ಖಜಾಂಚಿ ನರಸಿಂಹರಾಜು, ಜಿಲ್ಲಾ ಸಮಿತಿ ಸದಸ್ಯರಾದ ನರಸಿಂಹಮೂರ್ತಿ, ರಮಾದೇವಿ, ವೆಂಕಟಸ್ವಾಮಿ, ತಾಲ್ಲೂಕು ಸಂಚಾಲಕ ನಾರಾಯಣಸ್ವಾಮಿ, ತಾಲ್ಲೂಕು ಘಟಕ ಅಧ್ಯಕ್ಷ ಬಂಗಾರಪ್ಪ ಇದ್ದರು.

ಇದೇ ಸಂದರ್ಭದಲ್ಲಿ ವಿವಿಧ ಸಾಧಕರನ್ನು ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT