ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ | ದನಗಳ ಜಾತ್ರೆಗೆ ಸಜ್ಜಾದ ಘಾಟಿ...

ನಟರಾಜ ನಾಗಸಂದ್ರ
Published 25 ಡಿಸೆಂಬರ್ 2023, 6:13 IST
Last Updated 25 ಡಿಸೆಂಬರ್ 2023, 6:13 IST
ಅಕ್ಷರ ಗಾತ್ರ

ತೂಬಗೆರೆ (ದೊಡ್ಡಬಳ್ಳಾಪುರ): ದಕ್ಷಿಣ ಭಾರತದಲ್ಲೇ ಎತ್ತುಗಳ (ಹೋರಿಗಳ) ಜಾತ್ರೆಗೆ ಹೆಸರಾಗಿರುವ ಘಾಟಿ ಸುಬ್ರಹ್ಮಣ್ಯ ದನಗಳ ತುಂಬು ಜಾತ್ರೆಗೆ ದಿನಗಣನೆ ಆರಂಭವಾಗಿದೆ.

ಈಗಾಗಲೇ ದೂರದ ಊರುಗಳಿಂದ ಜಾತ್ರೆಗೆ ರಾಸುಗಳೊಂದಿಗೆ ರೈತರು ಬರುತ್ತಿದ್ದಾರೆ. ಘಾಟಿಯಲ್ಲಿ ರಾಸುಗಳ ವ್ಯಾಪಾರ ಸ್ಥಳದಲ್ಲಿ ಹೈಟೆಕ್‌ ಮಾದರಿಯ ಪೆಂಡಾಲ್‌ ಹಾಕಲಾಗಿದೆ. 

‘ರಾಸುಗಳ ಜಾತ್ರೆಗೆ ಸಕಲ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಾರದ ಹಿಂದೆಯೇ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದರು.  ರಾಸುಗಳಿಗೆ ಕುಡಿಯುವ ನೀರು, ವಿದ್ಯುತ್‌ ದೀಪ, ಪಶು ಇಲಾಖೆ ವತಿಯಿಂದ ತಾತ್ಕಾಲಿಕ ಪಶು ಆಸ್ಪತ್ರೆ ಆರಂಭಕ್ಕೆ ಸಿದ್ಧತೆ ಪೂರ್ಣಗೊಂಡಿವೆ’ ಎಂದು ಘಾಟಿ ಸುಬ್ರಹ್ಮಣ್ಯ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ.ನಾಗರಾಜ್‌ ತಿಳಿಸಿದ್ದಾರೆ.

ಮುಂಗಾರಿನಲ್ಲಿ ಮಳೆ ಆಶ್ರಯದಲ್ಲಿ ಬೆಳೆಯಲಾಗುವ ಬೆಳೆ ಕೊಯ್ಲು ಮುಕ್ತಾಯದ ನಂತರ ನಡೆಯುವ ಘಾಟಿ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಕೃಷಿ ಕೆಲಸಕ್ಕೆ ಬೇಕಾಗುವ ಎತ್ತು, ಹೋರಿ ಹಾಗೂ ಇತರ ಜಾನುವಾರು ಖರೀದಿಸಲು ರಾಜ್ಯದ ವಿವಿಧ ಜಿಲ್ಲೆ ಮಾತ್ರವಲ್ಲದೆ ನೆರೆಯ ತಮಿಳುನಾಡಿನ ಸೇಲಂ, ಹೊಸೂರು,ಆಂಧ್ರಪ್ರದೇಶದ ಹಿಂದೂಪುರ,ಅನಂತಪುರ,ಮಹಾರಾಷ್ಟ್ರದ ಕೊಲ್ಲಾಪುರ,ಸಾಂಗ್ಲಿ ಸೇರಿದಂತೆ ವಿವಿಧ ಕಡೆಗಳಿಂದ ರೈತರು ಬರುತ್ತಾರೆ.

ಕೋವಿಡ್‌ ಭೀತಿ:

ಕೋವಿಡ್‌ ಕಾರಣದಿಂದ ಮೂರು ವರ್ಷಗಳಿಂದಲೂ ರಾಸುಗಳ ಜಾತ್ರೆ ನಡೆದಿರಲಿಲ್ಲ. 2022ರ ಡಿಸೆಂಬರ್‌ನಲ್ಲಿ ಚರ್ಮ ಗಂಟು ರೋಗ ರಾಸುಗಳನ್ನು ಕಾಡಿದ್ದರಿಂದ ಜಾತ್ರೆ ನಿಷೇಧಿಸಲಾಗಿತ್ತು. ಆದರೂ ಕೆಲ ರೈತರು ಜಾತ್ರೆಗೆ ರಾಸುಗಳೊಂದಿಗೆ ಬಂದಿದ್ದರು. ಅವರ ಮನವೊಲಿಸಿ ಹಿಂದಕ್ಕೆ ಕಳುಹಿಸಲಾಗಿತ್ತು. ಕಳೆದ ವರ್ಷ ರಥೋತ್ಸವ ಮಾತ್ರ ನಡೆದಿತ್ತು.

ಈ ಬಾರಿ ಯಾವುದೇ ಅಡ್ಡಿ, ಆತಂಕ ಇಲ್ಲದೆ ರಾಸುಗಳ ಜಾತ್ರೆ ನಡೆಯುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೆ ಕೋವಿಡ್‌ ಭೀತಿ ಎದುರಾಗಿದೆ.

ಹೈಟೆಕ್‌ ಪೆಂಡಾಲ್‌:

ಜಾತ್ರೆಯಲ್ಲಿ ಹೋರಿಗಳನ್ನು ಕಟ್ಟುವ ಸ್ಥಳದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈಟೆಕ್‌ ಮಾದರಿಯಲ್ಲಿ ಪೆಂಡಾಲ್‌ ನಿರ್ಮಿಸುವ ಪ್ರವೃತ್ತಿ ಈಚೆಗೆ ಹೆಚ್ಚಾಗಿದೆ.

ಹೋರಿಗಳು ಮಲಗಲು ವಿಶೇಷವಾಗಿ ನಿರ್ಮಿಸುವ ಮೆತ್ತನೆಯ ಹುಲ್ಲಿನ ಹಾಸಿಗೆ, ಪೆಂಡಾಲ್‌ ಅನ್ನು ಬಣ್ಣ ಬಣ್ಣದ ಅಲಂಕಾರಿಕ ಹೂವುಗಳಿಂದ ಸಿಂಗರಿಸಲಾಗುತ್ತಿದೆ.

ಜಾತ್ರೆಯಲ್ಲಿ ಹೈಟೆಕ್‌ ಮಾದರಿ ಪೆಂಡಾಲ್‌ ನಿರ್ಮಿಸುವುದು, ಹೋರಿಗಳನ್ನು ಮೇಯಿಸಿ ಜಾತ್ರೆಗೆ ಕರೆ ತುರುವುದು ಇತ್ತೀಚಿನ ದಿನಗಳಲ್ಲಿ ಕೆಲ ರೈತರಿಗೆ ಪ್ರತಿಷ್ಠೆಯ ಸಂಗತಿಯಾಗುತ್ತಿದೆ. ಇದಕ್ಕಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ.

ಬಣ್ಣದ ಬಾರು ಕೋಲು:

ಕೃಷಿ ಕೆಲಸ ಮಾಡುವ ಹೋರಿಗಳು ಸೇರಿದಂತೆ ರಾಸುಗಳ ಕೊರಣಿಗೆ ಕಟ್ಟುವ ಕಂಬಲಳಿ ದಾರ, ಘಂಟೆಗಳು, ಗೌಸಿಣಿಗೆ, ಬಣ್ಣ ಬಣ್ಣದ ಬಾರು ಕೋಲುಗಳು, ಘಂಟೆ ಸರ, ರಾಗಿ ಒಕ್ಕಣೆಯಲ್ಲಿ ಬಳಸುವ ವಿವಿಧ ಕೃಷಿ ಪರಿಕರಗಳನ್ನು ಮಾರಾಟ ಮಾಡುವ ಅಂಗಡಿಗಳು ಈಗಾಗಲೇ ವ್ಯಾಪಾರಕ್ಕೆ ಸಿದ್ದಗೊಂಡಿವೆ.

ಈ ಹಿಂದೆ ಹೋರಿಗಳನ್ನು ಕಟ್ಟುವ ರೈತರು ಮಾತ್ರ ಬಾರು ಕೋಲುಗಳನ್ನು ಖರೀದಿಸುತ್ತಿದ್ದರು. ಆದರೆ ಇತ್ತೀಚಿಗೆ ಜಾತ್ರೆಯಲ್ಲಿ ಬಣ್ಣ ಬಣ್ಣದ ಬಾರು ಕೋಲುಗಳನ್ನು ಖರೀದಿ ಮನೆಗೆ ಕೊಂಡೊಯ್ಯುವುದು ಶೋಕಿಯ ಸಂಗತಿಯಾಗಿದೆ. ಹಾಗಾಗಿ ಜಾತ್ರೆಗೆ ಬರುವ ಮಕ್ಕಳು,ಅದರಲ್ಲೂ ಯುವ ಸಮುದಾಯ ಬಾರು ಕೋಲುಗಳನ್ನು ಖರೀದಿಸಿ ಕೈಯಲ್ಲಿ ಹಿಡಿದುಕೊಂಡು ಒಡಾಡುವ ದೃಶ್ಯ ಸಾಮಾನ್ಯವಾಗಿದೆ. 

ಬರದ ಕರಿನೆರಳು:

ಸಾಮಾನ್ಯವಾಗಿ ಘಾಟಿ ಜಾತ್ರೆಯಲ್ಲಿ ರಾಸುಗಳ ಬೆಲೆ ಏರಿಕೆಯಾಗುವುದೇ ಉತ್ತರ ಕರ್ನಾಟಕ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕೆಲಸಕ್ಕೆ ಹೋರಿಗಳನ್ನು ಖರೀದಿಸಲು ಬರುವುದರಿಂದ. ಆದರೆ ಈ ಬರಿ ಉತ್ತರ-ದಕ್ಷಿಣ ಎನ್ನುವ ತಾರತಮ್ಯ ಇಲ್ಲದೆ ಇಡೀ ರಾಜ್ಯವನ್ನು ಬರ ಆವರಿಸಿದೆ. ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿದೆ. ಮೇವಿನ ಕೊರತೆಯು ರೈತರನ್ನು ಕಾಡುತ್ತಿದೆ. ಈ ಎಲ್ಲಾ ಸಮಸ್ಯೆಗಳ ನಡುವೆ ನಡೆಯುತ್ತಿರುವ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ರಾಸುಗಳ ಮಾರಾಟ ಹೇಗಿರಲಿದೆ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ. 

ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಜಾತ್ರೆಗೆ ಹೋರಿಗಳೊಂದಿಗೆ ಆಗಮಿಸುತ್ತಿರುವ ರೈತರು
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಜಾತ್ರೆಗೆ ಹೋರಿಗಳೊಂದಿಗೆ ಆಗಮಿಸುತ್ತಿರುವ ರೈತರು
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಭಾನುವಾರ ಬೆಳಿಗ್ಗೆ 8 ಗಂಟೆ ಸಮಯದಲ್ಲೂ ಡಿಸೆಂಬರ್‌ ಚಳಿಯ ಪ್ರಥಮ ಮಂಜು ಮುಸುಕಿದ್ದ ದೃಶ್ಯ
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಭಾನುವಾರ ಬೆಳಿಗ್ಗೆ 8 ಗಂಟೆ ಸಮಯದಲ್ಲೂ ಡಿಸೆಂಬರ್‌ ಚಳಿಯ ಪ್ರಥಮ ಮಂಜು ಮುಸುಕಿದ್ದ ದೃಶ್ಯ
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ರಾಸುಗಳ ಅಲಂಕಾರಿಕ ವಸ್ತುಗಳ ಅಂಗಡಿ ಮಳಿಗೆ
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ರಾಸುಗಳ ಅಲಂಕಾರಿಕ ವಸ್ತುಗಳ ಅಂಗಡಿ ಮಳಿಗೆ

ಮುಖ್ಯಾಂಶ  * ಜನವರಿ 16 ರಂದು ಸುಬ್ರಹ್ಮಣ್ಯ ರಥೋತ್ಸವ * ಡಿ.26ರಿಂದ ರಾಸುಗಳ ತುಂಬು ಜಾತ್ರೆ * ಜಾತ್ರೆಗೆ ಸಾವಿರಾರು ಜನ ಸೇರುವ ನಿರೀಕ್ಷೆ

ಹಳ್ಳಿಕಾರ್‌ ಅಮೃತ್‌ ಮಹಲ್‌ ಆಕರ್ಷಣೆ ಅಮೃತ್‌ ಮಹಲ್‌ ಹಳ್ಳಿಕಾರ್‌ ಸೇರಿದಂತೆ ಸ್ಥಳೀಯ ನಾಟಿ ಹೋರಿಗಳು ಪ್ರತಿ ಬಾರಿ ಘಾಟಿ ದನಗಳ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುತ್ತವೆ. ಅಮೃತ್‌ ಮಹಲ್‌ ಹಳ್ಳಿಕಾರ್‌ ಖರೀದಿಸುವ ಉದ್ದೇಶದಿಂದಲೇ  ಹೊರ ರಾಜ್ಯಗಳ ರೈತರು ಈ ಜಾತ್ರೆಗೆ ಬರುತ್ತಾರೆ. ತಮಿಳುನಾಡಿನ ಸೇಲಂ ಹೊಸೂರು ಮತ್ತು ಆಂಧ್ರಪ್ರದೇಶದ ಹಿಂದೂಪುರಅನಂತಪುರ ರೈತರ ಸಂಖ್ಯೆ ಹೆಚ್ಚಿರುತ್ತದೆ. ಈ ಹಿಂದಿನ ಜಾತ್ರೆಯಲ್ಲಿ ಒಂದು ಜೋಡಿ ಹೋರಿಯನ್ನು ₹1.75 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಈ ಬಾರಿ ಇದಕ್ಕಿಂತಲು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT