ಬುಧವಾರ, ನವೆಂಬರ್ 20, 2019
25 °C

ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪನೆಗೆ ಮುಸುಕಿನ ಗುದ್ದಾಟ?

Published:
Updated:
Prajavani

ದೇವನಹಳ್ಳಿ: ಬಿದಲೂರು ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪನೆ ಎರಡು ಸಮುದಾಯದ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ಸೋಮವಾರ ಸಂಜೆ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ವಾಲ್ಮೀಕಿ ಯುವಕ ಸಂಘದ ಪದಾಧಿಕಾರಿಗಳು ಪ್ರತಿಷ್ಠಾಪನೆ ಮಾಡಿದ್ದರು. ಆದರೆ, ಪೊಲೀಸರು, ಗ್ರಾ.ಪಂ,‌ ತಾ.ಪಂ ಅಧಿಕಾರಿಗಳು ಪೂಜೆಗೆ ಅವಕಾಶ ನೀಡುತ್ತಿಲ್ಲ ಎಂಬುದು ಸ್ಥಳೀಯ ವಾಲ್ಮೀಕಿ ಸಮುದಾಯದ ಯುವಕರ ಆರೋಪವಾಗಿದೆ. 

ಈ ಕುರಿತು ಮಾತನಾಡಿದ ವಾಲ್ಮೀಕಿ ವಿದ್ಯಾರ್ಥಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ, 2018 ಜು.16ರಂದು ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಪುತ್ಥಳಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲಾಗಿದೆ. ವಾಲ್ಮೀಕಿ ಸಮುದಾಯ ಸ್ವಯಂ ಪ್ರೇರಿತವಾಗಿ ಯಾರ ಬಳಿಯೂ ಅನುದಾನ ಪಡೆಯದೆ ಸ್ವಂತ ವೆಚ್ಚದಲ್ಲಿ ಪ್ರತಿಮೆ ಕೆತ್ತನೆ ಮಾಡಿಸಿ ನ.5ರಂದು ಪ್ರತಿಷ್ಠಾಪನೆ ಗೊಳಿಸಿ ಅನಾವರಣಕ್ಕೆ ಸಹಕರಿಸುವಂತೆ ಪೊಲೀಸರಿಗೂ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ. ಆದರೆ, ಪೂಜೆಗೆ ಅವಕಾಶ ನೀಡುತ್ತಿಲ್ಲ ಎಂದು ದೂರಿದರು.

ವಾಲ್ಮೀಕಿ ಸಮುದಾಯದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರಾಜು ಮಾತನಾಡಿ,ರಾಜಕೀಯ ದ್ವೇಷಕ್ಕಾಗಿ ಪುತ್ಥಳಿ ಅನಾವರಣಕ್ಕೆ ಅಡ್ಡಿ ಮಾಡಿ ಅಧಿಕಾರಿಗಳ ಮೇಲೆ ಒತ್ತಡ ತರಲಾಗುತ್ತಿದೆ. ಎಲ್ಲಾ ಸಮುದಾಯಕ್ಕೆ ಮಹರ್ಷಿ ವಾಲ್ಮೀಕಿ ಆದರ್ಶ ವ್ಯಕ್ತಿ. ಆವತಿ ಗ್ರಾಮದಲ್ಲಿ ಕನಕಮೂರ್ತಿ, ರಣಭೈರೇಗೌಡರ ಪ್ರತಿಮೆ ಇದೆ. ಇದನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.

ತಾಲ್ಲೂಕು ವಾಲ್ಮೀಕಿ ಸಂಘ ಅಧ್ಯಕ್ಷ ನಾಗೇಶ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಮಾತನಾಡಿ, ಯುವಕರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡಬೇಕು. ಸಮಾಜದ ಶಾಂತಿ ಕದಡುವ ಕೆಲಸ ಮಾಡಬಾರದು. ಗ್ರಾಮದ ಮುಖಂಡರ ಸಭೆ ನಡೆಸಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)