ದೇವನಹಳ್ಳಿ: ಬೆಂಗಳೂರು ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿನ ಸಾವಿರಾರು ಕೆರೆಗಳು ಅಭಿವೃದ್ಧಿ ಹೆಸರಿನಲ್ಲಿ ಆಪೋಶನವಾಗಿದ್ದರ ಫಲ ಅಂತರ್ಜಲ ಪಾತಾಳಕ್ಕೆ ಇಳಿದಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಬೈಪಾಸ್ ರಸ್ತೆಯಲ್ಲಿ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘದ ವತಿಯಿಂದ ನಡೆದ ‘ಸ್ವಾಭಿಮಾನಿ ರೈತರ ರಾಜ್ಯ ಮಟ್ಟದ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
‘ಮುಖ್ಯಮಂತ್ರಿ ಕುಮಾರಸ್ವಾಮಿ ನನಗೆ ಒಂದು ದಿನಕ್ಕೆ ಸಿಮಿತವಾಗುವಂತೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಿ. ಕೆರೆಗಳ ಒತ್ತುವರಿಗೆ ಸಹಕರಿಸುತ್ತಿರುವ ಮತ್ತು ಕೆರೆಗಳ ಆಪೋಶನಕ್ಕೆ ಕಾರಣರಾಗಿರುವ ಅಧಿಕಾರಿಗಳನ್ನು ನೇಣಿಗೇರಿಸುತ್ತೇನೆ’ ಎಂದು ಅವರು ಗುಡುಗಿದರು.
‘ದೇಶದಲ್ಲಿ ಮಾನ್ಸೆಂಟೊ ಸೇರಿದಂತೆ ಅನೇಕ ಕಂಪನಿಗಳು ರೈತರಿಗೆ ಕಳಪೆ ಬೀಜ ನೀಡಿ ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿವೆ. ಸರ್ಕಾರ ಕೇವಲ ಘೋಷಣೆ, ಭರವಸೆ ಬಿಟ್ಟರೆ ಯಾವುದೇ ಶಾಶ್ವತ ಯೋಜನೆ ರೈತರಿಗೆ ನೀಡುತ್ತಿಲ್ಲ ಎಂದು ಹರಿಹಾಯ್ದರು. ಹೋರಾಟ ಶಕ್ತಿಯುತವಾಗಿದ್ದರೆ ಆಡಳಿತ ನಡೆಸುವ ಸರ್ಕಾರ ರೈತರ ಪಾದಗಳಿಗೆ ಬೀಳುತ್ತದೆ. ನಾವು ಸಂಘಟಿತರಾಗಬೇಕು ನೀವು ನನ್ನ ಜತೆ ಬನ್ನಿ ರೈತರ ಸಮಸ್ಯೆಗಳಿಗೆ ಸರ್ಕಾರ ಯಾಕೆ ಸ್ಪಂದಿಸುವುದಿಲ್ಲ ನೋಡೋಣ’ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಸೂ.ರಂ.ರಾಮಯ್ಯ ಮಾತನಾಡಿ, ರಾಜ್ಯದ ನದಿ ಮೂಲಗಳು ಬತ್ತಿ ಹೋಗುತ್ತಿವೆ. 1,600 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವ ಖಾತರಿ ಇಲ್ಲ. ಗಂಗಾ ಕಾವೇರಿ ಜೋಡಣೆ ಬರಿ ಭರವಸೆಯಾಗಿದೆ ಎಂದರು.
ರೈತ ಮಹಿಳೆ ಸಂದರ್ಶಿನಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಸ್ತೆ, ಚರಂಡಿ, ರೈಲು ಮಾರ್ಗಗಳು ದುರಸ್ತಿ ಮಾಡಲು ಕೋಟ್ಯಂತರ ಅನುದಾನ ನೀಡುತ್ತಿದೆ. ಜಿಡಿಪಿ ಬಗ್ಗೆ ಹೆಚ್ಚು ಗಮನ ಹರಿಸುತ್ತದೆ. ಅಂತರ್ಜಲ ವೃದ್ಧಿಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುವುದರ ಬಗ್ಗೆ ಚಿಂತನೆ ನಡೆಸುವುದಿಲ್ಲ. ಕಳಪೆ ಬೀಜ, ರಾಸಾಯನಿಕ ಗೊಬ್ಬರ ರೈತರ ಸಂಕಷ್ಟ ಹೆಚ್ಚಿಸುತ್ತಿದೆ. ಪ್ರಸ್ತುತ ಮಣ್ಣಿನ ಫಲವತ್ತತೆ ಶೇ.0.5 ರಷ್ಟು ಇದೆ. ಮಣ್ಣಿನ ಫಲವತ್ತತೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ರೈತ ಸಂಘ ಕಾರ್ಯಾಧ್ಯಕ್ಷ ಚಾಗನೂರು ಮಲ್ಲಿಕಾರ್ಜುನ್ ರೆಡ್ಡಿ ಮಾತನಾಡಿದರು.ರೈತ ಸಂಘ ರಾಜ್ಯ ಘಟಕ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಕಾರ್ಯದರ್ಶಿ ತಮ್ಮಯ್ಯ, ಜಿಲ್ಲಾದ್ಯಕ್ಷ ವಿ.ನಾಗೇಶ್, ಉಪಾದ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಬಚ್ಚಳ್ಳಿ ವೆಂಕಟೇಶ್, ಬೆಂಗಳೂರು ನಗರ ಘಟಕ ಅಧ್ಯಕ್ಷ ನರೇಂದ್ರ ಕುಮಾರ್, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಎಸ್.ಆರ್.ರವಿಕುಮಾರ್, ತಾಲ್ಲೂಕು ಘಟಕ ಅಧ್ಯಕ್ಷ ಮುನಿಶಾಮಪ್ಪ, ಪ್ರಧಾನ ಕಾರ್ಯದರ್ಶಿ ಜಯಶಂಕರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.