ಮಂಗಳವಾರ, ಜನವರಿ 28, 2020
25 °C
ಹೊಸಕೋಟೆ ನಾಗರಿಕ ವೇದಿಕೆ ಹಮ್ಮಿಕೊಂಡಿದ್ದ ‘ಸಿಎಎ ತಿದ್ದುಪಡಿ ಕಾಯ್ದೆಯ ಜನಜಾಗೃತಿ’

ಜನರ ದಾರಿ ತಪ್ಪಿಸುವ ಕಾಂಗ್ರೆಸ್: ಮಾಳವಿಕಾ ಅವಿನಾಶ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ಕೆಂದ್ರದಲ್ಲಿ ವಿರೋಧ ಪಕ್ಷದಲ್ಲಿ ಕೂರಲೂ ಸ್ಥಾನವಿಲ್ಲದ ಕಾಂಗ್ರೆಸ್ ಈಗ ದೇಶದ ಅಭಿವೃದ್ಧಿಗೆ ಪೂರಕವಾದ ಸಿಎಎ ವಿಚಾರದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿ ವಿನಾಕಾರಣ ದೇಶದಲ್ಲಿ ಅಶಾಂತಿ ಹುಟ್ಟುಹಾಕುತ್ತಿದೆ ಎಂದು ಬಿಜೆಪಿ ಮುಖಂಡರಾದ ಮಾಳವಿಕಾ ಅವಿನಾಶ್ ಆರೋಪಿಸಿದರು.

ಅವರು ನಗರದಲ್ಲಿ ಹೊಸಕೋಟೆ ನಾಗರಿಕ ವೇದಿಕೆ ಹಮ್ಮಿಕೊಂಡಿದ್ದ ‘ಸಿಎಎ ತಿದ್ದುಪಡಿ ಕಾಯ್ದೆಯ ಜನಜಾಗೃತಿ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಬಿಜೆಪಿ ತರಲಿಲ್ಲ. ಅದು ಕೇವಲ ಸಣ್ಣ ತಿದ್ದುಪಡಿಯನ್ನಷ್ಟೇ ಮಾಡಿದೆ. ಆದರೂ, ದೇಶದಲ್ಲಿ ದೊಡ್ಡ ಹೋರಾಟವನ್ನು ಜನರಿಂದ ಮಾಡಿಸುತ್ತಿದ್ದಾರೆ. ಈ ಕಾನೂನಿನಿಂದ ಈಗಾಗಲೇ ಹತ್ತಾರು ವರ್ಷದಿಂದ ಭಾರತದಲ್ಲಿರುವ ಜನರಿಗೆ ಏನೂ ತೊಂದರೆಯಿಲ್ಲ ಎಂದರು.

ಈ ದೇಶಕ್ಕೆ ಬಂದಿರುವ ನಿರಾಶ್ರಿತರಾಗಿ ಬಂದಿರುವ ಅಕ್ಕ ಪಕ್ಕದ ದೇಶಗಳ ಅಲ್ಲಿನ ಅಲ್ಪಸಂಖ್ಯಾತರಿಗೆ ಮಾನವೀಯತೆ ದೃಷ್ಟಿಯಿಂದ 11 ವರ್ಷದ ಬದಲಾಗಿ 6 ವರ್ಷಕ್ಕೆ ಇಲ್ಲಿನ ಪೌರತ್ವವನ್ನು ಕೊಡುವ ತಿದ್ದುಪಡಿಯನ್ನಷ್ಟೇ ಮಾಡಲಾಗಿದೆ. ಆದರೂ, ವಿನಾಕಾರಣ ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿರುವ ಕಾಂಗ್ರೆಸ್ ಕ್ರಮ ಖಂಡನೀಯ ಎಂದರು.

ಈ ಕಾನೂನಿನಿಂದ ಇಲ್ಲಿ ನೂರಾರು ವರ್ಷಗಳಿಂದ ವಾಸವಾಗಿರುವ ಮುಸ್ಲಿಮರು ಸೇರಿ ಯಾರಿಗೂ ಸಮಸ್ಯೆಯಿಲ್ಲ ಎಂದು ನೂರಾರು ಬಾರಿ ಪ್ರಧಾನ ಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಇದು ಪೌರತ್ವ ನೀಡುವ ಕಾನೂನೇ ಹೊರತು ಪೌರತ್ವ ಕಸಿಯುವ ಕಾನೂನಲ್ಲ ಎಂದರು.

ಮಾಜಿ ಶಾಸಕ ಎಂ.ಟಿ.ಬಿ. ನಾಗರಾಜ್ ಮಾತನಾಡಿ, ಪೌರತ್ವ ತಿದ್ದುಪಡಿಯಿಂದ ದೇಶದಲ್ಲಿರುವ 130 ಕೋಟಿ ಭಾರತೀಯರಿಗೆ ತೊಂದರೆಯಿಲ್ಲ. ಇದನ್ನು ಇಲ್ಲಿನ ಎಲ್ಲ ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು ಎಂದರು. ವೇದಿಕೆ ಮೇಲೆ ನಗರದ ವಕೀಲರಾದ ಪಿ.ಎಸ್. ಮಂಜುನಾಥ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ತಿರಂಗಾ ಧ್ವಜದ ಮೆರವಣಿಗೆ ನಡೆಸಿದರು. ಬಹುತೇಕ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ನಗರ ಬಿಜೆಪಿ ಅಧ್ಯಕ್ಷ ಜಯರಾಜ್, ಜೆಮಿನಿ ಸತೀಶ್, ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು