ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಡೆ ಒಡೆಯಲು ಕ್ರಷರ್‌’

ಬಿಜೆಪಿ ಹೇಳಿಕೆಗೆ ಸಚಿವ ಡಿ.ಕೆ ಶಿವಕುಮಾರ್ ತಿರುಗೇಟು
Last Updated 4 ಏಪ್ರಿಲ್ 2019, 17:00 IST
ಅಕ್ಷರ ಗಾತ್ರ

ಆನೇಕಲ್: ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ದೇಶ ಆರ್ಥಿಕವಾಗಿ ಅಭಿವೃದ್ಧಿಯಾಗಿಲ್ಲ. ಅಚ್ಛೇ ದಿನ್ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಬಿಜೆಪಿ ಶ್ರೀಮಂತ ಉದ್ಯಮಿಗಳಿಗೆ ಅಚ್ಛೇ ದಿನ ತಂದಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಟೀಕಿಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ರೋಡ್‌ ಷೋ ನಡೆಸಿ ಮತಯಾಚಿಸಿ ಮಾತನಾಡಿದರು.

ರೈತರ ಸಾಲಮನ್ನಾ ಮಾಡುವಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರ ತೋರಿದ ಆಸಕ್ತಿಯನ್ನು ಕೇಂದ್ರ ಸರ್ಕಾರ ತೋರಿಲ್ಲ. ರೈತಪರ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಸಾಲಮನ್ನಾ ಮಾಡಿಲ್ಲ ಎಂದರು.

ಬಡವರ ಕಲ್ಯಾಣಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರ ಕೆಲಸ ಮಾಡಿಲ್ಲ. ಬೆಲೆ ಏರಿಕೆ, ಸಾಂವಿಧಾನಿಕ ಸಂಸ್ಥೆಗಳು ದುರ್ಬಳಕೆ ಇವುಗಳೇ ಕೇಂದ್ರ ಸರ್ಕಾರದ ಸಾಧನೆಗಳಾಗಿವೆ. ಜನಪರ ಕಾಳಜಿಯಿಲ್ಲದ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠಕಲಿಸಬೇಕು ಎಂದರು.

‘ಸಹೋದರ ಪ್ರೇಮದಿಂದ ಪ್ರಚಾರಕ್ಕೆ ಬಂದಿಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಮತ ಕೇಳಲು ಬಂದಿದ್ದೇನೆ. ಅಭಿವೃದ್ಧಿಯೇ ನಮ್ಮ ಮೂಲಮಂತ್ರ. ಹಾಗಾಗಿ ಅಭಿವೃದ್ಧಿಗೆ ಮತ ನೀಡಬೇಕು. ತಾಲ್ಲೂಕಿಗೆ ಕಾವೇರಿ ನೀರು ಪೂರೈಕೆ, ರಸ್ತೆಗಳ ಅಭಿವೃದ್ಧಿ, ಹಕ್ಕುಪತ್ರಗಳ ವಿತರಣೆ ಸೇರಿದಂತೆ ಪ್ರತಿಗ್ರಾಮದಲ್ಲೂ ಡಿ.ಕೆ.ಸುರೇಶ್ ಅಭಿವೃದ್ಧಿ ಹೆಜ್ಜೆ ಗುರುತು ಮೂಡಿಸಿದ್ದಾರೆ. ಹಾಗಾಗಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿಯವರು ಢೋಂಗಿ ಹಿಂದೂವಾದಿಗಳು. ಚುನಾವಣೆಗೆ ಮಾತ್ರ ಹಿಂದುತ್ವ ಬಳಸುವ ಬಿಜೆಪಿ ಚುನಾವಣೆ ‌ನಂತರ ಎಲ್ಲವನ್ನು ಮರೆಯುತ್ತಾರೆ. ರಾಮಮಂದಿರ ನಿರ್ಮಾಣ ಭರವಸೆಯನ್ನು ಪ್ರತಿ ಚುನಾವಣೆಯಲ್ಲೂ ನೀಡಿ ಧರ್ಮ ರಾಜಕಾರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ದೂರಿದರು.

ಕಿಯೋನಿಕ್ಸ್ ಅಧ್ಯಕ್ಷ ಬಿ.ಶಿವಣ್ಣ ಮಾತನಾಡಿ, ಆನೇಕಲ್ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಧ್ಯೇಯ ಹೊಂದಿರುವ ಸಂಸದ ಡಿ.ಕೆ.ಸುರೇಶ್ ಅವರು ಲೋಕಸಭಾ ಚುನಾವಣೆಯಲ್ಲಿ 5ಲಕ್ಷಕ್ಕೂ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಪುರಸಭಾ ಅಧ್ಯಕ್ಷ ಪಿ.ಶಂಕರ್‌ಕುಮಾರ್, ಮಾಜಿ ಅಧ್ಯಕ್ಷ ಎನ್.ಸೋಮಶೇಖರರೆಡ್ಡಿ, ಸದಸ್ಯರಾದ ಎನ್.ಎಸ್.ಪದ್ಮಾನಾಭ್, ಲಕ್ಷ್ಮೀಕಾಂತರಾಜು, ಮೆಣಸಿಗನಹಳ್ಳಿ ರಘು ಇದ್ದರು.

ಮುಖಂಡರು ಅತ್ತಿಬೆಲೆ, ಚಂದಾಪುರ, ಹೆಬ್ಬಗೋಡಿಗಳಲ್ಲಿ ರೋಡ್‌ಷೋ ನಡೆಸಿ ಮತಯಾಚಿಸಿದರು.

ಭಿನ್ನಾಪ್ರಾಯ ಶಮನ
ಬಿಜೆಪಿ ಅಭ್ಯರ್ಥಿ ಅಶ್ವಥ್‌ನಾರಾಯಣ್ ಕನಕಪುರದಲ್ಲಿ ಬಂಡೆ ಒಡೆಯಲು ಬಂದಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಬರುವುದಾದರೆ ಸ್ವಾಗತ. ಅವರಿಗೆ ಒಂದು ಜಲ್ಲಿ ಕ್ರಷರ್ ಹಾಗೂ ಬಂಡೆಗಳನ್ನು ನೀಡುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

‘ಮಂಡ್ಯ ಲೋಕಸಭಾ ಚುನಾವಣೆ ಸಂಬಂಧ ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ತಾವು ಜಂಟಿ ಪ್ರಚಾರಕ್ಕೆ ಹೋಗುತ್ತಿದ್ದೇವೆ. ಸಣ್ಣಪುಟ್ಟ ಭಿನ್ನಮತ ಶಮನಗೊಳಿಸಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಭಾರಿ ಅಂತರದಿಂದ ಗೆಲ್ಲಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT