ಕಾಡಳ್ಳಿಯಲ್ಲಿ ಕಾಡಾನೆ ದಾಳಿ, ಬೆಳೆ ನಾಶ

7
ನಿರಂತರವಾಗಿ ಕಾಡು ಪ್ರಾಣಿಗಳ ದಾಳಿಯಿಂದ ನಲುಗಿರುವ ರೈತರು

ಕಾಡಳ್ಳಿಯಲ್ಲಿ ಕಾಡಾನೆ ದಾಳಿ, ಬೆಳೆ ನಾಶ

Published:
Updated:
Deccan Herald

ಸಾತನೂರು (ಕನಕಪುರ): ತಾಲ್ಲೂಕಿನ ಸಾತನೂರು ಹೋಬಳಿ ಕಾಡಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕಾಡಾನೆ ದಾಳಿ ಮಾಡಿ ಬಾಳೆ ಮತ್ತು ತೆಂಗಿನ ಸಸಿಗಳನ್ನು ನಾಶ ಮಾಡಿದೆ.

ಗ್ರಾಮದ ಕೆಂಚೇಗೌಡ ಅವರ ಪುತ್ರ ಪುಟ್ಟಸ್ವಾಮಿ ಎಂಬುವರಿಗೆ ಸೇರಿದ್ದ ಏಳು ಎಕರೆಯಲ್ಲಿ ಬೆಳೆದಿದ್ದ ಬಾಳೆಗಿಡ ಮತ್ತು ತೆಂಗಿನ ಸಸಿಗಳು ಕಾಡಾನೆ ದಾಳಿಗೆ ಸಿಲುಕಿ ನಾಶವಾಗಿದೆ. ಜಮೀನಿನಲ್ಲಿ ಅಳವಡಿಸಿದ್ದ ಹನಿ ನೀರಾವರಿ ಪೈಪ್‌ಗಳನ್ನು ಕಿತ್ತು ಹಾಳು ಮಾಡಿವೆ.

‘ಕಷ್ಟಪಟ್ಟು ಬೇಸಾಯ ಮಾಡಿದ್ದು, ಲಕ್ಷಾಂತರ ರೂಪಾಯಿಯನ್ನು ಕೃಷಿಗೆ ವ್ಯಯ ಮಾಡಲಾಗಿದೆ. ಆದರೆ, ರಾತ್ರೋ ರಾತ್ರಿ ನಾಶವಾದರೆ ಏನೂ ಮಾಡಲು ಸಾಧ್ಯವಿಲ್ಲ. ಈ ಕಾರಣದಿಂದಲೇ ರೈತರು ಕೃಷಿ ಕೈ ಬಿಟ್ಟಿದ್ದಾರೆ. ಇರುವ ಅಲ್ಪಸ್ವಲ್ಪ ಭೂಮಿ ಬೆಂಗಳೂರು ಹಾಗೂ ಹೊರಗಿನ ಉದ್ಯಮಿಗಳಿಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ’ ಎಂದು ನೊಂದು ನುಡಿದರು.

ಪ್ರಗತಿಪರ ರೈತ ಹೊಸದೊಡ್ಡಿ ಕುರಿ ತಮ್ಮಯ್ಯ ಮಾತನಾಡಿ, ‘ಉತ್ತಮ ನೀರಾವರಿ ಸೌಕರ್ಯವಿದ್ದರೂ ಕೃಷಿ ಮಾಡದೆ ಪಾಳು ಬಿಟ್ಟಿದ್ದ ರೈತ ಪುಟ್ಟಸ್ವಾಮಿ ಅವರನ್ನು ಕೃಷಿ ಮಾಡುವಂತೆ ಉತ್ತೇಜಿಸಿದ್ದೆ. ಆ ಕಾರಣದಿಂದ ₹8 ಲಕ್ಷ ಖರ್ಚು ಮಾಡಿ ಬೇಸಾಯ ಮಾಡಿದ್ದರು. ಈಗ ಕಾಡಾನೆ ದಾಳಿಯಿಂದ ಮಾಡಿದ್ದ ಬೆಳೆಯಲ್ಲಾ ನಾಶವಾಗಿದೆ. ಈ ರೀತಿಯಾದರೆ ರೈತನ ಗತಿ ಏನು’ ಎಂದು ಆತಂಕ ವ್ಯಕ್ತಪಡಿಸಿದರು.

‘ಕಾಡಿನ ಒಳಗೆ ರೈತರಿಗೆ ಪ್ರವೇಶ ಇಲ್ಲ. ದನ ಕರುಗಳನ್ನು ಕಾಡಿಗೆ ಬಿಡುವುದಿಲ್ಲ ಎಂದು ಹೇಳಿ ಅರಣ್ಯ ಇಲಾಖೆ ಅಧಿಕಾರಿಗಳು ತಡೆಯುತ್ತಾರೆ. ಆದರೆ, ಕಾಡು ಪ್ರಾಣಿಗಳಾದ ಆನೆ, ಕಾಡಂದಿಗಳು ದಾಳಿ ಮಾಡಿ ರೈತರ ಫಸಲು ನಾಶ ಮಾಡುತ್ತಿವೆ. ಇದಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

‌ನಷ್ಟಕ್ಕೆ ಪರಿಹಾರ ಭರವಸೆ:  ವನ್ಯಜೀವಿ ವಲಯ ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್‌ ಮಾತನಾಡಿ, ಕಾಡು ಪ್ರಾಣಿಗಳು, ಆನೆಗಳು ರೈತರ ಜಮೀನಿಗೆ ಹೋಗದಂತೆ ತಡೆಗಟ್ಟುವ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ. ಈಗಾಗಲೇ ಅರಣ್ಯದ ಅಂಚಿನಲ್ಲಿ ಆನೆ ಕಂದಕ ನಿರ್ಮಾಣ ಮಾಡಿ ಸೋಲಾರ್‌ ತಂತಿ ಬೇಲಿ ನಿರ್ಮಿಸುವ ಕೆಲಸ ನಡೆದಿದೆ. ಆನೆ ದಾಳಿಯಿಂದ ಆಗಿರುವ ನಷ್ಟ ಪರಿಶೀಲಿಸಿ ಸರ್ಕಾರಕ್ಕೆ ವರದಿ ಕಳುಹಿಸಿ, ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !