ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ತಾಲ್ಲೂಕಿನ ದೊಡ್ಡಸಣ್ಣೆ ಗ್ರಾಮ ಪಂಚಾಯತಿ ಸದಸ್ಯೆ ಮನೆಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ಅವರ ಇಬ್ಬರು ಪುತ್ರಿಯರಿಗೆ ಬಲವಂತವಾಗಿ ಕ್ರಿಮಿನಾಶಕ ಕುಡಿಸಿ ಪರಾರಿಯಾಗಿದೆ.
ದೊಡ್ಡಸಣ್ಣೆ ಗ್ರಾಮ ಪಂಚಾಯತಿ ಸದಸ್ಯೆ ಶಿಲ್ಪಾ ಅಶೋಕ್ ಮನೆಗೆ ಮಂಗಳವಾರ (ಆಗಸ್ಟ್ 1) ನುಗ್ಗಿದ್ದ ಅಪರಿಚಿತ ಗುಂಪು ಮನೆಯಲ್ಲಿದ್ದ 12 ವರ್ಷದ ಮಗಳಿಗೆ ಬಲವಂತವಾಗಿ ಕ್ರಿಮಿನಾಶಕ ಕುಡಿಸಿ ಪರಾರಿಯಾಗಿತ್ತು. ಗುರುವಾರ ಬೆಳಗಿನ ಜಾವ ಮತ್ತೆ ಮನೆಗೆ ನುಗ್ಗಿದ ಗುಂಪು ಶಿಲ್ಪಾ ಅವರ 15 ವರ್ಷದ ಮತ್ತೊಬ್ಬ ಮಗಳ ಬಾಯಿಗೆ ಕ್ರಿಮಿನಾಶಕ ಸುರಿದು ಪರಾರಿಯಾಗಿದೆ.
ಅಸ್ವಸ್ಥರಾಗಿರುವ ಅಕ್ಕ, ತಂಗಿಯನ್ನು ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆ ಪೈಕಿ ತಂಗಿ ಭಾಗಶಃ ಚೇತರಿಸಿಕೊಂಡಿದ್ದು, ಅಕ್ಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಹಿನ್ನೆಲೆ:
ರಾಜ್ಯದ ಶ್ರೀಮಂತ ಪಂಚಾಯಿತಿಗಳ ಪೈಕಿ ಒಂದಾದ ಅಣ್ಣೇಶ್ವರ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜುಲೈ 31ಕ್ಕೆ ಚುನಾವಣೆ ನಡೆದಿತ್ತು. ಅದರ ಮರುದಿನವೇ ಗ್ರಾಮ ಪಂಚಾಯತಿ ಸದಸ್ಯೆ ಶಿಲ್ಪಾ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಎರಡನೇ ಮಗಳಿಗೆ ಕ್ರಿಮಿನಾಶಕ ಕುಡಿಸಿದೆ.
ಪೊಲೀಸರಿಗೆ ದೂರು ನೀಡಿದ ಪೋಷಕರು ಮಗಳನ್ನು ದೇವನಹಳ್ಳಿಯ ಆಸ್ಪತ್ರೆಗೆ ದಾಖಲಿಸಿದ್ದರು. ಪೋಷಕರು ಮಗಳ ಜೊತೆ ಆಸ್ಪತ್ರೆಯಲ್ಲಿರುವ ಕಾರಣ ಹಿರಿಯ ಮಗಳು ಮನೆಯ ಪಕ್ಕದ ಸಂಬಂಧಿಕರ ಮನೆಯಲ್ಲಿದ್ದಳು.
ಗುರುವಾರ ಬೆಳಗಿನ ಜಾವ ಸಂಬಂಧಿಕರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಬಾಲಕಿಯ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ ಬಲವಂತವಾಗಿ ಕ್ರಿಮಿನಾಶಕ ಕುಡಿಸಿದ್ದಾರೆ. ಬಾಲಕಿ ಪ್ರತಿರೋಧ ಒಡ್ಡಿದಾಗ ಕೆನ್ನೆಗೆ ಹೊಡೆದಿದ್ದಾರೆ.
‘ಪೊಲೀಸರಿಗೆ ನೀಡಿರುವ ದೂರು ಹಿಂದಕ್ಕೆ ಪಡೆಯುವಂತೆ ನಿನ್ನ ಅಪ್ಪ, ಅಮ್ಮನಿಗೆ ಹೇಳು. ಒಂದು ವೇಳೆ ದೂರು ವಾಪಸ್ ಪಡೆಯದಿದ್ದರೆ ಕುಟುಂಬದ ಎಲ್ಲರನ್ನೂ ಕೊಲೆ ಮಾಡುತ್ತೇವೆ ಎಂದು ಬಾಲಕಿಗೆ ಬೆದರಿಕೆ ಒಡ್ಡಿ ತೆರಳಿದ್ದಾರೆ’ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಈ ಘಟನೆಗೆ ರಾಜಕೀಯ ವೈಷಮ್ಯವೇ ಕಾರಣವಿರಬಹುದು ಎಂದು ಗ್ರಾಮಸ್ಥರು ಮತ್ತು ಸಂಬಂಧಿಕರು ಶಂಕಿಸಿದ್ದಾರೆ. ಪೋಷಕರು ಆಸ್ಪತ್ರೆಯಲ್ಲಿರುವ ಕಾರಣ ಪ್ರತಿಕ್ರಿಯಿಗೆ ಲಭ್ಯವಾಗಿಲ್ಲ. ಪ್ರತಿಕ್ರಿಯಿಸಲು ಪೊಲೀಸರು ನಿರಾಕರಿಸಿದ್ದಾರೆ.
‘ದುಷ್ಕರ್ಮಿಗಳ ತಂಡದಲ್ಲಿದ್ದ ಎಲ್ಲರೂ ಅಪರಿಚಿತರಾಗಿದ್ದು, ಅವರು ನಮ್ಮ ಗ್ರಾಮದವರಲ್ಲ. ಅವರ ಬಗ್ಗೆ ಮಾಹಿತಿ ಇಲ್ಲ’ ಎಂದು ಗ್ರಾಮಸ್ಥರು ಹೇಳಿದ್ದಾರೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.