ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆರೆ ಅಭಿವೃದ್ಧಿಗೆ ಕೈಗಾರಿಕೆಗಳ ಸಹಕಾರ ಮುಖ್ಯ’

ಜಿಲ್ಲೆಯಲ್ಲಿ 25 ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ: ಸಿ.ಎಸ್‌.ಕರೀಗೌಡ
Last Updated 10 ಮೇ 2019, 13:40 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿಗೆ ಸಮೀಪದ ನೆಲಮಂಗಲ ತಾಲ್ಲೂಕಿನ ಅರ್ಜುನಬೆಟ್ಟನಹಳ್ಳಿ ಗ್ರಾಮದ ಕೆರೆ ಅಭಿವೃದ್ದಿಗೆ ಎಚ್‌.ಎಂ. ಕ್ಲಾಸಿಕಲ್‌ ಪ್ರೈವೇಟ್‌ ಲಿಮಿಟೆಡ್‌ ₹ 25 ಲಕ್ಷ ದೇಣಿಗೆ ನೀಡಿದೆ.

ಜಿಲ್ಲೆಯಲ್ಲಿನ ವಿವಿಧ ಕೈಗಾರಿಕೆಗಳು ಹಾಗೂ ಜನರಿಂದ ಕೆರೆ ಅಭಿವೃದ್ದಿಗೆ ಉತ್ತಮ ಸಹಕಾರ ದೊರೆಯುತ್ತಿದೆ. ಇದರಿಂದ ಜಿಲ್ಲೆಯಲ್ಲಿ 25 ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಹೇಳಿದರು.

ಶುಕ್ರವಾರ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅರ್ಜುನಬೆಟ್ಟನಹಳ್ಳಿ ಗ್ರಾಮದಲ್ಲಿ 120 ಕುಟುಂಬಗಳಿವೆ. ಕುಡಿಯುವ ನೀರಿಗೆ ತೀವ್ರ ತೊಂದರೆ ಇದೆ. ಹೀಗಾಗಿ ಮಳೆ ನೀರನ್ನೆ ಬಳಸಿಕೊಳ್ಳುವ ಬಗ್ಗೆ ಯೋಜನೆ ರೂಪಿಸಿದ್ದು ಒಂದು ಕುಟುಂಬಕ್ಕೆ 25,000 ರೂಪಾಯಿ ಖರ್ಚಾಗಲಿದೆ. ಈ ಹಣವನ್ನು ಎಚ್‌.ಎಂ.ಕ್ಲಾಸಿಕಲ್‌ ಕಂಪನಿಯವರೇ ಭರಿಸುವ ಬಗ್ಗೆ ಭರವಸೆ ನೀಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಪುರವರ ಗ್ರಾಮದಲ್ಲಿ ಕುಟುಂಬದ ಅಗತ್ಯಕ್ಕೆ ತಕ್ಕಂತೆ ಮಳೆ ನೀರು ಸಂಗ್ರಹಿಸಿ ಇಡೀ ವರ್ಷ ಬಳಸುತ್ತಿರುವ ನಿದರ್ಶನವಿದೆ. ಇದರಿಂದ ಆರೋಗ್ಯ ಸುಧಾರಣೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ’ ಎಂದರು.

‘ಕೆರೆಯ ನೀರು ಕೃಷಿ ಮತ್ತು ಕುಡಿಯುವ ನೀರಿಗಾಗಿ ಮಾತ್ರ ಬಳಕೆಯಾಗುತಿತ್ತು. ಆದರೆ ಈಗ ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ ಕಂಪನಿಗಳು, ಕೈಗಾರಿಕೆಗಳು ಸಹ ಎಲ್ಲ ರೀತಿಯ ಬಳಕೆಗೂ ಅಂತರ್ಜಲವನ್ನೇ ಅವಲಂಬಿಸಿವೆ. ಹೀಗಾಗಿ ಕೆರೆಗಳ ಅಭಿವೃದ್ಧಿಗೆ ಕೈಗಾರಿಕೆಗಳು ಉದಾರವಾಗಿ ಆರ್ಥಿಕ ನೆರವು ನೀಡುವ ಮೂಲಕ ಮಳೆ ನೀರು ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದರು.

‘ಅಂತರ್ಜಲದ ಮೇಲಿನ ಅವಲಂಬನೆ ಕಡಿಮೆ ಮಾಡಲು ಜಿಲ್ಲೆಯಲ್ಲಿನ ಎಲ್ಲ ಕೈಗಾರಿಕೆಗಳು, ವಾಣಿಜ್ಯ ಉದ್ದೇಶದ ಕಟ್ಟಡಗಳು ಸೇರಿದಂತೆ ಮನೆಗಳು ಸಹ ಮಳೆ ನೀರು ಸಂಗ್ರಹ ಮಾಡುವಂತೆ ನೋಟಿಸ್‌ ನೀಡಲಾಗಿದೆ. ಈ ಬಗ್ಗೆ ಕೈಗಾರಿಕಾ ವ್ಯವಸ್ಥಾಪಕರ ಸಭೆ ನಡೆಸಲಾಗಿದೆ’ ಎಂದರು.

ನೆಲಮಂಗಲ ತಾಲ್ಲೂಕು ತಹಶೀಲ್ದಾರ್‌ ರಾಜಶೇಖರ್‌, ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಸುನಿತಾ, ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್‌, ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್‌, ಎಚ್‌.ಎಂ.ಕ್ಲಾಸಿಕಲ್‌ ಪ್ರೈವೇಟ್‌ ಲಿಮಿಟೆಡ್‌ನ ಹೆಚ್ಚುವರಿ ವ್ಯವಸ್ಥಾಪಕಿ ರಮಾರಾವ್‌, ಸಂತೋಷ್‌ಕುಮಾರ್‌ ಹೆಗಡೆ, ವ್ಯವಸ್ಥಾಪಕ ರಾಜಶೇಖರ್‌, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT