ಶುಕ್ರವಾರ, ಏಪ್ರಿಲ್ 16, 2021
31 °C

ಕುಡಿಯುವ ನೀರು, ಮೇವಿನ ಕೊರತೆ: ರೈತರ ಪರದಾಟ.

ವಡ್ಡನಹಳ್ಳಿ ಭೋಜ್ಯಾನಾಯ್ಕ್‌ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ : ಮುಂಗಾರು ವಾಡಿಕೆ ಮಳೆ ಸಕಾಲದಲ್ಲಿ ಬಾರದ ಹಿನ್ನಲೆಯಲ್ಲಿ ಕುಡಿಯುವ ನೀರಿನ ಜೊತೆಗೆ ಪಶುಗಳ ಮೇವಿನ ಕೊರತೆ ಹೆಚ್ಚುತ್ತಿದ್ದು ದಿಕ್ಕು ತೋಚದ ರೈತರು ಪರದಾಟ ನಡೆಸುವಂತಾಗಿದೆ.

‘ಜೂನ್ ಮೊದಲ ವಾರ ಮುಂಗಾರು ಮಳೆ ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಜುಲೈ 14 ಆದರೂ ಹನಿ ಮಳೆ ಸುರಿದಿಲ್ಲ. ಮಳೆ ಸುರಿದು ಅಲ್ಲಲ್ಲಿ ಹಸಿರು ಹುಲ್ಲು ಚಿಗುರಬೇಕಾದ ತಿಂಗಳಲ್ಲಿ ಬೇಸಿಗೆಯ ಬಿಸಿಲ ನಡುವೆ ವಿಪರೀತ ಗಾಳಿ ಬೀಸುತ್ತಿದೆ. ಒಣ ಮತ್ತು ಹಸಿ ಪಶು ಮೇವಿನ ದರ ದುಪ್ಪಟ್ಟು ಏರಿಕೆಯಾಗುತ್ತಿದೆ. ಕೆಲ ಪಶುಪಾಲಕರು ದಾಸ್ತಾನು ಮಾಡಿಕೊಂಡಿದ್ದಾರೆ. ಆದರೂ ಕೆಲವರು ಖರೀದಿಸಿ ಮೇವು ನೀಡಲೇಬೇಕು. ಬರ ನಿರ್ವಹಣೆಗೆ ನೀಡಿದ ಮೇವು ಕೇವಲ ಮೂರು ದಿನಗಳಿಗೆ ಆಗುವಷ್ಟು ಹೊರತುಪಡಿಸಿದರೆ ಬರ ನಿರ್ವಹಣೆ ಕೇವಲ ಕಾಟಾಚಾರಕ್ಕೆ ಸಿಮಿತವಾಗಿದೆ’ ಎಂಬುದು ರೈತ ವಲಯದಲ್ಲಿ ಕೇಳಿಬರುತ್ತಿರುವ ದೂರುಗಳು.

181 ಹಾಲು ಉತ್ಪಾದಕರ ಸಹಕಾರ ಸಂಘ ಹೊಂದಿರುವ ತಾಲ್ಲೂಕಿನಲ್ಲಿ 48 ಸಾವಿರ ಮಿಶ್ರ ನಾಟಿ ತಳಿಯ ಪಶುಗಳಿವೆ. 31,200 ಹಸುಗಳಿಂದ ಹಾಲು ಸಂಗ್ರಹವಾಗುತ್ತಿದೆ. ಹಾಲು ನೀಡುವ ಪಶುಗಳಿಗೆ ಒಂದು ದಿನಕ್ಕೆ ಒಣ ಮತ್ತು ಹಸಿ ಮೇವು ಸೇರಿ 18 ರಿಂದ 20 ಕೆ.ಜಿ. ಮೇವು ಬೇಕು. ಹಾಲು ನೀಡದೆ ಇರುವ ಹಸುಗಳಿಗೆ ಕನಿಷ್ಠ ಜೀವ ಉಳಿಸಿಕೊಳ್ಳಲು 6 ರಿಂದ 8 ಕೆ.ಜಿ.ಬೇಕು. ರಾಜ್ಯದಲ್ಲೇ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ತಾಲ್ಲೂಕಿನಲ್ಲಿ ಮೇವಿನ ಕೊರತೆ ಬಿಗಡಾಯಿಸುತ್ತಿದ್ದು ಪಶುಪಾಲಕರನ್ನು ಸಂಕಷ್ಟಕ್ಕೆ ದೂಡಿದೆ.

ಪ್ರತಿ 10 ಕೆ.ಜಿ ಒಣ ಮೇವಿಗೆ ₹ 150 ಬೆಲೆಯಿದೆ. ಒಂದು ಟ್ರ್ಯಾಕ್ಟರ್‌ ಲೋಡ್ ಮೇವಿನ ಬೆಲೆ ₹ 20 ಸಾವಿರದಿಂದ ರಿಂದ 25 ಸಾವಿರಕ್ಕೆ ಏರಿದೆ. ಬರ ನಿರ್ವಹಣೆ ನಿಭಾಯಿಸುವ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂಬುದು ಪಶುಪಾಲಕರ ಒತ್ತಾಯ.

48 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪುರಸಭೆ ವ್ಯಾಪ್ತಿಯಲ್ಲಿ 5 ರಿಂದ 7 ದಿನಗಳಿಗೊಮ್ಮೆ ಕೊಳಾಯಿಗಳಲ್ಲಿ ಪೂರೈಕೆಯಾಗುತ್ತಿದ್ದ ಕುಡಿಯುವ ನೀರು ಪ್ರಸ್ತುತ 14 ರಿಂದ 15 ದಿನಗಳಿಗೊಮ್ಮೆ ಏರಿಕೆಯಾಗಿದೆ. ನಗರದ ನಾಗರಿಕರಿಗೆ ಸಮರ್ಪಕವಾಗಿ ನೀರು ಪ್ರತಿನಿತ್ಯ ಪೂರೈಸಲು 20 ರಿಂದ 22 ಲಕ್ಷ ಲೀಟರ್ ನೀರು ಬೇಕು. ಪ್ರಸ್ತುತ 12 ರಿಂದ 14 ಲಕ್ಷ ಲೀಟರ್ ಮಾತ್ರ ಸಂಗ್ರಹ ಮಾಡಿ ಪೂರೈಕೆ ಮಾಡಲಾಗುತ್ತಿದೆ. ಕೊರೆಯಿಸಿರುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿಯುತ್ತಿದೆ. ಹತ್ತಾರು ಕೊಳವೆ ಬಾವಿಗಳಲ್ಲಿ ಕನಿಷ್ಠ ಐದು ಕೊಳವೆ ಬಾವಿಗಳು ಬತ್ತಿದರೂ ನೀರಿನ ಪೂರೈಕೆ ಕಷ್ಟವಾಗಲಿದೆ. ತುರ್ತು ಇರುವ ಕಡೆ ಟ್ಯಾಂಕರಿನ ಮೂಲಕ ಪೂರೈಕೆ ಮಾಡಲಾಗುತ್ತಿದೆ ಎನ್ನುತ್ತಾರೆ ಪುರಸಭೆ ಇಂಜಿನಿಯರ್ ಗಜೇಂದ್ರ.

‘ನಗರದ ಪ್ರಭಾವಿ ರಾಜಕೀಯ ಮುಖಂಡರು, ಸಂಘಸಂಸ್ಥೆಗಳ ಮುಖ್ಯಸ್ಥರು ತಮ್ಮ ಮನೆಗಳಿಗೆ ಮನಸೋ ಇಚ್ಚೆ ಕೊಳಾಯಿ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ಬಡಾವಣೆಯ ಭಾಗಗಳಿಗೆ ನೀರು ತಲುಪುವುದೇ ಇಲ್ಲ. ವಾರ್ಡ್ ಸದಸ್ಯರು, ಅಧಿಕಾರಿಗಳು ತಲೆ ಹಾಕಲ್ಲ ಎನ್ನುತ್ತಾರೆ’ 8ನೇ ವಾರ್ಡಿನ ಕೋಟೆ ಬೀದಿಯ ನಿವಾಸಿ ಯಶೋದಮ್ಮ.

‘ತಾಲ್ಲೂಕಿನಲ್ಲಿ ಈ ಹಿಂದೆ ಇದ್ದ 114 ಕೆರೆಗಳ ಪೈಕಿ ವಿಮಾನ ನಿಲ್ದಾಣಕ್ಕೆ ಭೂಮಿ ವಶಪಡಿಸಿಕೊಂಡ ನಂತರ 109 ಕೆರೆಗಳು ಮಾತ್ರ ಇದೆ. ಎರಡೂವರೆ ದಶಕಗಳಿಂದ ಯಾವುದೇ ಕೆರೆ ಕೋಡಿ ಹರಿದಿಲ್ಲ. ಕೆರೆಯಂಗಳದಲ್ಲಿ ಕೊಳವೆ ಬಾವಿ ಕೊರೆಯಿಸಿದರೂ ಅಲ್ಪ ಅವಧಿಯಲ್ಲಿ ಕೊಳವೆ ಬಾವಿ ಬತ್ತಿಹೋಗುತ್ತವೆ. ಕೆರೆಯಂಗಳದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಕೊಳವೆ ಬಾವಿ ನೀರನ್ನೆ ಜಾನುವಾರುಗಳಿಗೆ ಬಳಕೆ ಮಾಡಬೇಕು. ಸಕಾಲದಲ್ಲಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎನ್ನುತ್ತಾರೆ’ ಯರ್ತಿಗಾನಹಳ್ಳಿ ಶಿವಣ್ಣ.

ತಾಲ್ಲೂಕಿನಲ್ಲಿ ಕೃಷಿ ಮತ್ತು ವಾಣಿಜ್ಯ ಸೇರಿದಂತೆ ಒಟ್ಟು 20,103 ಕೊಳವೆ ಬಾವಿ ಪೈಕಿ 12,306 ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕವಿದೆ. ಈಪೈಕಿ 7,797 ಕೊಳವೆ ಬಾವಿ ನಿರುಪಯುಕ್ತ ಎಂದು ಸಂಪರ್ಕ ಕಡಿತ ಮಾಡಲಾಗಿದೆ’ ಎನ್ನುತ್ತಾರೆ ಬೆಸ್ಕಾಂ ಅಧಿಕಾರಿಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು