ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ಕುರಿತು ಪತ್ರಿಕೆಗಳಿಂದ ಜಾಗೃತಿ

Last Updated 30 ಮಾರ್ಚ್ 2020, 14:20 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಿತ್ಯ ಸುತ್ತಮುತ್ತಲಿನ ಬೆಳವಣಿಗೆಗಳು ಹಾಗೂ ಕೊರಾನಾ ಸೋಂಕು ಕುರಿತಂತೆ ಜನರಿಗೆ ನಿಖರ ಮಾಹಿತಿ ತಿಳಿಸುವಲ್ಲಿ ದಿನಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಪತ್ರಿಕೆಗಳಿಂದ ಕೊರೊನಾ ವೈರಸ್‌ ಹರಡುವುದಿಲ್ಲ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ದಿನಪತ್ರಿಕೆ ವಿತರಕರು ಹಾಗೂ ವರದಿಗಾರರ ಸಭೆಯಲ್ಲಿ ಅವರು ಮಾತನಾಡಿದರು.

ಪತ್ರಿಕೆಗಳು ವೈರಸ್‌ ತಡೆಗೆ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡಿವೆ. ಪತ್ರಿಕಾ ವಿತರಕರಿಗೆ ಗುರುತಿನ ಚೀಟಿ ನೀಡುವುದು ಮತ್ತು ಪೊಲೀಸರಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಬಗೆಹರಿಸುವಂತೆ ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ. ದಿನಪತ್ರಿಕೆಗಳ ಪತ್ರಿಕೆಗಳ ಬಿಲ್‌ ಪಾವತಿಸಲು ಸಮಯ ನೀಡುವಂತೆ ಪತ್ರಿಕಾ ಮಾಲೀಕರೊಂದಿಗೆ ಚರ್ಚಿಸಲಾಗುವುದು. ಪತ್ರಿಕಾ ವಿತರಕರ ಹಾಗೂ ವರದಿಗಾರರಿಗೆ ವಿಮಾ ಸೌಲಭ್ಯ ನೀಡುವ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಪತ್ರಕರ್ತರಿಗೆ ಹಾಗೂ ವಿತರಕರಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸುವ ಬಗ್ಗೆ ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೊಡ್ಡಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರಾನಾ ಸೋಂಕು ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ದಿನಬಳಕೆ ವಸ್ತುಗಳನ್ನು ಪೂರೈಕೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವರ್ತಕರು ಹೆಚ್ಚಿನ ಬೆಲೆಗೆ ಸರಕುಗಳನ್ನು ಮಾರಾಟ ಮಾಡದಂತೆ ಎಪಿಎಂಸಿ ಅಧಿಕಾರಿಗಳು ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ರಸ್ತೆ ಸಂಪರ್ಕ ಕಡಿತಗೊಳಿಸದಿರಿ: ಗ್ರಾಮಗಳಿಗೆ ಹೊರಗಿನವರು ಬರದಂತೆ ನಿರ್ಬಂಧ ಹಾಕುವುದರಿಂದ ಹಾಲಿನ ವಾಹನ ಹಾಗೂ ತುರ್ತು ಚಿಕಿತ್ಸೆಗಾಗಿ ಓಡಾಡುವ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಯಾವುದೇ ಕಾರಣಕ್ಕೂ ಗ್ರಾಮಗಳ ದಾರಿಯನ್ನು ಬಂದ್‌ ಮಾಡಬಾರದು. ಜನತೆ ಮಾರುಕಟ್ಟೆಗಳಲ್ಲಿ ಗುಂಪಾಗಿ ಸೇರುವ ಪ್ರಕರಣಗಳ ಬಗ್ಗೆ ಹೆಚ್ಚಿನ ದೂರುಗಳಿವೆ. ಸ್ವಯಂ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಮನೆಯಲ್ಲಿಯೇ ಇರಬೇಕು ಎಂದು ಹೇಳಿದರು.

ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ, ಕೊರಾನಾ ಸೋಂಕು ಹರಡದಂತೆ ತಾಲ್ಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇದು ಪತ್ರಿಕೆಗಳ ಮೂಲಕ ಜನರಿಗೆ ತಲುಪಬೇಕಿದೆ. ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ. ತಾಲ್ಲೂಕು ಆಡಳಿತದಿಂದ ಪತ್ರಿಕಾ ವಿತರಕರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ನಗರಸಭೆ ಆಯುಕ್ತ ಆರ್.ಮಂಜುನಾಥ್, ಸರ್ಕಲ್ ಇನ್‌ಸ್ಪೆಕ್ಟರ್‌ ರಾಘವ ಎಸ್.ಗೌಡ, ದಿನಪತ್ರಿಕೆಗಳ ವಿತರಕರ ಸಂಘದ ಅಧ್ಯಕ್ಷ ಆರ್‌.ರಮೇಶ್‌, ಉಪಾಧ್ಯಕ್ಷ ಮುನಿರಾಜು, ಕಾರ್ಯದರ್ಶಿ ದೇವನಾಥ್‌, ಖಜಾಂಚಿ ಪವನ್‌ಕುಮಾರ್‌, ನಿರ್ದೇಶಕರಾದ ಭಾಸ್ಕರ್‌, ಮೂರ್ತಿ, ಆನಂದ್‌, ರಂಗನಾಥ್‌, ರಮೇಶ್‌ಶಣೈ, ರಾಮನಾಥ್‌, ನವೀನ್‌ ಹಾಗೂ ವರದಿಗಾರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT