ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಬೂದಿಗೆರೆ ಜಾತ್ರೆಗೆ ಜನಸಾಗರ

ಭೂನೀಳಾ ಸಮೇತ ಶ್ರೀದೇಶನಾರಾಯಸ್ವಾಮಿ, ಶ್ರೀರಾಮಚಂದ್ರ ಸ್ವಾಮಿ ರಥೋತ್ಸವ
Last Updated 8 ಮಾರ್ಚ್ 2023, 5:55 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ಬೂದಿಗೆರೆ ಗ್ರಾಮದಲ್ಲಿ ಮಂಗಳವಾರ ಹೋಳಿ ಹುಣ್ಣಿಮೆಯಂದು ಭೂನೀಳಾ ಸಮೇತ ಶ್ರೀದೇಶನಾರಾಯಸ್ವಾಮಿ ಹಾಗೂ ಶ್ರೀರಾಮಚಂದ್ರ ಸ್ವಾಮಿ ಬ್ರಹ್ಮ‌ ರಥೋತ್ಸವ ಅದ್ದೂರಿಯಾಗಿ ನಡೆಯಿತು.

ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ದವನ ಸಮೇತ ಬಾಳೆಹಣ್ಣುಗಳನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಗ್ರಾಮದ ಎಲ್ಲಾ ದೇಗುಲಗಳು ತಳಿರು ತೋರಣ ಸೇರಿದಂತೆ ಹೂವುಗಳಿಂದ ಶೃಂಗಾರಗೊಂಡಿದ್ದವು.

ದೇಗುಲದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣೋತ್ಸವ, ಗರುಡೋತ್ಸವ, ವೈರಮುಡಿ ಉತ್ಸವದಲ್ಲಿ ಸ್ವಾಮಿಯ ದರ್ಶನ ಪಡೆದು ಭಕ್ತರು ಪುನೀತರಾದರು. ರಥೋತ್ಸವದ ಮುಂದೆ ಹನುಮಾನ್ ಕುಣಿತ, ಕೀಲುಕುದುರೆ ನೃತ್ಯ, ವೀರಭದ್ರ ಕುಣಿತ, ನಂದಿಧ್ವಜ, ಪಟ ಕುಣಿತ, ಪಾಳೇಗಾರ, ಮಹಿಳಾ ವೀರಗಾಸೆ, ಎತ್ತುಗಳ‌ ಮೆರವಣಿಗೆಯು ಜಾತ್ರೆಗೆ ಮತ್ತಷ್ಟು ಮೆರುಗು ನೀಡಿತು.

ಇನ್ನೂ ಲಕ್ಕಿ ಬಾಯ್ಸ್ ತಂಡದ ತಮಟೆ ವಾದನಕ್ಕೆ ಗ್ರಾಮದ ಯುವಕರು ಹೆಜ್ಜೆ ಹಾಕಿದರು. ಗೋವಿಂದ ನಾಮ ಸ್ಮರಣೆ ಮಾಡುತ್ತಾ ಸಂಭ್ರಮಾಚರಣೆ ಮಾಡಿದರು. ಪಂಚನಾಮ ಹೊಂದಿರುವ ಈ ದೇಗುಲದಲ್ಲಿ ಪ್ರತಿವರ್ಷ ಹೋಳಿ ಹುಣ್ಣಿಮೆಯಂದು ರಥೋತ್ಸವ ನಡೆಯುವುದು ವಾಡಿಕೆ.

ಬಮೂಲ್‌ನಿಂದ ದಿನಪೂರ್ತಿ ಉಚಿತವಾಗಿ ಮಜ್ಜಿಗೆ, ಐಸ್‌ ಕ್ರೀಮ್‌ಗಳನ್ನು ಭಕ್ತರಿಗೆ ವಿತರಣೆ ಮಾಡಲಾಯಿತು. ಗ್ರಾಮದ ಶಿರಡಿ ಸಾಯಿ ದೇಗುಲದಲ್ಲಿ ಕಾಯಿ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಇಕ್ಕೆಲಗಳಲ್ಲಿ ವಿವಿಧ ಖಾದ್ಯ, ಸಾಮಗ್ರಿಗಳ ಅಂಗಡಿಗಳಲ್ಲಿ ಭಕ್ತರು ವ್ಯಾಪಾರದಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರಿಗೆ ಪ್ರಸಾದ ವಿನಿಯೋಗ, ಪಾನಕ, ಮಜ್ಜಿಗೆ ವಿತರಿಸಲಾಯಿತು.

ಪಲ್ಲಕ್ಕಿ ಉತ್ಸವ: ರಾತ್ರಿ ಶ್ರೀದೇಶನಾರಾಯಣಸ್ವಾಮಿ ಸನ್ನಿಧಿ ಜೊತೆಗೆ ಶ್ರೀಶಿರಡಿಸಾಯಿ ಮಂದಿರ, ಗಣಪತಿ ದೇವಸ್ಥಾನ, ರಾಮಮಂದಿರ, ಚಂದ್ರಮೌಳೇಶ್ವರ, ಆಂಜನೇಯಸ್ವಾಮಿ, ಧರ್ಮರಾಯ ಸ್ವಾಮಿ, ಕಾಲ ಭೈರವೇಶ್ವರ, ಕಾಶಿ ವಿಶ್ವೇಶ್ವರ, ಬಸವೇಶ್ವರ, ಮಲ್ಲೆ ಮಹದೇಶ್ವರ, ದಿನ್ನೆ ಆಂಜನೇಯಸ್ವಾಮಿ, ಮುನೇಶ್ವರಸ್ವಾಮಿ, ಪಟಾಲಮ್ಮ, ಗಂಗಮ್ಮ, ಮುದಗಲಮ್ಮ, ದುಗ್ಗಲಮ್ಮ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT