ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಜನೆ ತಂಡದಿಂದ ಭಕ್ತಿರಸ ಪ್ರಚಾರ

ಮಧುರೆ ಹೋಬಳಿಯ 30ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಶ್ರಾವಣ ಮಾಸದ ಕಾರ್ಯಕ್ರಮ
Last Updated 25 ಆಗಸ್ಟ್ 2019, 14:39 IST
ಅಕ್ಷರ ಗಾತ್ರ

ಕನಸವಾಡಿ(ದೊಡ್ಡಬಳ್ಳಾಪುರ): ತಾಲ್ಲೂಕಿನ ಮಧುರೆ ಹೋಬಳಿಯಲ್ಲಿ ಸುಮಾರು 83 ವರ್ಷಗಳಿಂದ ಶ್ರಾವಣ ಮಾಸದ ಭಜನೆ ನಡೆಯುತ್ತ ಬಂದಿದೆ. ಒಂದು ತಿಂಗಳ ಕಾಲ ನಿರಂತರವಾಗಿ ಮಧುರೆ ಹೋಬಳಿಯ 30ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಶ್ರಾವಣ ಮಾಸದ ಭಜನೆ ನಡೆಯುತ್ತದೆ. ಶ್ರಾವಣ ಮಾಸದ ಮೊದಲ ದಿನ ಭಜನೆಗೆ ಚಾಲನೆ ದೊರೆಯುತ್ತದೆ.

ಕೃಷಿ ಪ್ರಧಾನವಾಗಿರುವ ಮಧುರೆ ಹೋಬಳಿಯಲ್ಲಿ ಶ್ರಾವಣ ಮಾಸದ ವೇಳೆಗೆ ಪ್ರತಿ ವರ್ಷ ಬಿತ್ತನೆ ಕಾರ್ಯ ಮುಗಿದು ಪೈರುಗಳು ಬೆಳೆದಿರುತ್ತವೆ. ಹೊಲ,ಗದ್ದೆ ಸೇರಿದಂತೆ ಎಲ್ಲೆಡೆ ಹಸಿರು ಕಂಗೊಳಿಸುತ್ತಿರುತ್ತದೆ. ಇಂತಹ ಶ್ರಾವಣ ಮಾಸದಲ್ಲಿ ಮಧುರೆ ಹೋಬಳಿಯ ಗ್ರಾಮಗಳಲ್ಲಿ ಒಂದು ತಿಂಗಳು ನಿರಂತರವಾಗಿ ಭಜನಾ ಕಾರ್ಯಕ್ರಮ ನಡೆಯುತ್ತದೆ.

ಹದಿನೈದರಿಂದ ಇಪ್ಪತ್ತು ಜನರ ಭಜನಾ ತಂಡವೊಂದು ಮಧುರೆ ಹೋಬಳಿಯ ಗ್ರಾಮಗಳಲ್ಲಿ ಸಂಚರಿಸುತ್ತದೆ. ತಂಡದ ಸದಸ್ಯರ ಕೈಯಲ್ಲಿ ರಾಮ, ಸೀತಾ, ಲಕ್ಷ್ಮಣ, ಆಂಜನೇಯ ಸಮೇತವಾದ ಫೊಟೊ ಇರುತ್ತದೆ. ಮತ್ತೊಬ್ಬರ ಕೈಯಲ್ಲಿ ದೀಪ ಉರಿಯುವ ಗರುಡಗಂಬ, ಕಲಾವಿದರ ಕೈಗಳಲ್ಲಿ ಹಾರ್ಮೋನಿಯಂ, ತಬಲ, ತಾಳಗಳೊಂದಿಗೆ ದೇವರ ನಾಮಗಳನ್ನು ಹಾಡುವ ಕಲಾವಿದರು ಸೇರಿಕೊಳ್ಳುತ್ತಾರೆ. ಒಂದು ಗ್ರಾಮಕ್ಕೆ ಮುಂಜಾನೆಗೆ ಪ್ರವೇಶ ಮಾಡುವ ಭಜನಾ ತಂಡ ಆ ಗ್ರಾಮದಲ್ಲಿರುವ ಪ್ರಮುಖ ದೇವಾಲಯಲ್ಲಿ ಮೊದಲು ಪೂಜೆ ಸಲ್ಲಿಸುತ್ತಾರೆ.

ನಂತರ ಆ ಗ್ರಾಮದ ಒಂದೊಂದು ಮನೆಗೂ ಭಜನಾ ತಂಡ ಹೋಗಿ ಅಲ್ಲಿ ಸುಮಾರು ಅರ್ಧ ಗಂಟೆಯ ತನಕ ದೇವರನ್ನು ಸ್ತುತಿಸುತ್ತ ಹಾಡುಗಳನ್ನು ಹಾಡುತ್ತಾರೆ. ಪ್ರತಿ ಮನೆಯಲ್ಲಿ ಭಜನಾ ತಂಡ ತಂದಿರುವ ಪೋಟೋವನ್ನು ಒಂದು ಪೀಠದಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ದೇವರ ಪೂಜೆಗಾಗಿ ಪ್ರಸಾದವನ್ನು ಸಿದ್ದಪಡಿಸಿರುತ್ತಾರೆ. ಮನೆಯಲ್ಲಿ ಭಜನಾ ಕಾರ್ಯ ಮುಗಿದು ಪ್ರಸಾದ ವಿನಿಯೋಗ ಆದ ನಂತರ ಭಜನಾ ತಂಡ ಮತ್ತೊಂದು ಮನೆಗೆ ಹೋಗುತ್ತದೆ. ಹೀಗೆ ಮುಂಜಾನೆಯಿಂದ ಸಂಜೆಯ ತನಕ ಗ್ರಾಮದಲ್ಲಿ ಭಜನಾ ತಂಡ ಸಂಚಾರ ಮಾಡುತ್ತದೆ.

ಮಧುರೆ ಹೋಬಳಿಯ ಇಸ್ತೂರು ಗ್ರಾಮದಲ್ಲಿ ಮೊದಲ ದಿನದ ಭಜನಾ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಇಸ್ತೂರು ಕೋದಂಡರಾಮ ಭಜನಾ ಮಂಡಳಿ ಈ ನಿರಂತರ ಭಜನೆಯ ನೇತೃತ್ವ ವಹಿಸುತ್ತ ಬಂದಿದೆ. ಗಣೇಶ, ರಾಮ,ಸೀತಾ, ಲಕ್ಷ್ಮಣ, ಆಂಜನೇಯ, ವಿಷ್ಣುವಿನ ದಶಾವತಾರಗಳ ಮಹಿಮೆ ಹೀಗಿ ವಿವಿಧ ದೇವತೆಗಳ ಮಹಿಮೆಗಳು ಭಜನಾ ತಂಡದ ಹಾಡುಗಳಲ್ಲಿ ಪ್ರಧಾನವಾಗಿರುತ್ತವೆ. ಗ್ರಾಮೀಣ ಪೌರಾಣಿಕ ನಾಟಕಗಳ ಹಾಡುಗಳ ದಾಟಿ ಈ ಭಜನಾ ಹಾಡುಗಳಲ್ಲಿ ಸೇರಿರುವುದು ವಿಶೇಷವಾಗಿದೆ.

ದೊಡ್ಡಬಳ್ಳಾಪುರ ನಗರದಲ್ಲೂ ಹಲವಾರು ಭಜನಾ ತಂಡಗಳಿವೆ. ಹೆಚ್ಚಿನ ಸಂಖ್ಯೆಯ ಭಜನಾ ತಂಡಗಳು ಮಧುರೆ ಹೋಬಳಿಯಲ್ಲಿರುವುದು ವಿಶೇಷ. ಹರಿದಾಸರಾದ ಪುರಂದರದಾಸ, ಕನಕದಾಸ, ತತ್ತ್ವಪದಕಾರ ಶಿಶುನಾಳ ಷರೀಫ್ ಮುಂತಾದವರು ರಚಿಸಿರುವ ಸಾಹಿತ್ಯವನ್ನು ಭಜನೆಗಳಲ್ಲಿ ಕಲಾವಿದವರು ಹಾಡುತ್ತಾರೆ.

ಭಜನಾ ಕಾರ್ಯಕ್ರಮದಲ್ಲಿ ಪ್ರತಿ ಮನೆಯಲ್ಲಿ ಭಜನಾ ತಂಡಕ್ಕೆ ದವಸ ಧಾನ್ಯಗಳದೊಂದಿಗೆ ಆರ್ಥಿಕ ಚಂದಾ ನೀಡುತ್ತಾರೆ. ರೈಲ್ವೆಗೊಲ್ಲಹಳ್ಳಿ ಬೈಲಾಂಜನೇಯಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ಸಮಾರೋಪ ನಡೆಯುತ್ತದೆ. ದೇವಾಲಯದಲ್ಲಿ ಮಧುರೆ ಹೋಬಳಿಯ ಭಕ್ತ ವೃಂದದಿಂದ ವಿಶೇಷ ಪೂಜೆ, ಅಖಂಡ ಭಜನೆ, ಅನ್ನಸಂತರ್ಪಣೆ ನೆರವೇರುತ್ತದೆ. ಅಂದು ಭಜನಾ ಸಮಿಯ ಪದಾಧಿಕಾರಿಗಳು ವಾರ್ಷಿಕ ಆದಾಯ– ವೆಚ್ಚಗಳನ್ನು ಮಂಡಿಸುತ್ತಾರೆ. ವಿಶೇಷ ಅತಿಥಿಗಳನ್ನು ಆಹ್ವಾನಿಸಿ ವಿಶೇಷ ಪ್ರವಚನ ಏರ್ಪಡಿಸುತ್ತಾರೆ.

ಹಿರಿಯರು ಮಧುರೆ ಹೋಬಳಿಯಲ್ಲಿ ಪ್ರಾರಂಭಿಸಿರುವ ಶ್ರಾವಣ ಮಾಸದ ಭಜನಾ ಕಾರ್ಯಕ್ರಮವನ್ನು ಮುನ್ನಡೆಸಲು ನಮಗೆ ಸಂತೋಷವಾಗುತ್ತಿದೆ. ಈ ಕಾರ್ಯದಲ್ಲಿ ಮಧುರೆ ಎಲ್ಲಾ ಗ್ರಾಮಗಳಲ್ಲಿ ಉತ್ತಮ ಸಹಕಾರ ದೊರೆಯುತ್ತಿದೆ ಎನ್ನುತ್ತಾರೆ ಶ್ರಾವಣ ಮಾಸದ ಭಜನೆ ತಂಡದ ಅಧ್ಯಕ್ಷ ಚನ್ನಾದೇವಿ ಅಗ್ರಹಾರ ನಂಜೇಗೌಡ.

ಹಿರಿಯರು ಶ್ರಾವಣ ಮಾಸದ ಭಜನೆಯನ್ನು ಪ್ರತಿ ಗ್ರಾಮದಲ್ಲೂ ನಡೆಸುತ್ತಾ, ಜನರಲ್ಲಿ ಭಕ್ತಿ ಭಾವನೆ ತುಂಬುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಇಂತಹ ಸದಭಿರುಚಿಯನ್ನು ಅರ್ಥಪೂರ್ಣವಾಗಿ ನಡೆಸುತ್ತ ಬಂದಿದ್ದೇವೆ ಎನ್ನುತ್ತಾರೆ ಕಾರ್ಯದರ್ಶಿ ಮಹಾದೇವಪ್ಪ.

ಜನರಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಮೂಡಿಸಲು ಈ ಕಾರ್ಯಕ್ರಮ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ ಭಜನ ತಂಡದ ಖಜಾಂಚಿ ಹನುಮಂತರಾಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT