ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಲಾಕ್‌ಡೌನ್‌ ಉಲ್ಲಂಘನೆ

ದೇವನಹಳ್ಳಿಯಲ್ಲಿ ಆದೇಶಕ್ಕೆ ಮನ್ನಣೆ ನೀಡದ ಸಾರ್ವಜನಿಕರು; ಕಳವಳ
Last Updated 23 ಮಾರ್ಚ್ 2020, 14:30 IST
ಅಕ್ಷರ ಗಾತ್ರ

ದೇವನಹಳ್ಳಿ: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ 9 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಜಾರಿ ಮಾಡಿದೆ.ಇದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯೂ ಸೇರಿದೆ. ಸರ್ಕಾರದ ಆದೇಶವನ್ನು ಸಾರ್ವಜನಿಕರು ಉಲ್ಲಂಘಿಸುತ್ತಿರುವುದು ಜಿಲ್ಲಾಡಳಿತವನ್ನು ಚಿಂತೆಗೀಡುಮಾಡಿದೆ.

ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಗರದಲ್ಲಿನ ಲಾಕ್ ಡೌನ್ ಉಲ್ಲಂಘನೆ ಮಾಡಿದ ಸಾರ್ವಜನಿಕರು ತಮ್ಮ ದೈನಂದಿನ ಚಟುವಟಿಕೆಯಲ್ಲಿ ನಿರಾಂತಕವಾಗಿ ತೊಡಗಿಸಿಕೊಂಡರು. ಕೆಲವು ಕಡೆ ವಾಣಿಜ್ಯ ಮಳಿಗೆಗಳು ತೆರೆದಿದ್ದವು.

ಕೊರೊನಾ ವೈರಸ್‌ನಿಂದ ಕಲಬುರಗಿಯಲ್ಲಿ ವ್ಯಕ್ತಿಯು ಮೃತ ಪಟ್ಟ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಆಗಮಿಸುವವರನನ್ನು ದೇವನಹಳ್ಳಿ ನಗರದ ಆಕಾಶ್ ವೈದ್ಯಕೀಯ ಶಿಕ್ಷಣ ಕಾಲೇಜಿನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಸೋಂಕು ಲಕ್ಷಣ ಕಂಡುಬಂದರೆ ಬೆಂಗಳೂರು ನಗರದ ರಾಜೀವ್ ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ‘ಬಿ’ ವರ್ಗದಲ್ಲಿರುವವರನ್ನು ಆಕಾಶ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಈ ಎಲ್ಲ ಸಂಗತಿಗಳು ಪ್ರತಿ ಜನಸಾಮಾನ್ಯನಿಗೂ ಗೊತ್ತಿದೆ. ಆದರೂ, ಮುನ್ನೆಚ್ಚರಿಕೆ ವಹಿಸುತ್ತಿಲ್ಲ.

ಜನತಾ ಕರ್ಫ್ಯೂ ದಿನವಾದ ಮಾರ್ಚ್‌ 22ರಂದು ಸಾರ್ವಜನಿಕರು ಮನೆಗಳಲ್ಲಿಯೇ ಇದ್ದು ಸರ್ಕಾರದ ಆದೇಶ ಪಾಲಿಸಿದ್ದಾರೆ. ಆದರೆ, ಅದರ ಮಾರನೆಯ ದಿನವಾದ ಸೋಮವಾರ ಲಾಕ್‌ಡೌನ್‌ ಅನ್ನು ಉ‍ಲ್ಲಂಘಿಸುತ್ತಿದ್ದಾರೆ. ದೇವನಹಳ್ಳಿ ನಗರದಲ್ಲಿ ಆದೇಶ ಉಲ್ಲಂಘಿಸಿ ಸ್ಥಳೀಯರು ಎಲ್ಲಂದರಲ್ಲಿ ಓಡಾಡುತ್ತಿರುವುದು ಸೋಂಕಿನ ಬಗ್ಗೆ ಇರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂಬುದು ಸ್ಥಳೀಯರ ಆರೋಪ.

ಸುರಕ್ಷತಾ ಕ್ರಮ ಪಾಲಿಸುತ್ತಿಲ್ಲ:ನಗರದ ಹೋಟೆಲ್‌ಗಳಲ್ಲಿ ಆಹಾರವನ್ನು ಪಾರ್ಸಲ್ ಮಾಡಲಾಗುತ್ತಿದೆ. ಉಪಹಾರ ಸೇವಿಸುವ ಗ್ರಾಹಕರಿಗೆ ಕಡಿವಾಣವಿಲ್ಲ. ಪ್ರತಿಯೊಂದು ಅಂಗಡಿಗಳು ತೆರೆದಿವೆ. ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಹೊರತು ಪಡಿಸಿ ಬಿ.ಎಂ.ಟಿ.ಸಿ, ಖಾಸಗಿ ಬಸ್‌ಗಳು, ಆಟೋಗಳು, ಸರಕು ಸಾಗಾಣಿಕೆ ವಾಹನಗಳು, ಮ್ಯಾಕ್ಸಿ ಕ್ಯಾಬ್‌ ಸಂಚರಿಸುತ್ತಿವೆ. ವಿಪರ್ಯಾಸವೆಂದರೆ ಚಾಲಕರಾಗಲಿ, ತರಕಾರಿ ಮತ್ತು ದಿನಸಿ ಮಾರಾಟಗಾರರಾಗಲಿ ಮತ್ತು ಖರೀದಿಸುವ ಗ್ರಾಹಕರಾಗಲಿ ಯಾವುದೇ ಸುರಕ್ಷತಾ ಕ್ರಮ ಪಾಲಿಸುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಖರೀದಿ ಜೋರು

ನಿತ್ಯ ಅಗತ್ಯ ವಸ್ತುಗಳು, ದಿನಸಿ, ಔಷಧ, ವೈದ್ಯಕೀಯ ಸೇವೆ ಸೇರಿದಂತೆ ಮತ್ತಿತರ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ಯಾವುದೇ ಸೇವೆಗಳು ಲಭ್ಯ ಇರುವುದಿಲ್ಲ ಎಂದು ಘೋಷಣೆ ಮಾಡಲಾಗಿತ್ತು. ಮೀನು, ಮಾಂಸ ಮಾರಾಟ ಹೊರತು‍ಪಡಿಸಿ ವಾಣಿಜ್ಯ ಮಳಿಗೆಗಳಿಂದ ಮಾರಾಟ ನಡೆದಿದೆ. ದಿನದಲ್ಲಿ ಒಂದೆರಡು ತಾಸು ಮಾತ್ರ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿ ನಂತರ ಸಂಪೂರ್ಣ ಲಾಕ್ ಡೌನ್ ಮಾಡಬೇಕು. ದಿನದ ವಾಹಿವಾಟು ಮುಂದುವರೆದರೆ ಲಾಕ್ ಡೌನ್‌ಗೆ ಅರ್ಥವಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಲಾಕ್ ಡೌನ್ ಬಗ್ಗೆ ನಿರ್ಲಕ್ಷ್ಯ

ರಾಜ್ಯ ಸರ್ಕಾರ ಲಾಕ್ ಡೌನ್ ಆದೇಶ ನೀಡಿ 24 ತಾಸು ಕಳೆದರೂ ತಾಲ್ಲೂಕು ಆಡಳಿತ ಗಂಭಿರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಬೆಳಿಗ್ಗೆಯಿಂದಲೇ ವಹಿವಾಟು ಆರಂಭಗೊಂಡಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ನಗರಕ್ಕೆ ಆಗಮಿಸುವವರು ಬರುತ್ತಲೇ ಇದ್ದಾರೆ. ಹೋಗುತ್ತಲೆ ಇದ್ದಾರೆ. ಇಲ್ಲಿ ಹೇಳೋರು ಕೇಳೋರು ಯಾರು ಇಲ್ಲ. ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ ಸ್ಥಳೀಯ ಆಂಜಿನಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT