ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ವೇದಿಕೆಯಲ್ಲಿ ಅಂತರ ಕಾಯ್ದುಕೊಳ್ಳಲು ವಿಫಲ 

Last Updated 21 ಏಪ್ರಿಲ್ 2020, 15:41 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ಕೊಯಿರಾ ಗ್ರಾಮದ ಪರಿಶಿಷ್ಟರ ಬಡಾವಣೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣೆ ಸಭೆಯಲ್ಲಿ ಅಂತರ ಕಾಯ್ದುಕೊಳ್ಳುವಲ್ಲಿ ಮುಖಂಡರು ವಿಫಲರಾದರು.

ಕಾರ್ಯಕ್ರಮ ಮಧ್ಯಾನ್ನ 2.30ಕ್ಕೆ ನಿಗದಿಯಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಶಾಸಕ ಕೃಷ್ಣ ಭೈರೇಗೌಡ ಕಾರ್ಯಕ್ರಮ ಹಾಜರಾಗಿದ್ದು ಸಂಜೆ 4.30ಕ್ಕೆ. ಇದಕ್ಕೂ ಮೊದಲು ದಿನಸಿ ಕಿಟ್ ಪಡೆಯುವ 450ಕ್ಕೂ ಹೆಚ್ಚು ಬಡವರು ಮತ್ತು ಕೂಲಿ ಕಾರ್ಮಿಕರು ವೇದಿಕೆ ಮುಂಭಾಗದಲ್ಲಿ ಹಾಕಲಾಗಿದ್ದ ಚೌಕಾಕಾರದ ಬಾಕ್ಸ್‌ನಲ್ಲಿ ಕುಳಿತಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಅಲ್ಲಲ್ಲಿ ಗುಂಪುಗೂಡಿ ಅಂತರದ ಅರಿವಿಲ್ಲದೆ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದರು.

‘ಡಿಕೆಶಿ ಮತ್ತು ಅವರ ತಂಡ ಬಂದ ನಂತರ ಕಾರ್ಯಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳು ಮುಗಿಬಿದ್ದರು. ನಂತರ ವೇದಿಕೆಗೆ ಬಂದ ಡಿಕೆಶಿ ವಿತರಣೆಗೆ ತಂದು ಇರಿಸಲಾಗಿದ್ದ ಹಣ್ಣಿನ ಬ್ಯಾಗ್‌ನಿಂದ ದ್ರಾಕ್ಷಿಯನ್ನು ತೆಗೆದು ರುಚಿ ನೋಡಿದರು. ಪಕ್ಕದಲ್ಲೆ ಇದ್ದ ಶಾಸಕ ಕೃಷ್ಣ ಭೈರೇಗೌಡ ಗ್ರಾಮಾಂತರ ಜಿಲ್ಲೆಯಲ್ಲಿ ದೇವನಹಳ್ಳಿ ತಾಲ್ಲೂಕಿನಲ್ಲಿ ಗುಣಮಟ್ಟದ ದ್ರಾಕ್ಷಿಯನ್ನು ರೈತರು ಬೆಳೆಯುತ್ತಿದ್ದಾರೆ. ಕೊರೊನಾದಿಂದ ಲಾಕ್ ಡೌನ್ ಮಾಡಿರುವುದರಿಂದ ರೈತರಿಗೆ ಗ್ರಾಹಕರ ಮತ್ತು ಸರಕು ಸಾಗಾಣಿಕೆಗೆತೊಂದರೆಯಾಗಿದೆ. ದ್ರಾಕ್ಷಿ ಪ್ರತಿ ಕೆಜಿಗೆ ₹ 20ಕ್ಕೂ ಖರೀದಿಸುವವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ತರಕಾರಿಗಳನ್ನು ಪಕ್ಷದ ಕಾರ್ಯಕರ್ತರು ಖರೀದಿಸಿ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ. ದ್ರಾಕ್ಷಿ ಹಣ್ಣಿನ ಸಮಸ್ಯೆ ಮೀತಿ ಮೀರಿದೆ’ ಎಂದ ಡಿಕೆಶಿ ಸಾಂಕೇತಿಕ ವಿತರಣೆ ಮಾಡಿ ಹೊರಟರು.

ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಪ್ಪ, ಜಿಲ್ಲಾ ಕಾಂಗ್ರೆಸ್ ಘಟಕ ಅಧ್ಯಕ್ಷ ಮುನಿಸ್ವಾಮಿ, ಕೆ.ಪಿ.ಸಿ.ಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜಗನ್ನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಧಮ್ಮ, ಕೆ.ಸಿ.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಉಪಾಧ್ಯಕ್ಷರಾದ ಶಾಂತಕುಮಾರ್, ಎಸ್.ಪಿ. ಮುನಿರಾಜು, ಹಿಂದುಳಿದ ವರ್ಗಗಳ ಘಟಕ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ್ ಕುಮಾರ್, ಹಿರಿಯ ಮುಖಂಡರಾದ ಚಂದ್ರಣ್ಣ, ಹೊಸೂರು ಶ್ರೀನಿವಾಸ್, ವೆಂಕಟಸ್ವಾಮಿ, ಕಾಂಗ್ರೆಸ್ ಎಸ್ಟಿ ಘಟಕ ತಾಲ್ಲೂಕು ಅಧ್ಯಕ್ಷ ರಬ್ಬನಹಳ್ಳಿ ಮುನಿರಾಜು, ಕೆ.ಪಿ.ಸಿ.ಸಿ ಸದಸ್ಯ ಚೇತನ್ ಗೌಡ, ಚಿನ್ನಪ್ಪ, ಎಂ.ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT