ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ತಡೆ ನೀಡಿದರೂ ತಹಶೀಲ್ದಾರ್‌ ಅಮಾನತು

ಲೋಕಾಯುಕ್ತ ಎಫ್‌ಐಆರ್‌ಗೆ ತಡೆ ನೀಡಿದ ಹೈಕೋರ್ಟ್‌
Published 14 ಸೆಪ್ಟೆಂಬರ್ 2023, 5:24 IST
Last Updated 14 ಸೆಪ್ಟೆಂಬರ್ 2023, 5:24 IST
ಅಕ್ಷರ ಗಾತ್ರ

ದೇವನಹಳ್ಳಿ: ದೇವನಹಳ್ಳಿ ತಹಶೀಲ್ದಾರ್ ಆಗಿದ್ದ ಶಿವರಾಜ್‌ ಮೇಲೆ ಭ್ರಷ್ಟಾಚಾರ ಆರೋಪದಡಿ ಲೋಕಾಯುಕ್ತ ಪೊಲೀಸರು ಆಗಸ್ಟ್‌ 30ರಂದು ದಾಖಲು ಮಾಡಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರಿದ್ದ ಏಕಸದಸ್ಯ ಪೀಠ ಸೆ.7ರಂದು ತಡೆ ನೀಡಿದ್ದರೂ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಸೆ.11ರಂದು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಹೈಕೋರ್ಟ್‌ ಆದೇಶದಲ್ಲಿ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಈ ಪ್ರಕರಣದ ಕುರಿತು ವಿಚಾರಣೆ ನಡೆಸದಂತೆ ಸೂಚನೆ ನೀಡಿರುವ ನ್ಯಾಯಪೀಠ, ಸರ್ಕಾರಿ ಅಧಿಕಾರಿ ವಿರುದ್ಧ ದೂರು ದಾಖಲು ಮಾಡುವ ಮೊದಲು 2021ರ ಸುಪ್ರೀಂಕೋರ್ಟ್‌ ಆದೇಶದಂತೆ ಸೂಕ್ತವಾಗಿ ಪ್ರಾಥಮಿಕ ತನಿಖೆ ನಡೆಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದೆ.

ಅಮಾನತು ಮಾಡಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಸೋಮವಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಎಟಿ) ಪ್ರಶ್ನಿಸಿರುವ ಶಿವರಾಜ್ ಅವರ ಮನವಿ ಪುರಸ್ಕರಿಸಿರುವ ನ್ಯಾಯಪೀಠ, ಅವರ ಅಮಾನತು ಆದೇಶಕ್ಕೂ ಬುಧವಾರ ತಡೆ ನೀಡಿದೆ.

ಲೋಕಾಯುಕ್ತ ಪೊಲೀಸರು ಆಗಸ್ಟ್‌ 17ರಂದು ಶಿವರಾಜ್‌, ಅವರ ಸ್ನೇಹಿತರು, ಸಂಬಂಧಿಗಳ ಮನೆ ಸೇರಿದಂತೆ ಏಕಕಾಲಕ್ಕೆ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದರು. ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆಯಡಿ  ಆಗಸ್ಟ್‌ 30ರಂದು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು.

ಇದಕ್ಕೂ ಮೊದಲು ದೇವನಹಳ್ಳಿ ತಹಶೀಲ್ದಾರ್ ಹುದ್ದೆಯಿಂದ ಶಿವರಾಜ್‌ ಅವರನ್ನು ಸರ್ಕಾರ ಜುಲೈ 28ರಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ (ಕೆಎಟಿ) ತಡೆಯಾಜ್ಞೆ ತಂದಿದ್ದರು.

ತಹಶೀಲ್ದಾರ್ ಹುದ್ದೆಗೆ ಮೂವರು ಅಧಿಕಾರಿಗಳು

ದೇವನಹಳ್ಳಿ ತಹಶೀಲ್ದಾರ್ ಶಿವರಾಜ್‌ರನ್ನು ಸರ್ಕಾರ ವರ್ಗಾವಣೆ ಮಾಡಿದ ಆದೇಶ ಹೊರಬರುತ್ತಿದ್ದಂತೆ ಜಿಲ್ಲಾಧಿಕಾರಿ ಕಚೇರಿ ಸಹಾಯಕರಾಗಿದ್ದ ಎಚ್‌.ಬಾಲಕೃಷ್ಣರನ್ನು ತರಾತುರಿಯಲ್ಲಿ ದೇವನಹಳ್ಳಿಯ ತಹಶೀಲ್ಧಾರ್ ಕಚೇರಿಗೆ ಬಂದು ಅಧಿಕಾರ ಸ್ವೀಕಾರ ಮಾಡಿದ್ದರು. ಸರ್ಕಾರದಿಂದ ಅಮಾನತ್ತು ಆದೇಶ ಹೊರಬಂದಾಗಲೂ ಸೋಮವಾರ ಮಧ್ಯಾಹ್ನ ತಹಶೀಲ್ದಾರ್ ಕಚೇರಿಗೆ ಬಂದ ಎಚ್‌.ಬಾಲಕೃಷ್ಣ ಅವರು ಮತ್ತೊಮ್ಮೆ ಅಧಿಕಾರ ಸ್ವೀಕಾರಕ್ಕೆ ಯತ್ನಿಸಿದ್ದರು. ಆದರೆ ಮಂಗಳವಾರ ದೊಡ್ಡಬಳ್ಳಾಪುರ ತಹಶೀಲ್ದಾರ್ ವಿದ್ಯಾವಿಭಾ ರಾಥೋಡ್‌ ಪ್ರಭಾರವಾಗಿ ದೇವನಹಳ್ಳಿ ತಹಶೀಲ್ದಾರ್‌ ಆಗಿ ಅಧಿಕಾರವಹಿಸಿಕೊಂಡರು ಇದೀಗಾ ಕೋರ್ಟ್‌ ತಡೆಯಜ್ಞೆ ತಂದು ಶಿವರಾಜ್‌ ಅವರೇ ತಹಶೀಲ್ದಾರ್ ಆಗಿ ಮುಂದುವರೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT