ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಕೆರೆಗೆ ಕಲುಷಿತ ನೀರು; ಆತಂಕ

ರಾಜಕಾಲುವೆಗೆ ಹರಿಯುತ್ತಿರುವ ಕಲ್ಮಶ ನೀರು
Last Updated 4 ನವೆಂಬರ್ 2021, 7:04 IST
ಅಕ್ಷರ ಗಾತ್ರ

ದೇವನಹಳ್ಳಿ:ತೀವ್ರ ಬರಗಾಲಕ್ಕೆ ತುತ್ತಾಗಿದ್ದ ತಾಲ್ಲೂಕಿನಲ್ಲಿ ಈಚೆಗೆ ಸುರಿದ ವಾಡಿಕೆ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರ ಪರಿಣಾಮ ಕೆರೆಗಳು ಭರ್ತಿಯಾಗಿವೆ.

ಸಾದಹಳ್ಳಿ ಸಮೀಪದ ಹಾಲಿವುಡ್ ಟೌನ್‌ನಲ್ಲಿ ಉಪಯೋಗವಾಗುವ ನೀರನ್ನು ಹೊರಗೆ ಬಿಡುತ್ತಿದ್ದು ನೇರವಾಗಿ ಕೆರೆಗೆ ಹರಿಯುತ್ತಿದೆ ಎಂದು ಇಲತೊರೆ ಹಾಗೂ ಚೌಡನಹಳ್ಳಿ ಗ್ರಾಮಸ್ಥರು ದೂರಿದ್ದಾರೆ.

ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಾಲಿವುಡ್ ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಜನರು ಉಪಯೋಗಿಸಿದ ನೀರು ಶುದ್ಧೀಕರಣ ಮಾಡಿ ಹೊರಗೆ ಬಿಡುವ ಬದಲಿಗೆ ನೇರವಾಗಿ ಪೈಪ್‌ ಮೂಲಕ ರಾಜಕಾಲುವೆಗೆ ಬಿಟ್ಟಿದ್ದಾರೆ. ರಾಜಕಾಲುವೆ ಮೂಲಕ ಹರಿದು ಬರುತ್ತಿರುವ ನೀರು ಕೆರೆಗೆ ಸೇರುತ್ತಿದೆ. ಕೆರೆ ನೀರು ಕೂಡ ದುರ್ನಾತ ಬೀರುತ್ತಿದೆ ಎಂದು ದೂರಿದ್ದಾರೆ.

ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಲು ಸಾಧ್ಯ ಆಗುತ್ತಿಲ್ಲ. ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಈಗ ಕೊಳಚೆ ನೀರು ಕೆರೆಗೆ ಸೇರುತ್ತಿರುವುದರಿಂದ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ.

ದನ, ಕರು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಕೆರೆಯಲ್ಲೇ ಪಂಚಾಯಿತಿಯಿಂದ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಯಿಸಿದ್ದಾರೆ. ಈ ಕೊಳವೆಬಾವಿಯಿಂದಲೇ ಜನರಿಗೆ ಕುಡಿಯುವ ನೀರು ನೀಡಲಾಗುತ್ತಿದೆ.

ಆದರೆ, ಈಗ ನೀರು ಕಲುಷಿತವಾಗುತ್ತಿರುವುದರಿಂದ ಕೊಳವೆಬಾವಿಯಲ್ಲಿ ನೀರು ಕೂಡ ಕಲುಷಿತವಾಗುವ ಸಾಧ್ಯತೆ ಹೆಚ್ಚಾಗಿದೆ. ಇದು ಜನರ ಆರೋಗ್ಯ ಮೇಲೆ ಕೂಡ ಗಂಭೀರ ಪರಿಣಾಮ ಬೀರಲಿದೆ. ಕೆರೆಯಲ್ಲಿ ನೀರು ಸಂಗ್ರಹವಾಗಿದೆ. ಮೀನುಗಾರಿಕೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್
ಒತ್ತಾಯಿಸಿದರು.

ಚೌಡನಹಳ್ಳಿಯ ಮಹಿಳೆ ನಾರಾಯಣಮ್ಮ ಮಾತನಾಡಿ, ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವಾಗ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಕೆರೆ ನೀರು ಕುಡಿದು ದನ, ಕರು ಸತ್ತಿವೆ. ಕೆಲವು ದನಗಳು ಕಾಯಿಲೆಗೆ ಒಳಗಾಗಿವೆ. ಈ ಬಗ್ಗೆಕ್ರಮಕೈಗೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT