ಮಂಗಳವಾರ, ಜನವರಿ 18, 2022
27 °C

ದೊಡ್ಡಬಳ್ಳಾಪುರ | ಕೋವಿಡ್‌ ಲಸಿಕೆ ವಿತರಣೆ; ಪ್ರಗತಿ ಸಾಲದು ಎಂದು ಡಿಸಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಹಾಕುವಲ್ಲಿ ಹಿಂದುಳಿದಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಪರಮೇಶ್ವರ ಅವರ ವಿರುದ್ಧ ಕೆಂಡಾಮಂಡಲವಾದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌, ಸದಾ ಸಭೆಯಲ್ಲಿ ಸಬೂಬುಗಳನ್ನು ಹೇಳುತ್ತಲೇ ಕಾಲಕಳೆಯುತ್ತಿದ್ದರೆ ಕೊರೊನಾ ಸೋಂಕು ತಡೆಯುವುದಾದರು ಹೇಗೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಗಂಗಣದಲ್ಲಿ ಶನಿವಾರ ವಿವಿಧ ಇಲಾಖೆ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ‘ನಾಲ್ಕು ಗೋಡೆಗಳ ನಡುವೆ ಕಳಿತುಕೊಂಡರೆ ಯಾರೂ ನಿಮ್ಮ ಬಳಿಗೆ ಬಂದು ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ಜನರಲ್ಲಿ ಅರಿವು ಮೂಡಿಸಬೇಕು, ಜನರು ಇರುವಲ್ಲಿಗೆ ಹೋಗಿ ಲಸಿಕೆ ಹಾಕುವ ಮೂಲಕ ಶೇ 100ರಷ್ಟು ಪ್ರಗತಿ ಸಾಧಿಸಬೇಕಿತ್ತು. ಲಸಿಕೆ ಅಭಿಯಾನ ಆರೋಗ್ಯ ಇಲಾಖೆಯ ಅಧಿಕಾರಿಗಳಷ್ಟೇ ಜವಾಬ್ದಾರಿ ಕಂದಾಯ, ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಇತರೆ ಅಧಿಕಾರಿಗಳ ಜವಾಬ್ದಾರಿಯು ಇದೆ’ ಎಂದರು.

ಕೋವಿಡ್‌ 3ನೇ ಅಲೆ ಆರಂಭವಾಗಿದೆ. ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೋವಿಡ್‌ ತೀವ್ರತೆ ಹೆಚ್ಚಾಗುವುದನ್ನು ತಡೆಯಲು ಪ್ರಯತ್ನಿಸುತ್ತಿದೆ. ಆದರೆ ಸರ್ಕಾದ ಸೂಚನೆಗಳನ್ನು ಸೂಕ್ತ ರೀತಿಯಲ್ಲಿ ಪಾಲಿಸದೆ ಲಸಿಕೆ ನೀಡಿಕೆ ಸಾಧನೆ ವಿಳಂಬವಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾದರೆ ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳು ಏನು ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿಗಳ ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ಆರೋಗ್ಯ ಅಧಿಕಾರಿಗಳು
ತಡವರಿಸಿದರು.

ಮಾಧ್ಯಮದವರ ಮೇಲೆ ಹರಿಹಾಯ್ದ ಡಿಸಿ: ಕೋವಿಡ್‌ ಲಸಿಕೆ ಪ್ರಗತಿ ಪರಿಶೀಲನ ಸಭೆಯ ವರದಿ ಮಾಡಲು ಹೋಗಿದ್ದ ಮಾಧ್ಯಮದವರು ಪೋಟೋ ತೆಗೆಯಲು ಮುಂದಾಗುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ‘ಅಧಿಕಾರಿಗಳ ಸಭೆಯಲ್ಲಿ ಮಾಧ್ಯಮದವರಿಗೆ ಪ್ರವೇಶ ಇಲ್ಲ. ಸಭಾಂಗಣದ ಒಳಗೆ ಮಾಧ್ಯಮದವರನ್ನು ಯಾರು ಬರಲು ಅವಕಾಶ ನೀಡಿದ್ದು’ ಎಂದು ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಮಾಧ್ಯಮದವರನ್ನು ಹೊರ ಹೋಗುವಂತೆ ಹರಿಹಾಯ್ದರು. ಜಿಲ್ಲಾಧಿಕಾರಿಗಳ ಸಿಟ್ಟಿಗೆ ಬೇಸರಗೊಂಡ ಮಾಧ್ಯಮದವರು ಸಭೆಯಿಂದ
ಹೊರನಡೆದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಈ.ರವಿಕುಮಾರ್‌, ಉಪವಿಭಾಗಾಧಿಕಾರಿ ಅರುಳ್‌ಕುಮಾರ್‌, ತಹಶೀಲ್ದಾರ್ ಮೋಹನಕುಮಾರಿ, ಜಿಲ್ಲಾ ಆರೋಗ್ಯಾಧಿಕಾರಿ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.