ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಬದುಕಿಗೆ ನೆರವಾಗಲಿ: ಶಾಸಕ ನಿಸರ್ಗ ನಾರಾಯಣಸ್ವಾಮಿ

Last Updated 24 ಜೂನ್ 2021, 3:38 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಯಾವ ಕೋರ್ಸ್‌ ಕೆಟ್ಟದ್ದಲ್ಲ. ಹಾಗಂತ ಇಂಥಹದ್ದೇ ಕೋರ್ಸ್ ಅತ್ಯುತ್ತಮ ಅಂತಾನೂ ಇಲ್ಲ. ವಿದ್ಯಾರ್ಥಿಯ ಆಸಕ್ತಿ ರ‍್ಯಾಂಕ್ ಪಡೆಯುವುದು ಅಥವಾ ಹೆಚ್ಚು ಅಂಕ ಪಡೆಯುವುದಲ್ಲ. ಕಲಿತಿರುವ ವಿದ್ಯೆಯನ್ನು ಜೀವನಕ್ಕೆ ಬಳಕೆ ಮಾಡಿಕೊಳ್ಳುವುದು ಗೊತ್ತಿರಬೇಕು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಕಿವಿಮಾತು ಹೇಳಿದರು.

ಪಟ್ಟಣದ ಪ್ರಥಮದರ್ಜೆ ಕಾಲೇಜಿನಲ್ಲಿ ಸರ್ಕಾರದ ಟ್ಯಾಬ್ಲೆಟ್ ಯೋಜನೆಯಡಿ 14 ಮಂದಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ ಅವರು ಮಾತನಾಡಿದರು.

ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲಿ ಡಿಜಿಟಲ್ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಹೋಗಬೇಕಾಗಿದೆ. ಉತ್ತಮ ಶಿಕ್ಷಣದ ಜೊತೆಗೆ ಆರ್ಥಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುವ ಕಡೆಗೂ ಯುವಜನರು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಯಾವುದೇ ವಿಷಯದಲ್ಲಿ ಆಸಕ್ತಿ ಇರಲಿ, ಮುಂದೆ ಅದನ್ನೇ ನಿಮ್ಮ ವೃತ್ತಿಯನ್ನಾಗಿ ಮಾಡಿಕೊಳ್ಳುವ ಅವಕಾಶ ಈಗ ಹೇರಳವಾಗಿದೆ. ಹೀಗಾಗಿ, ಉನ್ನತ ಶಿಕ್ಷಣ ಮೊದಲಿಗಿಂತ ಹೆಚ್ಚು ಹತ್ತಿರವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಉತ್ತಮ ಫಲಿತಾಂಶ ಪಡೆದುಕೊಂಡವರಿಗೆ ಈಗ ನಮ್ಮ ದೇಶದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಕೆಲಸದ ಅವಕಾಶಗಳು ವಿಪುಲವಾಗಿವೆ. ಉನ್ನತ ಶಿಕ್ಷಣ ಕೆಲವೇ ದೇಶಗಳ ಸ್ವತ್ತಾಗಿ ಉಳಿದಿಲ್ಲ. ಅದಕ್ಕೂ ಜಾಗತೀಕರಣದ ವ್ಯಾಪ್ತಿ ದಕ್ಕಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಿ. ಅನಂತಕುಮಾರಿಚಿನ್ನಪ್ಪ ಮಾತನಾಡಿ, ಸರ್ಕಾರ ಇತರೇ ಎಲ್ಲಾ ಕ್ಷೇತ್ರಗಳಿಗಿಂತ ಹೆಚ್ಚಿನ ಆದ್ಯತೆಯನ್ನು ಉನ್ನತ ಶಿಕ್ಷಣಕ್ಕೆ ನೀಡುತ್ತಿದೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಎಲ್ಲ ದೇಶಗಳ ಸರ್ಕಾರಗಳೂ ಸಾಕಷ್ಟು ಗಮನ ಕೊಡುತ್ತಿವೆ ಎಂದು ಹೇಳಿದರು.

ತೀವ್ರವಾಗಿ ಬೆಳೆಯುತ್ತಿರುವ ಜ್ಞಾನ ಕ್ಷೇತ್ರದ ಅವಶ್ಯಕತೆಗಳನ್ನು ಈಡೇರಿಸುವುದಕ್ಕೆ ಸರ್ಕಾರ ಹೆಚ್ಚಿನ ಅನುದಾನ ಖರ್ಚು ಮಾಡುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ತಾಂತ್ರಿಕ ಪ್ರಗತಿ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ. ಸಂಶೋಧನೆಗೆ ಹೊಸ ಪ್ರತಿಭೆಗಳು ಬೇಕು. ಹೀಗಾಗಿ ಉತ್ತಮ ಸೌಲಭ್ಯ ಒದಗಿಸುವ ಮೂಲಕ ಸರ್ಕಾರಗಳು ಕಲಿಕಾ ಅವಕಾಶಗಳನ್ನು ಹೆಚ್ಚಿಸುತ್ತಿವೆ. ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪ್ರಾಂಶುಪಾಲ ಶಿವಶಂಕರಪ್ಪ ಮಾತನಾಡಿ, ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ. ಅದು ಎಲ್ಲರ ಸ್ವತ್ತು. ಅದನ್ನು ಯಾರೂ ಕದಿಯಲಿಕ್ಕೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಯೌವ್ವನದ ಸಮಯದಲ್ಲಿ ಶೈಕ್ಷಣಿಕವಾಗಿ ಸಿಗುವಂತಹ ಉತ್ತಮ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು. ಇದಕ್ಕಾಗಿಯೇ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ ಎಂದು ತಿಳಿಸಿದರು.

1947-48ರಲ್ಲಿ ಭಾರತದಲ್ಲಿ 30 ವಿಶ್ವವಿದ್ಯಾಲಯಗಳು, 591 ವಿದ್ಯಾಲಯಗಳು, 21,244 ಉಪನ್ಯಾಸಕರು ಮತ್ತು 2,28,000 ವಿದ್ಯಾರ್ಥಿಗಳಿದ್ದರು. ಈಗ ದೇಶದಲ್ಲಿ 700ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ. ಸುಮಾರು 26,000 ವಿದ್ಯಾಲಯಗಳು (ಕಾಲೇಜುಗಳು), 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಮತ್ತು 5 ಲಕ್ಷಕ್ಕೂ ಹೆಚ್ಚು ಉಪನ್ಯಾಸಕರಿದ್ದಾರೆ. ಇಂತಹ ಅತ್ಯುತ್ತಮ ಸಂಪನ್ಮೂಲದ ಸದ್ಬಳಕೆಯಾಗಬೇಕು ಎಂದರು.

ಪುರಸಭಾ ಸದಸ್ಯ ರವೀಂದ್ರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ನಾಗೇಶ್, ಗೋಪಾಲ್, ವಿಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT