ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಸರ್ಕಾರಿ ಶಾಲೆ ಮಕ್ಕಳಿಗೆ ಟ್ಯಾಬ್‌

ಸಂತಸ ಶಾಲೆ ಯೋಜನೆಯಡಿ 27 ಸ್ಕೂಲ್‌ಗಳ ಅಭಿವೃದ್ಧಿ
Last Updated 7 ಜನವರಿ 2021, 3:19 IST
ಅಕ್ಷರ ಗಾತ್ರ

ಆನೇಕಲ್: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಂಘ, ಸಂಸ್ಥೆಗಳ ಸಹಕಾರ ಅವಶ್ಯಕ. ಇದರಿಂದಾಗಿ ಶಿಕ್ಷಣದ ಗುಣಮಟ್ಟ ಹೆಚ್ಚಲು ಅನುಕೂಲವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್‌. ರಾಮಮೂರ್ತಿ ತಿಳಿಸಿದರು.

ತಾಲ್ಲೂಕಿನ ಇಂಡ್ಲವಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಲ್‌ಫೋರ್ಜ್‌ ಸಂಸ್ಥೆಯ ಸಿಎಸ್‌ಆರ್‌ ನಿಧಿ, ರೋಟರಿ ಸಹಯೋಗದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನು ವಿತರಿಸಿಅವರು ಮಾತನಾಡಿದರು.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಹತ್ತು ತಿಂಗಳಿನಿಂದ ನೇರ ಬೋಧನೆಗೆ ತೊಂದರೆಯಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಡಕಾಗಬಾರದೆಂಬ ಉದ್ದೇಶದಿಂದ ವಿವಿಧ ಶಾಲೆಗಳಲ್ಲಿ ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡುವ ನಿಟ್ಟಿನಲ್ಲಿ ಬಿಲ್‌ಫೋರ್ಜ್‌ ಸಂಸ್ಥೆಯು ರೋಟರಿ ಸಹಯೋಗದಲ್ಲಿ ಇಂಡ್ಲವಾಡಿ ಪ್ರೌಢಶಾಲೆಯ75 ವಿದ್ಯಾರ್ಥಿಗಳಿಗೆ ಟ್ಯಾಬ್‌ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆಎಂದರು.

ಸಂಘ, ಸಂಸ್ಥೆಗಳು ಎಲ್ಲಾ ಸರ್ಕಾರಿ ಶಾಲೆಗಳಿಗೂ ಇದೇ ರೀತಿ ನೆರವಾದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸನ್‌ಸೇರಾ ಕಂಪನಿ ಸೇರಿದಂತೆ ಹಲವು ಸಂಸ್ಥೆಗಳು ನೆರವಾಗಲು ಮುಂದೆ ಬಂದಿವೆ ಎಂದರು.

ರೋಟರಿ ಸಂಸ್ಥೆಯ ಗುರು ನಾಗೇಶ್‌ ಮಾತನಾಡಿ, ರೋಟರಿ ಸಂಸ್ಥೆಯು ಶಿಕ್ಷಣ, ಆರೋಗ್ಯ, ಯುವ ಸಬಲೀಕರಣ ಸೇರಿದಂತೆ ಏಳು ಪ್ರಮುಖ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ರೋಟರಿ ಸಂಸ್ಥೆಯ ಜೊತೆಗೆ ಹಲವಾರು ಕೈಗಾರಿಕೆಗಳು, ದಾನಿಗಳು ಜೊತೆಗೂಡಿ ಸೇವಾ ಕಾರ್ಯಗಳಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಆನೇಕಲ್‌ ತಾಲ್ಲೂಕಿನಲ್ಲಿ ಸಂತಸ ಶಾಲೆ ಯೋಜನೆಯಡಿ 27 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಟ್ಯಾಬ್‌ ನೀಡುವ ಕಾರ್ಯಕ್ರಮದಡಿ ವಿವಿಧ ಶಾಲೆಗಳಿಗೆ ನೆರವು ನೀಡಲಾಗುತ್ತಿದೆ. ಬಿಲ್‌ಫೋರ್ಜ್‌ ಸಂಸ್ಥೆಯು ಶಾಲೆಗೆ ನೆರವು ನೀಡಲು ಮುಂದೆ ಬಂದಿರುವುದರಿಂದ ಗಡಿಭಾಗದ ಮತ್ತು ಗ್ರಾಮಿಣ ಭಾಗದ ಇಂಡ್ಲವಾಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ಮಾಡಿ ಹೆಚ್ಚಿನ ಫಲಿತಾಂಶ ಪಡೆಯಲು ಶ್ರಮಿಸಬೇಕು ಎಂದರು.

ಬಿಲ್‌ಫೋರ್ಜ್‌ ಸಂಸ್ಥೆಯ ಅಧಿಕಾರಿ ಡಿ.ಎಸ್‌. ಮಂಜುನಾಥ್‌ ಮಾತನಾಡಿ, ಇಂಡ್ಲವಾಡಿ ಗ್ರಾಮ ಪಂಚಾಯಿತಿಯಲ್ಲಿ ಬಿಲ್‌ಫೋರ್ಜ್‌ ಸಿಎಸ್‌ಆರ್‌ ಕಾರ್ಯಕ್ರಮದಡಿ ಕೊರೊನಾ ಸಂದರ್ಭದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಲಾಗಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕ್ರೀಡೋಪಕರಣ ನೀಡಲಾಗಿದೆ. ರೋಟರಿ ಸಹಯೊಗದಲ್ಲಿ ಟ್ಯಾಬ್‌ಗಳನ್ನು ವಿತರಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕರಿಸಲಾಗಿದೆ ಎಂದರು.

ಬಿಲ್‌ಫೋರ್ಜ್‌ ಸಂಸ್ಥೆಯ ಸಿಎಸ್‌ಆರ್‌ ಮುಖ್ಯಸ್ಥ ರೆನಾಲ್ಡ್‌ ಜೇಕಬ್‌, ಆನೇಕಲ್‌ ಸಿಎಸ್‌ಆರ್‌ ಸಂಯೋಜಕ ಸಾಯಿಪ್ರಕಾಶ್‌, ರೋಟರಿ ಸಂಸ್ಥೆಯ ವಿಭಾಕರ್‌, ಶಾಲಾ ಮುಖ್ಯೋಪಾಧ್ಯಾಯ ಜಿ. ಗುರುಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್‌, ಲೋಕೇಶ್‌, ಎಸ್‌ಡಿಎಂಸಿ ಸದಸ್ಯ ಸಂಪತ್‌ಕುಮಾರ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಶಿವಣ್ಣ, ಸಹಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಾಜಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT