ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾ | ಡಿ.ಸಿ ಕಚೇರಿ ಸಮೀಪ ಅಕ್ರಮ ಗಣಿ ಸದ್ದು

ಗಣಿ ಧೂಳಿನಿಂದ ಗ್ರಾಮಗಳಲ್ಲಿ ಅನಾರೋಗ್ಯಕರ ಪರಿಸರ
ಸಂದೀಪ್
Published 6 ಮೇ 2024, 4:29 IST
Last Updated 6 ಮೇ 2024, 4:29 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಹೋಬಳಿಯಲ್ಲಿ ಎಗ್ಗಿಲ್ಲದೇ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಕೃಷಿ ಭೂಮಿಯಲ್ಲಿ ಅನಧಿಕೃತವಾಗಿ ಗ್ರಾನೈಟ್‌ ಫ್ಯಾಕ್ಟರಿಗಳು ದಿನಕ್ಕೊಂದಂತೆ ತಲೆ ಎತ್ತುತ್ತಿವೆ ಎಂಬ ಆರೋಪ ಕೇಳಿ ಬಂದಿವೆ.

ಜಿಲ್ಲಾಡಳಿತ ಭವನದಿಂದ 7-8 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಯೂ ನಿಯಮ ಬಾಹಿರವಾಗಿ ನಡೆಯತ್ತಿದ್ದರೂ, ರಾಜಕೀಯ ಪ್ರಭಾವದಿಂದ ಜಿಲ್ಲಾಡಳಿತ, ಗಣಿ ಮತ್ತು ಪರಿಸರ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಮೌನಕ್ಕೆ ಜಾರಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಗಣಿಗಾರಿಕೆಯಿಂದ ಈ ಭಾಗದಲ್ಲಿ ರೇಷ್ಮೆ ಬೆಳೆ ಹಾಳಾಗಿದೆ. ಗಣಿ ಧೂಳು ಹಿಪ್ಪು ನೆರಳೆ ಸೊಪ್ಪಿನ ಮೇಲೆ ಕೂರುತ್ತಿರುವುದರಿಂದ ರೇಷ್ಮೆ ಕೃಷಿಗೆ ಪೆಟ್ಟಿ ಬಿದಿದ್ದೆ ಎಂದು ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ವಿಚಾರವೂ ಸದನದಲ್ಲಿಯೂ ಪ್ರತಿಧ್ವನಿಸಿದ್ದು, ಸರ್ಕಾರಗಳು ಬದಲಾದಂತೆ ಅಕ್ರಮ ಗಣಿಗಾರಿಕೆ ವಿಚಾರ ತೆರೆಮರೆಗೆ ಸರಿಯುತ್ತಿದೆ. ಗಣಿದಣಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಡಳಿತ ವರ್ಗ ಹಿಂಜರಿಯುತ್ತಿದೆ.

ಕೊಯಿರ, ಚಿಕ್ಕಗೊಲ್ಲಹಳ್ಳಿ, ಬ್ಯಾಡರಹಳ್ಳಿ, ಮಾಯಸಂದ್ರ, ಮೀಸಗಾನಹಳ್ಳಿ, ತೈಲಗೆರೆ, ಮುದ್ದನಾಯಕನಹಳ್ಳಿಯ ನಿವಾಸಿಗಳು ಗಣಿ ಧೂಳಿನಿಂದ ನಿತ್ಯ ನರಕ ಅನುಭವಿಸುತ್ತಿದ್ದಾರೆ. ಅಸ್ತಮಾ, ಶ್ವಾಸಕೋಸ ಸಮಸ್ಯೆ ಇರುವ ರೋಗಿಗಳು ಹಾಗೂ ಹಿರಿಯ ನಾಗರಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಶ್ರೀನಿವಾಸ್ ಅವರು ರಾತ್ರಿ ವೇಳೆಯಲ್ಲಿ ಗಣಿಗಳಿಂದ ಕಲ್ಲು ದಿಮ್ಮಿ ಸಾಗಟ ಮಾಡದಂತೆ ಆದೇಶ ಮಾಡಿದ್ದರೂ, ಅದ್ಯಾವೂದಕ್ಕೂ ಸೊಪ್ಪು ಹಾಕದ ಉದ್ಯಮಿಗಳು ಅಪಾಯಕಾರಿ ರೀತಿಯಲ್ಲಿ ಲಾರಿಗಳ ಹೊರ ಭಾಗಕ್ಕೆ ಚಾಚುವಂತೆ ಕಲ್ಲು ದಿಮ್ಮಿಗಳನ್ನು ಇಟ್ಟು ರಾತ್ರೋ ರಾತ್ರಿ ಸಾಗಟ ಮಾಡುತ್ತಲೇ ಇದ್ದಾರೆ.

ರಸ್ತೆ, ರಾಜಕಾಲುವೆ ಲೆಕ್ಕಿಸದೇ ಅವುಗಳ ಸ್ವರೂಪಕ್ಕೆ ದಕ್ಕೆ ಬರುವ ರೀತಿಯಲ್ಲಿ ಅರ್ಕಾವತಿ ನದಿ ಪಾತ್ರ ಪ್ರದೇಶದಲ್ಲಿ ನಿತ್ಯ ನೂರಾರು ದಿಮ್ಮಿಗಳು ತೋಡಿ ಹೊರ ಹಾಕಲಾಗುತ್ತಿದೆ.

ಕೋರ್ಟ್‌ ಆದೇಶಕ್ಕೂ ಕಿಮ್ಮತ್ತಿಲ್ಲ: ವಿಮಾನ ನಿಲ್ದಾಣದ 25 ಕಿ.ಮೀ ವ್ಯಾಪ್ತಿಯಲ್ಲಿ ಹೆಚ್ಚು ಹಸಿರು ಬೆಳೆಸಿ ಪರಿಸರ ಸಂರಕ್ಷಣೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ವಿವಿಧ ನ್ಯಾಯಾಲಯಗಳು ಆದೇಶ ನೀಡಿದ್ದರೂ ಪ್ರಯೋಜನೆ ಆಗಿಲ್ಲ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 10 ಕಿ.ಮೀ ವ್ಯಾಪ್ತಿಯಲ್ಲಿರುವ ಅರ್ಕಾವತಿ ನದಿ ಪಾತ್ರ ಪ್ರದೇಶದಲ್ಲಿ ಇಂದಿಗೂ ಗಣಿಗಾರಿಕೆ ನಡೆಯುತ್ತಿದೆ.

ಕರ್ನಾಟಕ ಗೃಹ ಮಂಡಳಿ ಹಾಗೂ ಪೂರ್ಣ ಪ್ರಜ್ಞಾ ವಿಜ್ಞಾನ ಸಂಶೋಧನಾ ಕೇಂದ್ರದಿಂದ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಎಲ್ಲ ಪ್ರಮುಖರು ಪತ್ರ ಬರೆದರೂ ಪ್ರಯೋಜನವಾಗಿಲ್ಲ.

ಕೃಷಿ ಭೂಮಿಯಲ್ಲಿ ಗ್ರಾನೈಟ್‌ ಕಾರ್ಖಾನೆ ಗ್ರಾನೈಟ್‌ ಕಾರ್ಖಾನೆ ಆರಂಭಿಸಬೇಕಾದರೆ ಗಣಿ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕು. ಅಲ್ಲದೆ ಕಾರ್ಖಾನೆ ನಡೆಸಲು ಉದ್ದೇಶಿಸಿರುವ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಎಂಬ ಖರೀದಸಬೇಕು ಅಥವಾ ಭೋಗ್ಯಕ್ಕೆ ಪಡೆಯಬೇಕು. ಆದರೆ ಇಲ್ಲಿ ಈ ನಿಯಮಗಳನ್ನು ಗಾಳಿ ತೂರಿ ಕೃಷಿಭೂಮಿಯನ್ನು ಖರೀದಿಸಿ ಅಲ್ಲಿ ಅನಧಿಕೃತವಾಗಿ ಗ್ರಾನೈಟ್‌ ಕಾರ್ಖಾನೆ ನಡೆಸಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಕೃಷಿ ಭೂಮಿಗಳಿಗೆ ತೊಂದರೆ ಆಗುತ್ತಿದೆ ಎನ್ನುತ್ತಾರೆ ರೈತರು. ಕೃಷಿ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ವಿದ್ಯುತ್‌ ಸಂಪರ್ಕ ನೀಡಲಾಗುತ್ತಿದೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರ ಯೋಗಕ್ಷೇಮವನ್ನೂ ಕಾರ್ಮಿಕ ಇಲಾಖೆ ನೋಡುತ್ತಿಲ್ಲ. ಇನ್ನೂ ಕೆಲ ಗ್ರಾಮ ಪಂಚಾಯಿತಿಗಳು ಇವರಿಂದ ತೆರಿಗೆ ಸಂಗ್ರಹಿಸುತ್ತಿವೆ. ಕೃಷಿ ಭೂಮಿಯಲ್ಲಿ ವ್ಯಾಪಾರ ಮಾಡುತ್ತಿರುವವ ವಿರುದ್ಧ ಕ್ರಮಕ್ಕೆ ಕಂದಾಯ ಇಲಾಖೆಯೂ ಹಿಂದೆಟ್ಟು ಹಾಕುತ್ತಿದೆ. ಗ್ರಾಮಗಳಲ್ಲಿ ಕಳ್ಳ ಸಾಗಣೆ ಹೆದ್ದಾರಿಯಲ್ಲಿ ಸಂಚರಿಸಿದರೆ ಸಿಕ್ಕಿ ಬೀಳಬೇಕಾಗುತ್ತದೆ ಎಂಬ ಕಾರಣಕ್ಕೆ ಕಲ್ಲು ದಿಮ್ಮಿ ಸಾಗಿಸುವ ಲಾರಿಗಳು ಗ್ರಾಮಗಳ ಸಣ್ಣ ರಸ್ತೆಗಳ ಮೂಲಕ ಕಳ್ಳ ಸಾಗಣೆ ಮಾಡಲಾಗುತ್ತಿದೆ. ಅದು ರಾತ್ರಿ ವೇಳೆ ಕಲ್ಲು ದಿಮ್ಮಿ ಹೊತ್ತ ಲಾರಿಗಳು ನಿರಂತರವಾಗಿ ಸಂಚರಿಸುತ್ತಿವೆ. ಓಡಾಟಕ್ಕೆ ಇರುವ ರಸ್ತೆಗಳು ಗಣಿ ಲಾರಿಗಳ ಸಂಚಾರದಿಂದ ಒಂದೆರೆಡು ವರ್ಷದಲ್ಲಿಯೇ ಹಾಳಾಗುತ್ತಿದೆ. ಇಂತಹ ಲಾರಿಗಳಿಂದ ಹಲವು ಬಾರಿ ಅಪಘಾತಗಳು ಸಂಭವಿಸಿವೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT