ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಮೀಸಲಾತಿ ನೀಡಿದರೆ ಸಮಾನತೆ

Last Updated 18 ಸೆಪ್ಟೆಂಬರ್ 2020, 14:04 IST
ಅಕ್ಷರ ಗಾತ್ರ

ದೇವನಹಳ್ಳಿ: ‘ರಾಜ್ಯದಲ್ಲಿ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡಿದರೆ ಮಾತ್ರ ಸಾಮಾಜಿಕ ಸಮಾನತೆ ಸಿಗಲು ಸಾಧ್ಯ’ ಎಂದು ಆದಿ ಜಾಂಬವ ಸೇವಾ ಸಂಸ್ಥೆ ಅಧ್ಯಕ್ಷ ಎಂ.ಎಂ ಶ್ರೀನಿವಾಸ್ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಒಳ ಮೀಸಲಾತಿ ಕೂಗು ರಾಜ್ಯದಲ್ಲಿ ಈಗಾಗಲೇ ಸಂಚಲನ ಮೂಡಿಸುತ್ತಿದೆ. ಶತಮಾನಗಳಿಂದ ಶೋಷಿತರಾಗಿರುವ ಮಾದಿಗ ಸಮುದಾಯ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ 101 ಜಾತಿ ಸೇರಿಕೊಂಡು ಬಹುಸಂಖ್ಯಾತರಾಗಿರುವ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ’ ಎಂದು ದೂರಿದರು.

‘ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠ ಒಳ ಮೀಸಲಾತಿ ನೀಡುವುದು ಅರ್ಹವಾದರೂ ಆಯಾ ರಾಜ್ಯಗಳು ತೀರ್ಮಾನ ತೆಗೆದುಕೊಳ್ಳಬಹುದು ಎಂದು ಹೇಳಿದೆ. ಹಲವು ವರ್ಷಗಳಿಂದ ಹೋರಾಟ ನಡೆಸಿ ಒಳ ಮೀಸಲಾತಿಗೆ ಒತ್ತಾಯಿಸುತ್ತಿರುವ ಮಾದಿಗ ಸಮುದಾಯಕ್ಕೆ ಆಶಾ ಭಾವನೆ ಮೂಡಿದೆ. ರಾಜ್ಯ ಸರ್ಕಾರ ನ್ಯಾ.ಎ.ಜೆ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲೇಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ದಲಿತ ಜನಸೇನೆ ರಾಜ್ಯ ಘಟಕ ಅಧ್ಯಕ್ಷ ಭರತ್ ಮಾತನಾಡಿ, ‘ಕಳೆದ 18 ವರ್ಷಗಳಿಂದ ಒಳ ಮಿಸಲಾತಿಗಾಗಿ ಹೋರಾಟ ನಡೆಸುತ್ತಿದ್ದೇವೆ. ನಮ್ಮನ್ನಾಳಿದ ಆಡಳಿತ ಪಕ್ಷಗಳು ನಿರ್ಲಕ್ಷ್ಯವಹಿಸುತ್ತಲೇ ಇವೆ. ಮಾದಿಗ ಸಮುದಾಯದ ಆನೇಕ ಮುಖಂಡರು ಹೋರಾಟ ನಡೆಸಿದ ಪರಿಣಾಮ ನ್ಯಾ.ಎ.ಜೆ. ಸದಾಶಿವ ಆಯೋಗ ರಚನೆ ಮಾಡಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದರೂ ಸರ್ಕಾರ ಈವರೆಗೆ ಗಮನ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ದಲಿತ ಸಂಘರ್ಷ ಸಮಿತ ಜಿಲ್ಲಾ ಸಂಚಾಲಕ ಅಂಬರೀಷ್ ಮಾತನಾಡಿ, ‘ಒಳಮೀಸಲಾತಿಗಾಗಿ ಹೋರಾಟ, ವಿಧಾನಸೌಧ ಮುತ್ತಿಗೆ ಹಾಕಿ ಒತ್ತಾಯ ಮಾಡಿದ್ದರು. ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಸರ್ಕಾರ ಒಳಮೀಸಲಾತಿ ವರದಿಯನ್ನು ಸೆ.20ರಂದು ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡನೆ ಮಾಡಬೇಕು’ ಎಂದು ಒತ್ತಾಯಿಸಿದರು.

ಮಾದಿಗ ದಂಡೋರ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ‘1997ರಿಂದ ರಾಜ್ಯದಲ್ಲಿ ಒಳಮೀಸಲಾತಿಗಾಗಿ ಚಳವಳಿ ಆರಂಭಗೊಂಡಿದೆ. ಒಳ ಮೀಸಲಾತಿ ವರದಿಯನ್ನು 2012ರಲ್ಲಿ ಸರ್ಕಾರಕ್ಕೆ ಕಳುಹಿಸಿದ್ದರೂ ಕಡತ ಧೂಳು ತಿನ್ನುತ್ತಿದೆ. ನಮಗೆ ಇನ್ನೊಬ್ಬರ ಮೀಸಲಾತಿ ಬೇಕಿಲ್ಲ’ ಎಂದು ಆಗ್ರಹಿಸಿದರು. ಪುರಸಭೆ ಸದಸ್ಯ ಬಾಲರಾಜ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT