ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ ಸೇವೆಗೆ ಜೀವನ ಮೀಸಲಿಡಿ’

Last Updated 17 ಜೂನ್ 2021, 5:36 IST
ಅಕ್ಷರ ಗಾತ್ರ

ವಿಜಯಪುರ:‘ಸಮಾಜದಲ್ಲಿ ಹುಟ್ಟಿ ಬೆಳೆದಿರುವ ನಾವು ಸಮಾಜದಿಂದ ಹೇಗೆ ಬೆಳೆದಿದ್ದೇವೆ ಎನ್ನುವುದಕ್ಕಿಂತ ಸಮಾಜಕ್ಕಾಗಿ ಏನು ಕೊಡುಗೆ ಕೊಟ್ಟಿದ್ದೇವೆ ಎನ್ನುವುದು ಬಹುಮುಖ್ಯವಾಗುತ್ತದೆ’ ಎಂದು ಚಲನಚಿತ್ರ ನಿರ್ದೇಶಕ ಆರ್. ಚಂದ್ರು ಹೇಳಿದರು.

ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್. ಕೇಶವ ಅವರು ತಮ್ಮ ತಾಯಿ ಸಾವಿತ್ರಮ್ಮ, ತಂದೆ ಪಿ. ರಾಮಚಂದ್ರಪ್ಪ ಅವರ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 501 ಕುಟುಂಬಗಳಿಗೆ ಉಚಿತ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಾನ ಕೊಡುವ ಕೈಗಳು ಎಂದಿಗೂ ಬರಿದಾಗುವುದಿಲ್ಲ. ಕೊಡುವಂತಹ ದಾನವನ್ನು ಎಂದಿಗೂ ಹೆಚ್ಚಿಸಿಕೊಳ್ಳಬಾರದು. ಆದರೆ, ಕೊಡುವ ದಾನ ಇನ್ನೊಬ್ಬರಿಗೆ ಸ್ಫೂರ್ತಿಯಾಗಬೇಕು. ಸಮಾಜದಲ್ಲಿ ನಾವು ಗಳಿಸಿದ್ದೆಲ್ಲವೂ ನಮಗೆ ಸಿಗಬೇಕು ಎಂದುಕೊಂಡರೆ ಸ್ವಾರ್ಥವಾಗುತ್ತದೆ. ಸ್ವಾರ್ಥಕ್ಕಾಗಿ ಇಟ್ಟುಕೊಂಡಿದ್ದು ಎಂದಿಗೂ ಉಳಿಯುವುದಿಲ್ಲ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್. ಕೇಶವ ಮಾತನಾಡಿ, ಒಳ್ಳೆಯ ಸಂಸ್ಕಾರವೆನ್ನುವುದು ತಂದೆ, ತಾಯಿಯಿಂದ ಬರುತ್ತದೆ. ಬಡವರ ಕಷ್ಟ ಅರಿತುಕೊಂಡು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಸಂತ್ ಕುಮಾರ್ ಮಾತನಾಡಿ, ‘ನಾವು ಹುಟ್ಟುವಾಗ ಏನೂ ತೆಗೆದುಕೊಂಡು ಬಂದಿಲ್ಲ. ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ನಡುವೆ ಬಂದಿದ್ದೆಲ್ಲವನ್ನೂ ನಮಗೆ ಅಗತ್ಯವಿರುವಷ್ಟು ಬಳಕೆ ಮಾಡಿಕೊಂಡು ಉಳಿದದ್ದು ಸಮಾಜಕ್ಕಾಗಿ ವಿನಿಯೋಗ ಮಾಡುವುದರಿಂದ ಸಂತೃಪ್ತಿ ದೊರೆಯುತ್ತದೆ. ಇದರಿಂದ ಜೀವನ ಸನ್ಮಾರ್ಗದಲ್ಲಿ ಸಾಗಲಿಕ್ಕೆ ಅವಕಾಶವಾಗುತ್ತದೆ’ ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಬಸಪ್ಪ, ಚಲನಚಿತ್ರ ನಿರ್ಮಾಪಕ ಕೆ. ಮಂಜು, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ. ಮಂಜುನಾಥ್, ಮಂಡಿಬೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ವೀರಭದ್ರಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಾಜು, ರೈತ ಮುಖಂಡ ಮುರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT