ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಬೀಜ, ಗೊಬ್ಬರ ಸಕಾಲಕ್ಕೆ ತಲುಪಿಸಿ

ಕೆಡಿಪಿ ಪ್ರಗತಿ ಪರಿಶೀಲನ ಸಭೆಯಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ
Last Updated 7 ಜೂನ್ 2019, 13:44 IST
ಅಕ್ಷರ ಗಾತ್ರ

ದೇವನಹಳ್ಳಿ: ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ಸಕಾಲದಲ್ಲಿ ಬಿತ್ತನೆಬೀಜ ಮತ್ತು ರಸ ಗೊಬ್ಬರದ ಕೊರತೆ ಉಂಟಾಗದಂತೆ ರೈತರಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೆಡಿಪಿ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು, ಉತ್ತಮ ಮಳೆ ಸುರಿದಿದ್ದು ಬಿತ್ತನೆ ಕಾರ್ಯ ಗ್ರಾಮೀಣ ಪ್ರದೇಶದಲ್ಲಿ ಆರಂಭವಾಗಿದೆ. ರೈತರಿಗೆ ಹೆಚ್ಚಿನ ಮಾಹಿತಿ ಕೃಷಿ ಇಲಾಖೆ ನೀಡಬೇಕು. ತಾಲ್ಲೂಕಿನಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಕ್ರಿಯಾಶೀಲ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಬೇಕು. ವಿವಿಧ ಇಲಾಖೆಗಳಿಂದ ಬರುವ ಸಲಕರಣೆ ಮತ್ತು ಫಲಾನುಭವಿಗಳ ಆಯ್ಕೆ ಮಾಡುವಾಗ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ರೈತರಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ 12 ಸಾವಿರ ಅರ್ಜಿಗಳು ಬಂದಿದ್ದು ಅದರಲ್ಲಿ ಕೇವಲ 500 ಜನರಿಗೆ ನೀಡಿದರೆ ಇನ್ನುಳಿದವರಿಗೆ ಯಾವ ರೀತಿ ಹಣ ನೀಡಲಾಗುವುದು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ವಿವಿಧ ಇಲಾಖೆ ಕಾರ್ಯಕ್ರಮ ಪ್ರತಿ ಜನರಿಗೆ ತಲುಪಬೇಕಾದರೆ ಕರಪತ್ರ ವಿತರಿಸುವ ಮೂಲಕ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತೆ ಮಾಡಬೇಕು. ಪ್ರತಿ ತಿಂಗಳು 30ರೊಳಗಾಗಿ ಆಯಾ ತಿಂಗಳು ಇಲಾಖೆ ಪ್ರಗತಿಗೆ ಸಂಬಂಧಿಸಿದಂತೆ ಪಟ್ಟಿ ನೀಡಬೇಕು. ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಇದರ ಬಗ್ಗೆ ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಈಚೆಗೆ ಸುರಿದ ಮಳೆಯಿಂದ ಹಾನಿ ಆಗಿರುವ ತೋಟಗಳ ಬೆಳೆ ಹಾನಿ ಬಗ್ಗೆ ಮಾಹಿತಿ ನೀಡಿಬೇಕು. ಶೀಘ್ರದಲ್ಲಿಯೇ ಪರಿಹಾರ ನೀಡಲು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ನಾಗವಾರ ಮತ್ತು ಹೆಬ್ಬಾಳ ಕೆರೆಯಿಂದ ತ್ಯಾಜ್ಯ ನೀರು ಶುದ್ಧೀಕರಿಸಿ ಇನ್ನೆರಡು ಮೂರು ತಿಂಗಳುಗಳಲ್ಲಿ ಈ ಭಾಗದ ಕೆರೆಗಳಿಗೆ ನೀರು ಬರಲಿದೆ. ಕೆರೆ ಹೂಳೆತ್ತುವ ಕಾರ್ಯ ಆರಂಭಗೊಂಡಿದೆ. ಈ ನೀರಿನಿಂದ ಅಂರ್ತಜಲ ಮಟ್ಟ ಹೆಚ್ಚಲಿದೆ. ರೈತರ ಬೆಳೆಗಳಿಗೆ ವಿಮೆ ಮಾಡಿಸಬೇಕು. ಮಲ್ಲೇನಹಳ್ಳಿ ಹತ್ತಿರವಿರುವ ರೇಷ್ಮೆ ಇಲಾಖೆ ಜಾಗ ಸರ್ವೇ ಮಾಡಿಸಿ ತಡೆಗೋಡೆ ನಿರ್ಮಾಣ ಮಾಡಬೇಕು. ಈಗ ಇರುವ ದೇವನಹಳ್ಳಿ ನಗರದ ರೇಷ್ಮೆ ಇಲಾಖೆ ಜಾಗ ಮೂರು ಎಕರೆ ಪ್ರದೇಶವಾಗಿದ್ದು ಆಧುನಿಕ ಬಸ್‌ ನಿಲ್ದಾಣ ಮಾಡಲು ಆ ಜಾಗ ಹಸ್ತಾಂತರ ಮಾಡುವ ಪ್ರಕ್ರಿಯೆಗೆ ಚಿಂತನೆ ಇದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ ಮಾತನಾಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ, ಕೆಡಿಪಿ ಸಭೆ, ಶಾಸಕರ ಕೆಡಿಪಿ ಸಭೆಗಳಿಗೂ ಹಾಜರಾಗುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಬರಗಾಲ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಆದರೆ,ಎಷ್ಟು ಅನುದಾನ ಬಂದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮುರುಡಯ್ಯ, ತಾಲೂಕು ಶಿರಸ್ತೇದಾರ್ ಬಾಲಕೃಷ್ಣ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT